ಬೆಂಗಳೂರು ವಿಶ್ವವಿದ್ಯಾಲಯ ಮಾಡಿರುವ ಎಡವಟ್ಟಿನಿಂದ ವಿವಿಧ ಸಂಯೋಜಿತ ಕಾಲೇಜುಗಳಲ್ಲಿನ 400 ಮಂದಿ ಎಂ.ಕಾಂ. ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್‌ ಪರೀಕ್ಷೆ ಫಲಿತಾಂಶದಲ್ಲಿ ಅನುತ್ತೀರ್ಣರಾಗಿರುವ ಆರೋಪ ಕೇಳಿಬಂದಿದೆ. ಇದು ಮಕ್ಕಳನ್ನು ತೀವ್ರ ಆತಂಕ, ಆಕ್ರೋಶಕ್ಕೆ ಗುರಿಯಾಗಿದೆ.

ಲಿಂಗರಾಜು ಕೋರಾ

ಬೆಳಗಾವಿ : ಬೆಂಗಳೂರು ವಿಶ್ವವಿದ್ಯಾಲಯ ಮಾಡಿರುವ ಎಡವಟ್ಟಿನಿಂದ ವಿವಿಧ ಸಂಯೋಜಿತ ಕಾಲೇಜುಗಳಲ್ಲಿನ 400 ಮಂದಿ ಎಂ.ಕಾಂ. ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್‌ ಪರೀಕ್ಷೆ ಫಲಿತಾಂಶದಲ್ಲಿ ಅನುತ್ತೀರ್ಣರಾಗಿರುವ ಆರೋಪ ಕೇಳಿಬಂದಿದೆ. ಇದು ಮಕ್ಕಳನ್ನು ತೀವ್ರ ಆತಂಕ, ಆಕ್ರೋಶಕ್ಕೆ ಗುರಿಯಾಗಿದೆ.

ವಾಣಿಜ್ಯ ಅಧ್ಯಯನ ಕೇಂದ್ರ ವಿಭಾಗವು ನೀಡಿರುವ ಬೆಂ.ವಿವಿಯ ಸಂಯೋಜಿತ ಕಾಲೇಜುಗಳ ಎಂ.ಕಾಂ ವಿದ್ಯಾರ್ಥಿಗಳ ಡೆಸರ್ಟೇಷನ್‌ (ಪ್ರಾಜೆಕ್ಟ್‌ ವರ್ಕ್‌) ಮತ್ತು ವೈವಾ ಗೆ ಸಂಬಂಧಿಸಿದ ಫಲಿತಾಂಶವನ್ನು ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ(ಯುಯುಸಿಎಂಎಸ್‌) ಫೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವಾಗ ಪರೀಕ್ಷಾ ವಿಭಾಗವು ತಪ್ಪಾಗಿ ನಮೂದಿಸಿರುವುದೇ ಈ ಎಡವಟ್ಟಿಗೆ ಕಾರಣ ಎಂದು ತಿಳಿದು ಬಂದಿದೆ. ಇದರಿಂದ ತಮ್ಮದಲ್ಲದ ತಪ್ಪಿಗೆ ಸುಮಾರು 400 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ತೀವ್ರ ಸಮಸ್ಯೆ ಸೃಷ್ಟಿಸಿದೆ.

ಇದು, ಬರೀ ಸಂಯೋಜಿತ ಕಾಲೇಜು ವಿದ್ಯಾರ್ಥಿಗಳಿಗೆ ಎದುರಾಗಿರುವ ಸಮಸ್ಯೆ ಮಾತ್ರವಲ್ಲ, ಸ್ವತಃ ಬೆಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಂ.ಕಾಂ. ವಿದ್ಯಾರ್ಥಿಗಳ ಫಲಿತಾಂಶವನ್ನೂ ವಾಣಿಜ್ಯ ಕೇಂದ್ರದಿಂದ ತಪ್ಪಾಗಿ ನಮೂದಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಯಮಾನುಸಾರ ಸಂಯೋಜಿತ ಕಾಲೇಜು ವಿದ್ಯಾರ್ಥಿಗಳಿಗೂ ವಿವಿಯೇ ಪರೀಕ್ಷೆ ನಡೆಸಿ, ಮೌಲ್ಯಮಾಪನ ಮಾಡುತ್ತದೆ. ಬಳಿಕ ಫಲಿತಾಂಶವನ್ನು ಯುಯುಸಿಎಂಎಸ್‌ನಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರಿಕೆಯಿಂದ ಅಪ್‌ಲೋಡ್‌ ಮಾಡುವುದು ಆಯಾ ವಿಭಾಗಗಳ ಮುಖ್ಯಸ್ಥರ ಜವಾಬ್ದಾರಿ. ಆದರೆ, ವಾಣಿಜ್ಯ ವಿಭಾಗದ ಫಲಿತಾಂಶವನ್ನು ಅಪ್‌ ಲೋಡ್‌ ಮಾಡುವಾಗ ಡೆಸರ್ಟೇಷನ್‌ ಮತ್ತು ವೈವಾ ಅಂಕಗಳನ್ನು ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿಯ ಅಂಕಗಳನ್ನು ಅಪ್‌ಲೋಡ್‌ ಮಾಡಲಾಗಿದೆ ಎನ್ನುತ್ತವೆ ವಿವಿಧ ಕಾಲೇಜುಗಳ ಅಧ್ಯಾಪಕ ಹಾಗೂ ಆಡಳಿತ ಮಂಡಳಿ ಮೂಲಗಳು. ಇದರಿಂದ ಪಾಸಾಗಬೇಕಿರುವ 400 ಮಕ್ಕಳೂ ಫೇಲಾಗಿದ್ದಾರೆ.

ಯಾವ್ಯಾವ ಕಾಲೇಜುಗಳು:

ಲಭ್ಯ ಮಾಹಿತಿ ಪ್ರಕಾರ, ಜಿ.ಟಿ.ಕಾಲೇಜು, ಬಿಜಿಎಸ್‌ಬಿ ಸ್ಕೂಲ್‌ ಕಾಲೇಜು, ಸೆಂಟ್‌ ಕ್ಲಾರೆಟ್‌ ಕಾಲೇಜು, ಶ್ರೀ ವೇದಾ ಕಾಲೇಜು, ಸೌಂದರ್ಯ ಕಾಲೇಜು ಸೇರಿ ಇನ್ನು ಕೆಲ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಅನುತ್ತೀರ್ಣದ ಆತಂಕದಲ್ಲಿದ್ದಾರೆ. ಇಲ್ಲಿ ವಿಭಾಗವು ಸರಿಯಾಗಿ ಫಲಿತಾಂಶ ನೀಡಿಲ್ಲವಾ ಅಥವಾ ಪರೀಕ್ಷಾ ವಿಭಾಗ ತಪ್ಪಾಗಿ ಅಂಕಗಳನ್ನು ಅಪ್‌ಲೋಡ್‌ ಮಾಡಿದೆಯಾ ಎನ್ನುವುದು ತನಿಖೆಯಿಂದ ಹೊರಬರಬೇಕಿದೆ.

ಬಾಯಿಬಿಟ್ಟರೆ ಸಂಯೋಜನೆ ರದ್ದು ಬೆದರಿಕೆ

ಇನ್ನು ವಿವಿಯಿಂದ ಆಗಿರುವ ಲೋಪದ ಬಗ್ಗೆ ವಿವಿಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ತಾತ್ಸಾರದ ಉತ್ತರ ನೀಡುತ್ತಿದ್ದು, ಇದು ನಮ್ಮ ತಪ್ಪಲ್ಲ. ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿದೆ. ಪರಿಶೀಲಿಸಿ ಸರಿಪಡಿಸಲಾಗುವುದು. ಈ ವಿಷಯವನ್ನು ಯಾರಿಗೂ ಬಹಿರಂಗಪಡಿಸಬಾರದು. ಬಹಿರಂಗಪಡಿಸಿದರೆ ನಿಮ್ಮ ಕಾಲೇಜಿನ ಸಂಯೋಜನೆಯನ್ನೇ ರದ್ದು ಮಾಡಬೇಕಾಗುತ್ತದೆ ಎಂಬ ಬೆದರಿಕೆ ಹಾಕುತ್ತಿರುವುದಾಗಿ ಮೂಲಗಳು ತಿಳಿಸಿವೆ.

ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿರಬಹುದು. ಕೆಲವೊಮ್ಮೆ ಕಾಲೇಜುಗಳು ಸರಿಯಾಗಿ ವಿದ್ಯಾರ್ಥಿಗಳ ಹಾಜರಾತಿ, ಡೆಸರ್ಟೇಶನ್ ಮತ್ತು ವೈವಾ ಮಾಹಿತಿಯನ್ನು ಸಮರ್ಪಕವಾಗಿ ವಿಶ್ವವಿದ್ಯಾಲಯಕ್ಕೆ ನೀಡದೆ ಹೋದಾಗಲೂ ಈ ರೀತಿಯ ಸಮಸ್ಯೆ ಆಗುತ್ತದೆ. 400 ಸಂಖ್ಯೆಯಷ್ಟು ಮಕ್ಕಳಿಗೆ ಸಮಸ್ಯೆ ಆಗಿರುವ ಸಾಧ್ಯತೆ ಕಡಿಮೆ. ಯಾವ ಕಾರಣಕ್ಕೆ ಈ ರೀತಿ ಸಮಸ್ಯೆ ಆಗಿದೆ ಎಂದು ಪರಿಶೀಲಿಸಲಾಗುವುದು. ಕಾಲೇಜಿನ ಪ್ರಾಂಶುಪಾಲರು ಮತ್ತು ವಿಭಾಗದ ಮುಖ್ಯಸ್ಥರು ಯುಯುಸಿಎಂಎಸ್‌ ಪೋರ್ಟಲ್‌ನಲ್ಲಿ ಫಲಿತಾಂಶ ಪರಿಷ್ಕರಣೆಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಇದಕ್ಕೆ 10ರಿಂದ 15 ದಿನ ಆಗಬಹುದು. ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ.

-ಚಂದ್ರಕಾಂತ್‌, ಕುಲಸಚಿವ (ಮೌಲ್ಯಮಾಪನ), ಬೆಂಗಳೂರು ವಿವಿ