ಬೆಂಗಳೂರು(ಜು.17):  ಕೊರೋನಾದಿಂದ ಕೆಲಸವಿಲ್ಲದೆ ಅಥವಾ ಆದಾಯ ಕತ್ತರಿಯಿಂದ ಪೋಷಕರು ಪರದಾಡುತ್ತಿರುವ ಸಂದರ್ಭದಲ್ಲಿಯೂ ಖಾಸಗಿ ಶಾಲೆಗಳು ಶುಲ್ಕ ಪಾವತಿಗೆ ಒತ್ತಡ ಹಾಕುತ್ತಿವೆ. ಒಂದು ವೇಳೆ ಶುಲ್ಕ ಪಾವತಿಸದಿದ್ದರೆ ತಮ್ಮ ಮಕ್ಕಳನ್ನು ಶಾಲೆಯಿಂದ ಹೊರದೂಡಲಾಗುತ್ತಿದೆ ಎಂಬ ಬೆದರಿಕೆ ಹಾಕುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇಂತಹ ತುರ್ತು ಪರಿಸ್ಥಿತಿಯಲ್ಲಿಯೂ ಪೋಷಕರ ಜೀವ ಹಿಂಡುತ್ತಿರುವ ಖಾಸಗಿ ಶಾಲೆಗಳು, ಮಾನವೀಯತೆ ಮರೆತು ಆನ್‌ಲೈನ್‌ ತರಗತಿ ಹೆಸರಿನಲ್ಲಿ ಶುಲ್ಕಕ್ಕಾಗಿ ಪೋಷಕರನ್ನು ದಿನಂಪ್ರತಿ ಪೀಡಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಫೀಸ್ ಕಟ್ಟಿ, ಇಲ್ಲ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ; ಖಾಸಗಿ ಶಾಲೆಯ ಒತ್ತಡ

ಆರ್‌ಟಿಇ ಮಕ್ಕಳಿಗೂ ಶುಲ್ಕ: 

ಆರ್‌ಟಿಇ (ಶೈಕ್ಷಣಿಕ ಹಕ್ಕು) ಮಕ್ಕಳಿಗೆ ಈ ಬಾರಿ ಸರ್ಕಾರ ಪಠ್ಯಪುಸ್ತಕಗಳನ್ನು ವಿತರಿಸಿಲ್ಲ. ಆದ್ದರಿಂದ ಆರ್‌ಟಿಇ ಮಕ್ಕಳು ಕೂಡ ಪಠ್ಯಪುಸ್ತಕದ ಜೊತೆಗೆ ಇನ್ನಿತರ ಶುಲ್ಕವನ್ನು ಪಾವತಿಸಬೇಕು ಎಂದು ಸೂಚಿಸುತ್ತಿವೆ. ಆರ್‌ಟಿಇ ಅಡಿ ಸೀಟು ಪಡೆದಿರುವ ಪೋಷಕರು ಸಾವಿರಾರು ರು.ಗಳ ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ಆನ್‌ಲೈನ್‌ ಹೆಸರಿನಲ್ಲಿಯೂ ಶುಲ್ಕ ಪಾವತಿಗೆ ಒತ್ತಡ ಹೇರುತ್ತಿವೆ. ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಪೋಷಕರೊಬ್ಬರು ಸಮಸ್ಯೆ ತಿಳಿಸಿದ್ದಾರೆ.

1000ಕ್ಕೂ ಹೆಚ್ಚು ದೂರು ಬಂದರೂ ಕ್ರಮವಿಲ್ಲ

ರಾಜ್ಯದಲ್ಲಿ ಈ ವರೆಗೆ ಆನ್‌ಲೈನ್‌ ತರಗತಿ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿ ಒಂದು ಸಾವಿರಕ್ಕೂ ಹೆಚ್ಚಿನ ದೂರುಗಳು ಬಂದಿವೆ. ಆದರೆ, ಯಾವುದೇ ಶಾಲೆಯ ವಿರುದ್ಧ ಕ್ರಮ ಕೈಗೊಂಡಿರುವ ಉದಾಹರಣೆಗಳಿಲ್ಲ.
350ಕ್ಕೂ ಹೆಚ್ಚಿನ ಶಾಲೆಗಳ ವಿರುದ್ಧದ ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನುಳಿದ ಶಾಲೆಗಳ ಪ್ರಕರಣಗಳು ಹಾಗೆ ಉಳಿದಿವೆ. ಶುಲ್ಕ ಪಾವತಿಸುವಂತೆ ಪೋಷಕರ ಮೇಲೆ ಒತ್ತಡ ಹೇರುವ ಶಾಲೆಗಳ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಿದೆಯೇ ಹೊರತು, ಇಲ್ಲಿಯವರೆಗೂ ಯಾವುದೇ ಶಾಲೆಯ ಪರವಾನಗಿ ರದ್ದುಗೊಳಿಸಿಲ್ಲ. ಅಧಿಕಾರಿಗಳು ಕೂಡ ಯಾವುದೇ ಶಾಲೆಗಳ ವಿರುದ್ಧವೂ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ. ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರ್ಕಾರದ ಆದೇಶಗಳು ಕಾಗದದಲ್ಲಿಯೇ ಉಳಿದಿವೆ. ಕಾರ್ಯರೂಪಕ್ಕೆ ಬರುತ್ತಿಲ್ಲ’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.