ಬೆಂಗಳೂರು, (ಜುಲೈ.15): ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ವಿದ್ಯಾರ್ಥಿಗಳಿಗೆ 26 ಗ್ರೇಸ್ ಮಾರ್ಕ್ಸ್ ನೀಡಿರುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಸಂದೇಶ ಹರಿಬಿಡಲಾಗಿದೆ.

ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. 

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2020: ರಾಜ್ಯಕ್ಕೆ ಇವರೇ ಟಾಪರ್ಸ್..!

ಮಂಗಳವಾರ  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ಘೋಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸಚಿವರ ಹೆಸರಿನ ನಕಲಿ ಟ್ವಿಟರ್ ಖಾತೆಯಲ್ಲಿ 'ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳಿಗೆ 26 ಗ್ರೇಸ್ ಅಂಕಗಳನ್ನು ನೀಡುವ ಕುರಿತು ಮೌಲ್ಯಮಾಪಕರಿಗೆ ಸೂಚಿಸಲಾಗಿದೆ' ಎಂಬ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸೈಬರ್ ಕ್ರೈಂ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಜೂ.18ರಂದು ನಡೆದಿದ್ದು, ರಾಜ್ಯದ 20 ಮೌಲ್ಯಮಾಪನ ಕೇಂದ್ರದಲ್ಲಿಜೂ. 20ರಿಂದ ಜು. 7ರವರಗೆ ನಡೆದಿದ್ದು, ಜು. 14ರಂದು ಫಲಿತಾಂಶ ಪ್ರಕಟಿಸಲಾಗಿದೆ.

ದೂರಿನ ಜೊತೆ ನಕಲಿ ಟ್ವಿಟರ್ ಖಾತೆಯಲ್ಲಿ ಹರಿಯಬಿಟ್ಟ ಸಂದೇಶದ ಪ್ರತಿಯನ್ನು ಲಗತ್ತಿಸಿದ್ದು, ಈ ನಕಲಿ ಸಂದೇಶದಿಂದ ರಾಜ್ಯದ ಪಿಯು ವಿದ್ಯಾರ್ಥಿಗಳು, ಪೋಷಕರು, ಇಲಾಖೆಯ ಅಧಿಕಾರಿಗಳಲ್ಲಿ ಆತಂಕ, ಗೊಂದಲಗಳಿಗೆ ಕಾರಣವಾಗಿದ್ದು, ಇದು ಇಲಾಖೆಗೆ ಮುಜುಗರದ ಸನ್ನಿವೇಶವನ್ನು ಸೃಷ್ಟಿಸಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹೆಸರಿನಲ್ಲಿ ನಕಲಿ ಖಾತೆ ತೆರೆದು ಇಲಾಖೆಗೆ ಮುಜುಗರ ತರುವಂತಹ ಸಂದೇಶ ಹರಿಯಬಿಟ್ಟ ಕಿಡಿಗೇಡಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.