ಬೆಂಗಳೂರು, (ಜೂನ್.26): ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕೇಂದ್ರ ಬದಲಾವಣೆಗೆ ಅವಕಾಶ ಕೊಡಲಾಗಿದೆ.

 ಸಿಇಟಿ- 2020ಯನ್ನು ಇದೇ ಜುಲೈ 30 ಮತ್ತು 31ರಂದು ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂದಿನಿಂದ ಅಂದ್ರೆ ಜೂನ್.26ರಿಂದ ಜೂ.29ರವರೆಗೆ ಹೊರನಾಡು, ಗಡಿನಾಡ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ ನೀಡಿದೆ.

ಕರ್ನಾಟಕ ಸಿಇಟಿ ಪರೀಕ್ಷೆ 2020: ವೇಳಾಪಟ್ಟಿ ಪ್ರಕಟ

 ಈ ಬಗ್ಗೆ ಇಂದು (ಶುಕ್ರವಾರ) ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಈ ಮೊದಲು ಬೆಂಗಳೂರು ಕೇಂದ್ರದಲ್ಲಿ ಮಾತ್ರ ಸಿಇಟಿ & ಕನ್ನಡ ಭಾಷೆ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಲಾಗಿತ್ತು. ಇದೀಗ ಕೊರೋನಾ ಭೀತಿ ಹಿನ್ನೆಲೆ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

ಅಷ್ಟೇ ಅಲ್ಲದೇ ವಿದ್ಯಾರ್ಥಿಗಳ ಮನವಿ ಮೇರೆಗೆ ಹೊಸ ಪರೀಕ್ಷಾ ಕೇಂದ್ರವಾಗಿ ರಬಕವಿ ಬನಹಟ್ಟಿ ತಾಲೂಕು ಸೇರ್ಪಡೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಮೂಲಕ ಮಾಹಿತಿ ಕೊಟ್ಟಿದೆ. 

ಪ್ರಾಧಿಕಾರದ ವೆಬ್‌ಸೈಟ್‌  kea.Kar.nic.in ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಸ್ಥಳಗಳನ್ನು ಪ್ರಕಟಿಸಲಾಗಿದೆ. ಪಟ್ಟಿಯನ್ನು ನೋಡಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಬದಲಾಯಿಸಿಕೊಳ್ಳಬಹುದು. ಆದ್ಯತೆ ಮೇರೆಗೆ ಪರೀಕ್ಷಾ ಕೇಂದ್ರ ಬದಲಾಯಿಸಲಾಗುತ್ತದೆ.