5ನೇ ತರಗತಿವರೆಗೆ ಆನ್‌ಲೈನ್‌ ಕ್ಲಾಸಿಲ್ಲ!| ರಾಜ್ಯ ಸರ್ಕಾರ ಮಹತ್ವದ ನಿರ್ಧಾರ| 6ರಿಂದ 10ರವರೆಗಿನ ಆನ್ಲೈನ್‌ ಕ್ಲಾಸ್‌ ಬಗ್ಗೆ ನಿರ್ಧಾರಕ್ಕೆ ತಜ್ಞರ ಸಮಿತಿ| 10 ದಿನದಲ್ಲಿ ವರದಿ| ಅಲ್ಲಿಯವರೆಗೂ ಆನ್‌ಲೈನ್‌ ಕ್ಲಾಸ್‌ಗೆ ನಿಷೇಧ| ಆನ್‌ಲೈನ್‌ ಕ್ಲಾಸ್‌ಗೆ ಶುಲ್ಕ ಪಡೆವಂತಿಲ್ಲ

ಬೆಂಗಳೂರು(ಜೂ.11): ಎಲ್‌ಕೆಜಿಯಿಂದ ಐದನೇ ತರಗತಿವರೆಗೆ ಆನ್‌ಲೈನ್‌ ತರಗತಿ ರದ್ದು. 6ರಿಂದ 10ನೇ ತರಗತಿವರೆಗೆ ಆನ್‌ಲೈನ್‌ ತರಗತಿ ಹೇಗೆ ನಡೆಸಬೇಕು ಎಂಬ ಬಗ್ಗೆ ತಜ್ಞರ ವರದಿ ಪಡೆಯಲು ತೀರ್ಮಾನ. ತಜ್ಞರು ವರದಿ ಪಡೆದು ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುವವರೆಗೆ ಈ ತರಗತಿಗಳಿಗೂ ಆನ್‌ಲೈನ್‌ ಕ್ಲಾಸ್‌ ನಡೆಸುವಂತಿಲ್ಲ ಮತ್ತು ಆನ್‌ಲೈನ್‌ ಕ್ಲಾಸ್‌ ನೆಪದಲ್ಲಿ ಶುಲ್ಕ ಸಂಗ್ರಹಿಸುವಂತಿಲ್ಲ.

ಆನ್‌ಲೈನ್‌ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬುಧವಾರ ನಾಡಿನ ಹಿರಿಯ ಶಿಕ್ಷಣ ತಜ್ಞರು, ಮಾನಸಿಕ ಆರೋಗ್ಯ ವಿಭಾಗದ ಪರಿಣತರು, ಖಾಸಗಿ ವಿದ್ಯಾಸಂಸ್ಥೆಗಳ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಶೈಕ್ಷಣಿಕ ಸುಧಾರಣೆ ವಿಷಯದ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸುದೀರ್ಘ ಸಮಾಲೋಚನೆ ನಂತರ ರಾಜ್ಯ ಸರ್ಕಾರ ಈ ನಿರ್ದೇಶನಗಳನ್ನು ಶಾಲೆಗಳಿಗೆ ನೀಡಿದೆ.

17 ಹೊಸ ಪಾಸಿಟಿವ್‌ ಕೇಸ್‌: ದಾವಣಗೆರೆಯಲ್ಲಿ 47ಕ್ಕೇರಿದ ಸೋಂಕಿತರ ಸಂಖ್ಯೆ

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌, ಎಲ್‌ಕೆಜಿ, ಯುಕೆಜಿ ಮತ್ತು 1ರಿಂದ 5ನೇ ತರಗತಿವರೆಗೆ ಮಕ್ಕಳಿಗೆ ಆನ್‌ಲೈನ್‌ ಕಲಿಕೆ ಮಾರಕವಾಗಿದೆ. ಸಿಬಿಎಸ್‌ಇ, ಐಸಿಎಸ್‌ಇ ಮತ್ತು ರಾಜ್ಯ ಪಠ್ಯಕ್ರಮ ಸೇರಿದಂತೆ ಎಲ್ಲಾ ರೀತಿಯ ಖಾಸಗಿ ಶಿಕ್ಷಣ ಸಂಸ್ಥೆಗಳು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸಬಾರದು ಮತ್ತು ಆನ್‌ಲೈನ್‌ ತರಗತಿ ಹೆಸರಿನಲ್ಲಿ ಶುಲ್ಕವನ್ನು ಕೂಡ ಸಂಗ್ರಹಿಸಬಾರದು. ಒಂದು ವೇಳೆ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದ್ದರೆ ಕೂಡಲೇ ಸ್ಥಗಿತಗೊಳಿಸಬೇಕು. ಸ್ಥಗಿತಗೊಳಿಸದ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

10 ದಿನದಲ್ಲಿ ತಜ್ಞರ ವರದಿ:

6ರಿಂದ 10ನೇ ತರಗತಿಗಳಲ್ಲಿ ಆನ್‌ಲೈನ್‌ ತರಗತಿ ಸಾಧಕ-ಬಾಧಕ ಪರಾಮರ್ಶಿಸಲು ಹಾಗೂ ಒಂದು ವೇಳೆ ಆನ್‌ಲೈನ್‌ ತರಗತಿ ನಡೆಸಲೇಬೇಕಾದರೆ ಅದು ಹೇಗಿರಬೇಕು ಎಂಬ ಮಾರ್ಗಸೂಚಿ ನೀಡಲು ಹಿರಿಯ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಪ್ರೊ.ಎಂ.ಕೆ. ಶ್ರೀಧರ್‌ ನೇತೃತ್ವದ ತಂಡದಲ್ಲಿ ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಗುರುರಾಜ ಕರ್ಜಗಿ, ಡಾ.ವಿ.ಪಿ. ನಿರಂಜನಾರಾಧ್ಯ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಪ್ರತಿನಿಧಿಗಳಾದ ಹೃಷಿಕೇಶ್‌, ನಿಮ್ಹಾನ್ಸ್‌ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರು, ಅರ್ಲಿ ಚೈಲ್ಡ್‌ಹುಡ್‌ ಸಂಘಟನೆಯ ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮಿತಿಯಲ್ಲಿ ಇದ್ದಾರೆ. ಸಮಿತಿಯು ಹತ್ತು ದಿನಗಳಲ್ಲಿ ವರದಿ ನೀಡಲಿದೆ ಎಂದು ತಿಳಿಸಿದರು.

ಆನ್‌ಲೈನ್‌ ಕ್ಲಾಸ್‌ನಿಂದ ಮಕ್ಕಳು ಶಾಲೆ ತೊರೆವ ಭೀತಿ!

ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಿಕೊಳ್ಳಬೇಕು, ರಜಾ ಅವಧಿಯಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ಹೇಗೆ ತಂತ್ರಜ್ಞಾನ ಬಳಸಿಕೊಳ್ಳಬೇಕು ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿ/ ಪೋಷಕರ ಸಾಮಾಜಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಹೇಗೆ ಬಳಸಿಕೊಳ್ಳಬೇಕು ಎಂಬುದು ಸೇರಿದಂತೆ ಆನ್‌ಲೈನ್‌ ತರಗತಿಗಳು ಹೇಗಿರಬೇಕು ಎಂಬ ಮಾರ್ಗಸೂಚಿ ರೂಪಿಸುವಂತೆ ಈ ಸಮಿತಿಗೆ ಸರ್ಕಾರ ನಿರ್ದೇಶಿಸಿದೆ ಎಂದರು.

ಜುಲೈನಲ್ಲಿ ಪೂರಕ ಪರೀಕ್ಷೆ:

ಈಗಾಗಲೇ ನಿಗದಿಯಾಗಿರುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಜೂ.25ರಿಂದ ನಡೆಯಲಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ಪೂರಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಆ.15ರ ಬಳಿಕವಷ್ಟೇ ಶಾಲೆ ಶುರು, ಜುಲೈನಲ್ಲಿ ಇಲ್ಲ

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಜುಲೈನಲ್ಲಿ ಶಾಲೆ ಆರಂಭಿಸುವುದಿಲ್ಲ. ಆಗಸ್ಟ್‌ ನಂತರವೇ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಸದ್ಯ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಆ.15ರ ನಂತರ ಶಾಲೆಗಳನ್ನು ಆರಂಭಿಸುವ ಸೂಚನೆ ನೀಡಿದೆ. ಅದರಂತೆಯೇ ರಾಜ್ಯದಲ್ಲಿಯೂ ಶಾಲೆಗಳನ್ನು ಆರಂಭಿಸಲಾಗುತ್ತದೆ. ಸದ್ಯಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ರಾಜ್ಯದ 90 ಲಕ್ಷ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ, ಶಿಕ್ಷಣ ತಜ್ಞರು, ಪೋಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಿಯೇ ಶಾಲೆ ಆರಂಭಿಸಲಾಗುತ್ತದೆ. ತರಾತುರಿ ಮಾಡಲ್ಲ ಎಂದಿದ್ದಾರೆ.

ಎಲ್‌ಕೆಜಿ, ಯುಕೆಜಿ ಯಾವುದೇ ಕಾರಣಕ್ಕೆ ಆರಂಭಿಸುವುದಿಲ್ಲ: ಸುರೇಶ್‌ ಕುಮಾರ್‌!

ಶುಲ್ಕ ಹೆಚ್ಚಿಸಿದರೆ ಶಾಲೆ ವಿರುದ್ಧ ಕ್ರಮ

ಮುಂಬರುವ ಶೈಕ್ಷಣಿಕ ಸಾಲಿಗೆ ಬೋಧನಾ ಶುಲ್ಕವನ್ನು ಹೆಚ್ಚಳ ಮಾಡಬಾರದು ಈಗಾಗಲೇ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಇಲಾಖೆಯ ಆದೇಶವನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಒಂದು ಸಾವಿರಕ್ಕೂ ಹೆಚ್ಚಿನ ದೂರುಗಳು ಬಂದಿದ್ದವು. 350ಕ್ಕೂ ಹೆಚ್ಚಿನ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಶುಲ್ಕ ಹೆಚ್ಚಳ ಬಗ್ಗೆ ದೂರು ಬಂದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.