ನವದೆಹಲಿ(ಜೂ.08): ಕೊರೋನಾ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೂಲಕವೇ ಪಠ್ಯ ಬೋಧಿಸಲು ಶಾಲೆಗಳು ಪ್ರಯತ್ನ ಆರಂಭಿಸಿರುವಾಗಲೇ, ಅದಕ್ಕೆ ಹಿನ್ನಡೆಯಾಗುವಂತಹ ಮಾಹಿತಿಯೊಂದು ಲಭ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.85ರಷ್ಟುಜನರು ಇಂಟರ್ನೆಟ್‌ ಸಂಪರ್ಕದಿಂದ ವಂಚಿತರಾಗಿದ್ದಾರೆ. ನಗರವಾಸಿಗಳಲ್ಲಿ ಶೇ.58ರಷ್ಟುಮಂದಿ ಇಂಟರ್ನೆಟ್‌ನಿಂದ ದೂರವೇ ಉಳಿದಿದ್ದಾರೆ ಎಂಬ ಸಂಗತಿ ಸರ್ಕಾರವೇ ನಡೆಸಿದ್ದ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

ಶಾಲಾ-ಕಾಲೇಜು ಪ್ರಾರಂಭ ಯಾವಾಗ? ದಿನಾಂಕ ಪ್ರಕಟಿಸಿದ ಕೇಂದ್ರ ಸಚಿವ

2017-18ನೇ ಸಾಲಿನ ರಾಷ್ಟ್ರೀಯ ಮಾದರಿ ಸರ್ವೇ ಪ್ರಕಾರ, ಹಳ್ಳಿ ಜನರಲ್ಲಿ ಶೇ.15ರಷ್ಟುಮಂದಿಗೆ ಹಾಗೂ ನಗರಪ್ರದೇಶಗಳಲ್ಲಿ ಶೇ.42ರಷ್ಟುಮಂದಿಗೆ ಇಂಟರ್ನೆಟ್‌ ಸಂಪರ್ಕವಿದೆ. ಹೀಗಾಗಿ ಶಾಲೆಗಳು ಆನ್‌ಲೈನ್‌ ಶಿಕ್ಷಣ ನಡೆಸಿದರೆ ಇಂಟರ್ನೆಟ್‌ ಸಂಪರ್ಕ ಹೊಂದಿಲ್ಲದ ಮಕ್ಕಳ ಕತೆ ಏನು ಎಂದು ಶಿಕ್ಷಣ ತಜ್ಞರು ಪ್ರಶ್ನಿಸುತ್ತಿದ್ದಾರೆ. ದೇಶದಲ್ಲಿ 35 ಕೋಟಿ ವಿದ್ಯಾರ್ಥಿಗಳು ಇದ್ದಾರೆ. ಆ ಪೈಕಿ ಎಷ್ಟುಮಂದಿಗೆ ಇಂಟರ್ನೆಟ್‌ ಸಂಪರ್ಕವಿದೆ ಎಂಬ ಮಾಹಿತಿ ಇಲ್ಲ.

ಶಾಲೆ- ಕಾಲೇಜುಗಳು ಆನ್‌ಲೈನ್‌ ಕ್ಲಾಸ್‌ಗೆ ಮುಂದಾದರೆ, ಇಂಟರ್ನೆಟ್‌ ಅಥವಾ ಕಂಪ್ಯೂಟರ್‌/ಮೊಬೈಲ್‌ ಸೌಲಭ್ಯ ಹೊಂದಿಲ್ಲದ ವಿದ್ಯಾರ್ಥಿಗಳು ಶಿಕ್ಷಣವವನ್ನೇ ತೊರೆವ ಅಪಾಯವಿದೆ. ಶಾಲಾ ಮಟ್ಟದಲ್ಲಂತೂ ಈ ಅಪಾಯ ಅಧಿಕವಾಗಿದೆ ಎಂದು ದೆಹಲಿಯ ಪ್ರಾಧ್ಯಾಪಕಿ ಸಂಗೀತಾ ಡಿ. ಗದ್ರೆ ಆತಂಕ ವ್ಯಕ್ತಪಡಿಸಿದ್ದಾರೆ.