Asianet Suvarna News Asianet Suvarna News

34 ವರ್ಷಗಳ ಬಳಿಕ ಬದಲಾದ ಶಿಕ್ಷಣ ನೀತಿ: ರಾಜ್ಯದಲ್ಲೂ ಅನುಷ್ಠಾನವಾಗುತ್ತೆ ಎಂದ ಡಿಸಿಎಂ

ಶಾಲಾ ದಾಖಲಾತಿ ಹೆಚ್ಚಳ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ರೂಪಿಸಿರುವ ಬಹುನಿರೀಕ್ಷಿತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ಇದನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ವಾಗತಿಸಿದ್ದಾರೆ.

Dycm Ashwath Narayan Reacts On Union Cabinet approves new education policy
Author
Bengaluru, First Published Jul 29, 2020, 8:02 PM IST

ಬೆಂಗಳೂರು, (ಜುಲೈ.29): ಕೇಂದ್ರ ಸರಕಾರ ಬುಧವಾರ ಪ್ರಕಟಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ವಾಗತಿಸಿದ್ದು, ಕೇಂದ್ರ ಸರಕಾರವು ಜಾರಿ ಮಾಡಿದ ಕೂಡಲೇ ರಾಜ್ಯದಲ್ಲಿಯೂ ನೀತಿಯನ್ನು ಅನುಷ್ಠಾಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ನವ ಭಾರತವನ್ನು ನಿರ್ಮಾಣ ಮಾಡುವ ಪ್ರಬಲ ಶಕ್ತಿ ಹೊಂದಿದ್ದು, ಆಧುನಿಕ ದೃಷ್ಟಿಕೋನ, ದೇಶದ ಅಗತ್ಯಗಳು, ಜಾಗತಿಕ ಸವಾಲು.. ಹೀಗೆ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ರೂಪಿಸಲಾಗಿರುವ ಪರಿಪೂರ್ಣ ಶಿಕ್ಷಣ ನೀತಿ ಇದಾಗಿದೆ ಎಂದರು.

ಹೊಸ ಶಿಕ್ಷಣ ನೀತಿಗೆ ಕೇಂದ್ರದ ಅನುಮೋದನೆ, ಏನೆಲ್ಲ ಬದಲಾಗಲಿದೆ ಹೈಲೈಟ್ಸ್!

 ಹಲವು ವರ್ಷಗಳಿಂದ ನಮ್ಮ ಶಿಕ್ಷಣ ನೀತಿಯೇ ಬದಲಾಗಿಲ್ಲ ಅಂದರೆ ಅಚ್ಚರಿ ಆಗುತ್ತದೆ. ನಮಗೆಲ್ಲರಿಗೂ ಗೊತ್ತಿರುವಂತೆ ಶಿಕ್ಷಣ ಎನ್ನವುದು ಮನುಕುಲವನ್ನು ಮುನ್ನಡೆಸುವ ಚಾಲಕ ಶಕ್ತಿ. ಸಶಕ್ತ ಸಮಾಜದ ಆತ್ಮ. ಯಾವುದೇ ದೇಶವನ್ನು ಬಲಿಷ್ಠವಾಗಿ, ಭವ್ಯವಾಗಿ ನಿರ್ಮಾಣ ಮಾಡಬಲ್ಲ ಶಕ್ತಿ ಅದಕ್ಕೆ ಮಾತ್ರ ಇದೆ. ನರೇಂದ್ರ ಮೋದಿ ಅವರು ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದರು.

ಕೇಂದ್ರದೊಂದಿಗೆ ರಾಜ್ಯದಲ್ಲೂ ಜಾರಿ:
ಈಗಾಗಲೇ ರಾಜ್ಯ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು, ಆ ಬಗ್ಗೆ ಸೂಕ್ತ ಸಲಹೆ-ಸಹಕಾರ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದೆ. ಕೇಂದ್ರ ಸರಕಾರವು ಜಾರಿ ಮಾಡಿದ ಕೂಡಲೇ ರಾಜ್ಯದಲ್ಲಿಯೂ ನೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗ 'ಶಿಕ್ಷಣ ಸಚಿವಾಲಯ'!

ಋಷಿ-ಮುನಿಗಳ ಪಾಠ, ಗುರುಕುಲಗಳು, ಆ ನಂತರ ನಿರಂತರವಾಗಿ ನಮ್ಮ ಶಿಕ್ಷಣ ಪದ್ಧತಿ ಬದಲಾಗುತ್ತಾ ಬಂದಿದೆ. ಕಾಲಕ್ಕೆ ತಕ್ಕಂತೆ ಅದು ರೂಪಾಂತರಾಗುತ್ತಿದೆ. ಈಗಲೂ ಅಂಥದ್ದೇ ಪ್ರಕ್ರಿಯೆ ನಡೆದಿದ್ದು, ಅದಕ್ಕೊಂದು ಸಮಗ್ರತೆಯ ಸ್ವರೂಪ ಬಂದಿದೆ.1986ರಲ್ಲಿ ಮೊದಲಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿತ್ತು. ಬಳಿಕ 1992ರಲ್ಲಿ ಆ ನೀತಿಯನ್ನು ಪರಿಷ್ಕರಿಸಲಾಯಿತು. ಭಾರತವು ಎಲ್ಲ ರಂಗಗಳಲ್ಲೂ ಶರವೇಗದಲ್ಲಿ ಮುನ್ನಡೆಯುತ್ತಿದೆ. ತಾಂತ್ರಿಕವಾಗಿ, ವೈಜ್ಞಾನಿಕವಾಗಿ ನಾಗಾಲೋಟದಲ್ಲಿ ಸಾಗುತ್ತಿದೆ. ಇಂಥ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ಪದ್ಧತಿ ಇರಲೇಬೇಕು. ಶ್ರೀ ನರೇಂದ್ರ ಮೋದಿ ಅವರ ಸರಕಾರ ಈ ಅಗತ್ಯವನ್ನು ಅರ್ಥ ಮಾಡಿಕೊಂಡಿದೆ ಅಲ್ಲದೆ,’ಮಾನವ ಸಂಪನ್ಮೂಲ ಸಚಿವಾಲಯ’ವನ್ನು ’ಶಿಕ್ಷಣ ಸಚಿವಾಲಯ’ ಎಂದು ಮರು ನಾಮಕರಣ ಮಾಡಿರುವುದು ಅರ್ಥಪೂರ್ಣ, ಒಂದು ಕ್ರಾಂತಿಕಾರಕ ಹೆಜ್ಜೆ ಎಂದು ಡಿಸಿಎಂ ಅಭಿಪ್ರಾಯಪಟ್ಟಿರು.

ಶಿಕ್ಷಣ ಪದ್ಧತಿಯಲ್ಲಿ ಏಕರೂಪತೆ ತರುವುದು, ಸರ್ವರಿಗೂ ಶಿಕ್ಷಣ ಎನ್ನುವ ಮಾತಿನಂತೆ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡುವುದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತದಿಂದಲೇ ಅತ್ಯುತ್ತಮ ಶಿಕ್ಷಣ ಸಿಗಲಿ ಎಂಬುದು ನೀತಿಯ ಆಶಯವಾಗಿದೆ. ಜತೆಗೆ, ಬಹುಭಾಷೆಗಳನ್ನು ಗೌರವಿಸುವ ಅಂಶಗಳಿರುವುದು ನಾವೆಲ್ಲರೂ ಗಮನಿಸಬೇಕಾದ ಅಂಶ. ಒಟ್ಟಾರೆಯಾಗಿ ಪ್ರತಿಯೊಬ್ಬರೂ ಹೊಸ ಶಿಕ್ಷಣ ನೀತಿಯನ್ನು ಸ್ವಾಗತಿಸಬೇಕಾಗಿದೆ ಎಂದು ಹೇಳಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ತಿಳಿಸಿದರು. 

Follow Us:
Download App:
  • android
  • ios