ಬೆಂಗಳೂರು(ಜು.17):  ರಾಜ್ಯದ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕವನ್ನು ವಿತರಿಸುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘ ನಿರ್ದೇಶಿಸಿದೆ. 

2020-21ನೇ ಸಾಲಿಗೆ ಅಗತ್ಯವಿರುವ ಎಲ್ಲ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಈಗಾಗಲೇ ಮುದ್ರಣ ಮಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಈ ಪುಸ್ತಕಗಳನ್ನು ಪೋಷಕರ ಮೂಲಕ ಮಕ್ಕಳಿಗೆ ತಲುಪಿಸುವಂತೆ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ನಿರ್ದೇಶನ ನೀಡಿದ್ದಾರೆ.

ಆನ್‌ಲೈನ್‌ ಕ್ಲಾಸ್‌ ಮನವೊಲಿಕೆಗೆ ಶಾಲೆಗಳ ಅಡ್ಡದಾರಿ: ಫೀಸ್ ಪಟ್ಟಿಗೆ ಹೊಸ ಶುಲ್ಕ ಸೇರ್ಪಡೆ!

ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳು ಆರಂಭ ಆಗದಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಕೂಡಲೇ ಶಾಲಾ ಹಂತಕ್ಕೆ ವಿತರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಶಾಲಾ ಹಂತದಲ್ಲಿ ತರಗತಿವಾರು ವಿದ್ಯಾರ್ಥಿಗಳ ಪೋಷಕರನ್ನು ಸಣ್ಣ ಸಣ್ಣ ಗುಂಪುಗಳಲ್ಲಿ ಶಾಲೆಗೆ ಕರೆಸಿ, ಪುಸ್ತಕಗಳನ್ನು ವಿತರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಎಸ್‌ಡಿಎಂಸಿ ಹಾಗೂ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ.

ಪುಸ್ತಕವನ್ನು ಪೋಷಕರಿಗೆ ವಿತರಿಸುವ ಸಂದರ್ಭದಲ್ಲಿ ಸುರಕ್ಷತಾ ಕ್ರಮ ಕಾಯ್ದುಕೊಳ್ಳುವ ಜೊತೆಗೆ ಮನೆಯಲ್ಲಿ ವಿದ್ಯಾರ್ಥಿಗಳು ಪುಸ್ತಕ ಬಳಕೆ ಮಾಡುವ ಬಗ್ಗೆ ಹಾಗೂ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಬೇಕು. ಯಾವುದೇ ವಿದ್ಯಾರ್ಥಿ ಪಠ್ಯಪುಸ್ತಕ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಉಚಿತ ಪಠ್ಯಪುಸ್ತಕಗಳ ವಿತರಣೆಯಲ್ಲಿ ಯಾವುದೇ ವ್ಯತ್ಯಾಸ ಅಥವಾ ದುರುಪಯೋಗ ಹಾಗೂ ವಿಳಂಬವಾದರೆ ಸಂಬಂಧಪಟ್ಟಅಧಿಕಾರಿಗಳೇ ಇದಕ್ಕೆ ನೇರ ಹೊಣೆಯಾಗಿರುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ.

ಶಾಲೆಗಳು ನಡೆಯದಿರುವುದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬಾರದು. ಪುಸ್ತಕಗಳನ್ನು ತಿರುವಿ ಹಾಕುವುದರಿಂದ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಪಠ್ಯ ಪುಸ್ತಕಗಳು ನಿಗದಿತ ಕಾಲ ಮಿತಿಯಲ್ಲಿ ವಿತರಣೆ ಆಗುವ ಕುರಿತು ಆಗಿಂದಾಗೇ ಉಸ್ತುವಾರಿ ಮಾಡಿ, ಪ್ರಗತಿಯ ವರದಿಯನ್ನು ಪಠ್ಯಪುಸ್ತಕ ಸಂಘದ ಆಯಾ ಜಿಲ್ಲಾ ನೋಡಲ್‌ ಅಧಿಕಾರಿಗಳ ಮೂಲಕ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.