Asianet Suvarna News Asianet Suvarna News

ಆನ್‌ಲೈನ್‌ ಕ್ಲಾಸ್‌ ಮನವೊಲಿಕೆಗೆ ಶಾಲೆಗಳ ಅಡ್ಡದಾರಿ: ಫೀಸ್ ಪಟ್ಟಿಗೆ ಹೊಸ ಶುಲ್ಕ ಸೇರ್ಪಡೆ!

ಆನ್‌ಲೈನ್‌ ಕ್ಲಾಸ್‌ ಮನವೊಲಿಕೆಗೆ ಶಾಲೆಗಳ ಅಡ್ಡದಾರಿ!| ರಿಪೋರ್ಟ್‌ ಕಾರ್ಡ್‌ ವಿತರಣೆ ನೆಪದಲ್ಲಿ ಪೋಷಕರಿಂದ ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌, ಟ್ವೀಟರ್‌, ಫೇಸ್ಬುಕ್‌ ಮಾಹಿತಿ ಸಂಗ್ರಹ|  ಪೋಷಕ ವರ್ಗದಿಂದ ತೀವ್ರ ವಿರೋಧ, ಈವರೆಗೆ ಪಠ್ಯಪುಸ್ತಕದ ಫೀ ಪಡೆಯುತ್ತಿದ್ದ ಶಾಲೆಗಳಿಂದ ಈಗ ಕಂಪ್ಯೂಟರ್‌ ಶುಲ್ಕ!

Schools Are Taking Wrong Route To Please Parents For Online Classes In Karnataka
Author
Bangalore, First Published Jun 7, 2020, 7:39 AM IST

ಎನ್‌.ಎಲ್‌. ಶಿವಮಾದು

ಬೆಂಗಳೂರು(ಜೂ..07): ವಿದ್ಯಾರ್ಥಿಗಳಿಗೆ ಕಳೆದ ಶೈಕ್ಷಣಿಕ ವರ್ಷದ ರಿಪೋರ್ಟ್‌ ಕಾರ್ಡ್‌ ನೀಡುವ ನೆಪದಲ್ಲಿ ಶಾಲೆಗಳಿಗೆ ಕರೆಯಿಸಿ ಆನ್‌ಲೈನ್‌ ತರಗತಿಗಳಿಗೆ ಮನವೊಲಿಸಲು ಖಾಸಗಿ ಶಾಲೆಗಳು ಪೋಷಕರ ಸಭೆ ಆಯೋಜಿಸುವ ತಂತ್ರ ಪ್ರಯೋಗಿಸತೊಡಗಿವೆ. ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.

ರಾಜ್ಯ ಸರ್ಕಾರವು ಶಾಲೆಗಳ ದಾಖಲಾತಿಗೆ ಅನುಮತಿ ನೀಡಿರುವ ಬೆನ್ನಲ್ಲೇ ಪೋಷಕರನ್ನು ಶಾಲೆಗಳತ್ತ ಆಕರ್ಷಿಸಲು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಿರುವ ಖಾಸಗಿ ಶಾಲೆಗಳು, ರಿಪೋರ್ಟ್‌ ಕಾರ್ಡ್‌ ತೆಗೆದುಕೊಂಡು ಹೋಗುವಂತೆ ಕರೆ ಮಾಡುತ್ತಿವೆ. ಇದೇ ವೇಳೆ ‘ನಿಮ್ಮಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಬಳಸುತ್ತಿದ್ದೀರಾ? ಸೋಶಿಯಲ್‌ ಮೀಡಿಯಾದಲ್ಲಿ ಖಾತೆಗಳಿವೆಯೇ? ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂ ಬಳಸುತ್ತಿರುವಿರಾ’ ಎಂಬೆಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತಿವೆ. ಕೆಲವು ಶಾಲೆಗಳು ಮುಂದಿನ ಸೋಮವಾರ ಮತ್ತು ಮಂಗಳವಾರ ಪೋಷಕರ ಸಭೆ ನಿಗದಿ ಮಾಡಿವೆ. ಇದಕ್ಕಾಗಿ ಪೋಷಕರಿಂದ ಮುಂಚಿತವಾಗಿಯೇ ಮಾಹಿತಿ ಸಂಗ್ರಹಿಸುತ್ತಿವೆ.

ಎಲ್‌ಕೆಜಿ, ಯುಕೆಜಿ ಯಾವುದೇ ಕಾರಣಕ್ಕೆ ಆರಂಭಿಸುವುದಿಲ್ಲ: ಸುರೇಶ್‌ ಕುಮಾರ್‌!

ಈ ಕುರಿತು ಮಾತನಾಡಿದ ಮಲ್ಲೇಶ್ವರದಲ್ಲಿರುವ ಪೋಷಕ ಪ್ರಶಾಂತ್‌, ‘ನಮ್ಮ ಮಗು ಎರಡನೇ ತರಗತಿ ಓದುತ್ತಿದೆ. ರಿಪೋರ್ಟ್‌ ಕಾರ್ಡ್‌ ತೆಗೆದುಕೊಂಡು ಹೋಗುವಂತೆ ಶಾಲೆಯಿಂದ ಕರೆ ಮಾಡಿದ್ದರು. ಇದರ ಜೊತೆಗೆ ಸ್ಮಾರ್ಟ್‌ ಫೋನ್‌, ಲ್ಯಾಪ್‌ಟಾಪ್‌ ಬಳಸುವ ಮಾಹಿತಿ ಕೇಳಿದರು. ಆನ್‌ಲೈನ್‌ ತರಗತಿಗಳ ಬಗ್ಗೆ ತಮ್ಮ ಅಭಿಪ್ರಾಯವೇನು? ಆನ್‌ಲೈನ್‌ ಮೂಲಕ ತರಗತಿ ಮಾಡಿದರೆ ಏನಾದರೂ ಸಮಸ್ಯೆ ಎದುರಾಗಲಿದೆಯೇ? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ’ ಎಂದರು.

‘ಈ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಆದರೆ, ಆನ್‌ಲೈನ್‌ ತರಗತಿಗಳು ಪ್ರಾಥಮಿಕ ಶಾಲಾ ಮಕ್ಕಳಿಗೆ ಸರಿಹೊಂದಲ್ಲ’ ಎಂಬ ಉತ್ತರವನ್ನು ನಾನು ಹೇಳಿದೆ. ಇದಕ್ಕೆ ಶಾಲಾ ಆಡಳಿತ ಮಂಡಳಿಗಳು, ‘ಸಭೆಗೆ ಬನ್ನಿ ಹೆಚ್ಚಿನ ಮಾಹಿತಿ ನೀಡುತ್ತೇವೆ. ನಿಮಗೆ ಅನುಕೂಲ ಎನಿಸಿದರೆ ಮಾತ್ರ ತರಗತಿಗಳನ್ನು ಆರಂಭಿಸುತ್ತೇವೆ’ ಎಂಬ ಉತ್ತರ ನೀಡಿದರು ಎನ್ನುತ್ತಾರೆ.

ಆನ್‌ಲೈನ್‌ ವಿರುದ್ಧ ನಿಮ್ಹಾನ್ಸ್‌ ಎಚ್ಚರಿಕೆ:

‘ಈಗಾಗಲೇ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಿಗೆ ಆನ್‌ಲೈನ್‌ ತರಗತಿಯಿಂದ ಮಕ್ಕಳ ಮೇಲೆ ಪರಿಣಾಮ ಆಗಲಿದೆ ಎಂಬ ವರದಿಯನ್ನು ನಿಮ್ಹಾನ್ಸ್‌ ನೀಡಿದೆ. ಹೀಗಿದ್ದರೂ ತರಗತಿಗಳನ್ನು ನಡೆಸಲು ಮುಂದಾಗಿರುವ ಖಾಸಗಿ ಶಾಲೆಗಳು, ಒಂದಲ್ಲಾ ಒಂದು ರೀತಿಯಲ್ಲಿ ಆನ್‌ಲೈನ್‌ ತರಗತಿಗಳಿಗೆ ಪೋಷಕರನ್ನು ಮನವೊಲಿಸುತ್ತಿವೆ. ಒಂದು ವೇಳೆ ತಮ್ಮಲ್ಲಿ ಸ್ಮಾರ್ಟ್‌ ಫೋನ್‌ ಮತ್ತು ಲ್ಯಾಪ್‌ಟಾಪ್‌ ಇಲ್ಲ ಎಂದರೆ, ಅವುಗಳನ್ನು ಸಹ ಶಾಲೆಗಳ ಮುಖಾಂತರವೇ ನೀಡಿ ಹಣ ಮಾಡುವ ಉದ್ದೇಶ ಹೊಂದಿವೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಂಪ್ಯೂಟರ್‌ ನೀಡಿ ಹಣ ಗಳಿಕೆ?:

ಒಂದು ಆನ್‌ಲೈನ್‌ ತರಗತಿಗಳನ್ನು ಆರಂಭಿಸುವುದು ಮತ್ತು ಎರಡನೆಯದಾಗಿ ಆನ್‌ಲೈನ್‌ ತರಗತಿಗೆ ಅವಶ್ಯವಿರುವ ಕಲಿಕಾ ಪರಿಕರಗಳಾದ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಹಾಗೂ ತಮ್ಮ ಶಾಲೆಗಳ ಆ್ಯಪ್‌ಗಳನ್ನು ಹಾಕಿಕೊಡುವ ಮೂಲಕ ತಮ್ಮದೇ ಶಾಲೆಗಳ ಮೂಲಕ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಒದಗಿಸುವ ಉದ್ದೇಶ ಹೊಂದಿವೆ ಎಂಬುದು ಜಯನಗರದ ಪೋಷಕ ಲಕ್ಷ್ಮಣ್‌ ಮಾಹಿತಿ.

ಶಾಲೆಗಳ ಆರಂಭ ಯಾವಾಗ? ಲೈವ್ ಬಂದು ವಿವರ ನೀಡಿದ ಸುರೇಶ್ ಕುಮಾರ್

‘ಈ ಮೊದಲು ಪಠ್ಯಪುಸ್ತಕ, ಸಮವಸ್ತ್ರ, ಶಾಲಾ ವಾಹನ ಸೇರಿದಂತೆ ವಿವಿಧ ಇತರೆ ಖರ್ಚುಗಳನ್ನು ಸೇರಿಸಿ ಹಣ ಮಾಡುತ್ತಿದ್ದ ಖಾಸಗಿ ಶಾಲೆಗಳು, ಆನ್‌ಲೈನ್‌ ತರಗತಿಗಳನ್ನು ಪ್ರಾರಂಭಿಸಿ ಇದೀಗ ಎಲೆಕ್ಟ್ರಾನಿಕ್‌ ಉಪಕರಣಗಳ ಮೂಲಕವೂ ಹಣ ಮಾಡುವ ವ್ಯಾಪಾರಿ ಮನೋಭಾವನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿವೆ’ ಎಂದು ಮತ್ತಿಕೆರೆಯಲ್ಲಿರುವ ಪೋಷಕ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಮಗು ಎರಡನೇ ತರಗತಿ ಓದುತ್ತಿದೆ. ರಿಪೋರ್ಟ್‌ ಕಾರ್ಡ್‌ ತೆಗೆದುಕೊಂಡು ಹೋಗುವಂತೆ ಶಾಲೆಯಿಂದ ಕರೆ ಮಾಡಿದ್ದರು. ಇದರ ಜೊತೆಗೆ ಸ್ಮಾರ್ಟ್‌ ಫೋನ್‌, ಲ್ಯಾಪ್‌ಟಾಪ್‌ ಬಳಸುವ ಮಾಹಿತಿ ಕೇಳಿದರು. ಆನ್‌ಲೈನ್‌ ತರಗತಿಗಳ ಬಗ್ಗೆ ತಮ್ಮ ಅಭಿಪ್ರಾಯವೇನು? ಆನ್‌ಲೈನ್‌ ಮೂಲಕ ತರಗತಿ ಮಾಡಿದರೆ ಏನಾದರೂ ಸಮಸ್ಯೆ ಎದುರಾಗಲಿದೆಯೇ? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

-ಪ್ರಶಾಂತ್‌, ಪೋಷಕರು

Follow Us:
Download App:
  • android
  • ios