ಖಾಸಗಿ ಶಾಲೆಗಳು ವಿಧಿಸುವ ಶುಲ್ಕದ ಬಗ್ಗೆ ಮಹತ್ವದ ಆದೇಶ ಹೊರಡಿಸಿದ ಕೋರ್ಟ್...!
ಕೊರೋನಾ ವೈರಸ್‌ನಿಂದಾಗಿ ಮಾರುಕಟ್ಟೆಯ ಕುಸಿತದಿಂದಾಗಿ ಅನೇಕ ದೊಡ್ಡ ಮತ್ತು ಸಣ್ಣ ಉದ್ಯಮಗಳು ಮುಚ್ಚುವ ಅಂಚಿಗೆ ಬಂದಿವೆ. ಈ ಸಮಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಿಕ್ಷಣ ದುಬಾರಿಯಾಗಿದ್ದು, ಇಲ್ಲಿನ ಅನೇಕ ಖಾಸಗಿ ಶಾಲೆಗಳು ಶುಲ್ಕದಲ್ಲಿ ಶೇ. 50 ರಷ್ಟು ಹೆಚ್ಚಳಕ್ಕೆ ಘೋಷಿಸಿವೆ. ಇದರಿಂದ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ನವದೆಹಲಿ, (ಆ.29): ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ವಾರ್ಷಿಕ ಹಾಗೂ ಶಾಲಾ ಅಭಿವೃದ್ಧಿ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಸೂಚಿಸಿದೆ.
ಈ ಹಿಂದೆ ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಯಾವುದೇ ಖಾಸಗಿ ಶಾಲೆಗೆ ಶುಲ್ಕ ಹೆಚ್ಚಿಸಲು ಅವಕಾಶವಿರುವುದಿಲ್ಲ. ಶಾಲೆಗಳು ಮತ್ತೆ ತೆರೆಯುವವರೆಗೆ ಬೋಧನಾ (ಟ್ಯುಷನ್ ಫೀ) ಶುಲ್ಕವನ್ನು ಮಾತ್ರ ವಿಧಿಸಬಹುದು ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿತ್ತು.
ಇದೀಗ ದೆಹಲಿ ಸರ್ಕಾರ, ಲಾಕ್‌ಡೌನ್ ಮುಗಿಯುವವರೆಗೆ ಖಾಸಗಿ ಶಾಲೆಗಳು ವಾರ್ಷಿಕ ಹಾಗೂ ಶಾಲಾ ಅಭಿವೃದ್ಧಿ ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ. ಇನ್ನು ಬೋಧನಾ (ಟ್ಯುಷನ್ ಫೀ) ಶುಲ್ಕವನ್ನು ಒಂದೇ ಬಾರಿಗೆ ಕೇಳುವಂತಿಲ್ಲ. ವಾರ್ಷಿಕ ಅಥವಾ ಅರ್ಧ ವಾರ್ಷಿಕ ಬದಲು ಮಾಸಿಕವಾಗಿ ಶುಲ್ಕ ವಿಧಿಸಬೇಕೆಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.
ಶಾಲಾ-ಕಾಲೇಜು ಆರಂಭದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಡಿಸಿಎಂ ಅಶ್ವತ್ಥನಾರಾಯಣ
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಬೋಧನಾ ಶುಲ್ಕವನ್ನು ಒಂದೇ ಸಲಕ್ಕೆ ಕಟ್ಟುವುದು ಫೋಷಕರಿಗೆ ಕಷ್ಟವಾಗುತ್ತದೆ. ಈ ಇದರಿಂದ ಮಾಸಿಕವಾಗಿ ಇಂತಿಷ್ಟು ಹಣ ಪಾವತಿಸಿಕೊಳ್ಳಬೇಕೆಂದು ಕೋರ್ಟ್ ಸೂಚನೆ ಕೊಟ್ಟಿದ್ದು, ಲಾಕ್ಡೌನ್ ಅವಧಿ ಪೂರ್ಣಗೊಂಡ ನಂತರ ಮಾಸಿಕ ಆಧಾರದ ಮೇಲೆ ಮಾತ್ರ ಪೋಷಕರಿಂದ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ವಿಧಿಸಬಹುದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅನೇಕ ಶಾಲೆಗಳು ಜುಲೈನಿಂದ ತಮ್ಮ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ಹೆಚ್ಚೆಚ್ಚು ವಿಧಿಸಲು ಪ್ರಾರಂಭಿಸಿವೆ. ಇದರಿಂದ ಕೆ. ಮಂಗಳಂ ವರ್ಲ್ಡ್ ಸ್ಕೂಲ್‌ನ ಪೋಷಕರ ಸಂಘ ಈ ಬಗ್ಗೆ ಕೋರ್ಟ್ ಮೊರೆಹೋಗಿತ್ತು. ಇದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ನಾಥ್, 18.04.2020 ರ ಸುತ್ತೋಲೆಯಲ್ಲಿ ಹೇಳಿರುವಂತೆ ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ಶಾಲೆಗಳು ತೆರೆಯದ ಕಾರಣ ಲಾಕ್‌ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಶಾಲೆ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದರು.