ಬೆಂಗಳೂರು, (ಆ.26): ನಾವು ಅಕ್ಟೋಬರ್ ತಿಂಗಳಿಂದ ಶಾಲಾ-ಕಾಲೇಜುಗಳನ್ನು ತೆರೆಯಹುದು ಅಂದುಕೊಂಡಿದ್ದೇವೆ. ಆದ್ರೆ, ಕೇಂದ್ರದ ಮಾರ್ಗಸೂಚಿ ನಿರೀಕ್ಷೆಯಲ್ಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

ಇಂದು (ಬುಧವಾರ) ಬೆಂಗಳೂರಿನಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಹಾಗೂ ಪದವಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಕಾಲೇಜುಗಳನ್ನು ತೆರೆಯುವುದು ಅವಶ್ಯವಿದೆ. ಹೀಗಾಗಿ ಸೆಪ್ಟೆಂಬರರ್ ತಿಂಗಳು ಪೂರ್ತಿಯಾಗಿ ಕೇಲೇಜು ಆರಂಭಿಸುವುದು ಬೇಡವೆಂದು ನಿರ್ಧರಿಸಿದ್ದೇವೆ. ಆದ್ರೆ, ಅಕ್ಟೋಬರ್‌ ತಿಂಗಳಲ್ಲಿ ಕಾಲೇಜು ತೆರೆಯುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದರು.

"

ಅನ್‌ಲಾಕ್‌ -4: ಸೆ. 01 ರಿಂದ ಶಾಲಾ- ಕಾಲೇಜು ಆರಂಭಕ್ಕೆ ಅನುಮತಿ?

ಕೇಂದ್ರ ಸರಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ ಮತ್ತೂ ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಸರಕಾರವೂ ಮುಂದಿನ ತಿಂಗಳಿಂದ ಆನ್ ಲೈನ್ ಮೂಲಕವೇ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ. ಜತೆಗೆ, ಅಕ್ಟೋಬರ್ ತಿಂಗಳಿಂದಲೇ ಎಲ್ಲ ಕಾಲೇಜುಗಳನ್ನು ಆರಂಭಿಸಲಾಗುವುದು. ವಿದ್ಯಾರ್ಥಿಗಳು ಕೂಡ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದರು.

ಅಂತಿಮ ವರ್ಷದ ಪರೀಕ್ಷೆ:
ಶೈಕ್ಷಣಿಕ ವರ್ಷದ ಆರಂಭದ ಜತೆಯಲ್ಲಿಯೇ ಅಂತಿಮ ವರ್ಷದಲ್ಲಿರುವ ಎಲ್ಲ ಪದವಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಜತೆಗೆ, ಬ್ಯಾಕ್ ಲಾಗ್ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಡಿಸಿಎಂ ಹೇಳಿದರು.