ಬೆಂಗಳೂರು(ಆ.29): ಬಹಳ ದೂರದೃಷ್ಟಿಯೊಂದಿಗೆ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ರಾಷ್ಟ್ರೀಯ ನೂತನ ಶಿಕ್ಷಣ ನೀತಿ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆಗೆ ಕಾರಣವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಶುಕ್ರವಾರ ಬೆಂಗಳೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ದೂರದೃಷ್ಟಿಯನ್ನು ಇಟ್ಟುಕೊಂಡು ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಶಿಕ್ಷಣ ವಲಯದಲ್ಲಿ ಆಮೂಲಾಗ್ರ ಬದಲಾವಣೆ ಮೂಲಕ ಇತಿಹಾಸ ಸೃಷ್ಟಿಸಲಿದೆ ಎಂದರು.

ಬಹುಮುಖ್ಯವಾಗಿ ಈ ಹೊಸ ಶಿಕ್ಷಣ ನೀತಿ ನೆಲದ ಮೌಲ್ಯವನ್ನು ಎತ್ತಿ ಹಿಡಿದಿದೆ ಹಾಗೂ ಆಂಗ್ಲ ಶಿಕ್ಷಣ ಪದ್ಧತಿಗೆ ತಿಲಾಂಜಲಿ ಹಾಡಿದ್ದು ಶಿಕ್ಷಣ ಕ್ರಾಂತಿ ಸೃಷ್ಟಿಗೆ ಸಹಕಾರಿಯಾಗಲಿದೆ. ಇದು ನಿಜಕ್ಕೂ ಸಂತಸದ ವಿಚಾರ. ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಅವರ ಕೌಶಲ್ಯ ಹಾಗೂ ಬುದ್ಧಿವಂತಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಶಿಕ್ಷಣ ನೀತಿಯನ್ನು ರಚಿಸಲಾಗಿದೆ. ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಹಿಂದುಳಿದ ವರ್ಗ ಸೇರಿದಂತೆ ಎಲ್ಲ ವರ್ಗಗಳ ಮಕ್ಕಳಿಗೂ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದರು.

ತಂತ್ರಜ್ಞಾನದಿಂದ ಶೈಕ್ಷಣಿಕ ಪದ್ಧತಿ ಸುಧಾರಣೆ: ಪ್ರೊ.ಅನಿಲ್‌ ಸಹಸ್ರಬುಧೆ

ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್‌.ವೇಣುಗೋಪಾಲ್‌ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಜಾಗತಿಕ ಮಟ್ಟದಲ್ಲಿ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ. ಸಮಗ್ರ ಶಿಕ್ಷಣ ಅಧ್ಯಯನಕ್ಕೆ ಪೂರಕವಾಗಿರುವ ಈ ನೀತಿಯನ್ನು ಕೇಂದ್ರ ಸರ್ಕಾರ 2025ರ ಒಳಗೆ ಸಂಪೂರ್ಣ ಅನುಷ್ಠಾನದ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟಹೆಚ್ಚಿಸಲು ಕ್ರಮ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್‌. ಆರ್‌.ಶೆಟ್ಟಿ, ನ್ಯಾಕ್‌ ನಿರ್ದೇಶಕ ಪ್ರೊ. ಎಸ್‌.ಸಿ.ಶರ್ಮಾ, ಯುಜಿಸಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್‌, ಅಜೀಂ ಪ್ರೇಂಜಿ ವಿವಿ ಪ್ರಾಧ್ಯಾಪಕ ಪ್ರೊ.ರಿಷಿಕೇಶ್‌ ಹಾಗೂ ಬಯೋಕಾನ್‌ ಮಿಷನ್‌ ನಿರ್ದೇಶಕಿ ಪ್ರತಿಮಾ ರಾವ್‌ ಉಪಸ್ಥಿತರಿದ್ದರು.

ಹೊಸ ಶಿಕ್ಷಣ ನೀತಿ: ರಾಜ್ಯಪಾಲರ ಜತೆ ಅಶ್ವತ್‌ ನಾರಾಯಣ ಚರ್ಚೆ

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್‌ನಾರಾಯಣ ಅವರು ಶುಕ್ರವಾರ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಶುಕ್ರವಾರ ರಾಜಭವನದಲ್ಲಿ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ ಅಶ್ವತ್‌್ಥ ನಾರಾಯಣ, ದೇಶದ ಎಲ್ಲ ರಾಜ್ಯಗಳಿಗಿಂತ ಮೊದಲು ಶಿಕ್ಷಣ ನೀತಿ ಜಾರಿ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಈವರೆಗೆ ಸರಕಾರ ಕೈಗೊಂಡಿರುವ ಕ್ರಮಗಳು, ಕಾರ್ಯಪಡೆ ರಚನೆ, ಆ ಕಾರ್ಯಪಡೆ ಜತೆ ನಡೆಸಿರುವ ಸಭೆಗಳ ಚರ್ಚೆ ಕುರಿತು ವಿಚಾರ ವಿನಿಮಯ ಇತ್ಯಾದಿ ಸಂಗತಿಗಳ ಬಗ್ಗೆ ರಾಜ್ಯಪಾಲರ ಜತೆ ವಿಚಾರ ವಿನಿಮಯ ಮಾಡಿಕೊಂಡರು ಎಂದು ತಿಳಿದುಬಂದಿದೆ.

ನೀತಿಯಲ್ಲಿ ಅಡಕವಾಗಿರುವ ಪ್ರಮುಖ ವಿಷಯಗಳು, ಅವುಗಳ ಜಾರಿಯಿಂದ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಆಗಲಿರುವ ಬದಲಾವಣೆಗಳ ಬಗ್ಗೆಯೂ ಅವರು ರಾಜ್ಯಪಾಲರಿಗೆ ವಿವರಣೆ ನೀಡಿದರು. ಈ ಸಂಬಂಧ ರಾಜ್ಯ ಸರಕಾರ ತರಲು ಇಚ್ಛಿಸಿರುವ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಬದಲಾವಣೆಗಳ ಬಗ್ಗೆಯೂ ಮಾಹಿತಿ ನೀಡಿದರು. ಶಿಕ್ಷಣ ನೀತಿ ನಿರೂಪಣಾ ಸಮಿತಿ ಸದಸ್ಯ ಹಾಗೂ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಅನುರಾಗ್‌ ಬೇಹರ್‌, ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್‌ ಹಾಜರಿದ್ದರು.