Asianet Suvarna News Asianet Suvarna News

ತಂತ್ರಜ್ಞಾನದಿಂದ ಶೈಕ್ಷಣಿಕ ಪದ್ಧತಿ ಸುಧಾರಣೆ: ಪ್ರೊ.ಅನಿಲ್‌ ಸಹಸ್ರಬುಧೆ

ಡಿಜಿಟಲ್‌ ಶಿಕ್ಷಣ| ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದಲ್ಲಿ ಪ್ರೊ.ಅನಿಲ್‌ ಸಹಸ್ರಬುಧೆ ಅಭಿಮತ| ವೈದ್ಯಕೀಯ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಸಿಕೊಂಡು ಕೌಶಲ್ಯ ಆಧಾರಿತ ಪ್ರಯೋಗಾಲಯವನ್ನು ನಡೆಸಬಹುದು| ಟೆಲಿಮೆಡಿಸಿನ್‌ ಹಾಗೂ ಟೆಲಿ ಕನ್ಸಲ್ಟೇಷನ್‌ ಕೂಡ ಮಾಡಬಹುದು|

Anil Sahasrabudhe Says Improving Education From Technology
Author
Bengaluru, First Published Aug 28, 2020, 11:36 AM IST

ಬೆಂಗಳೂರು(ಆ.28): ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಡಿಜಿಟಲ್‌ ಶಿಕ್ಷಣ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿರುವುದರಿಂದ ಶೈಕ್ಷಣಿಕ ದಾಖಲಾತಿ ಪ್ರಮಾಣ ಸುಧಾರಣೆಯಾಗಲಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಅನಿಲ್‌ ಸಹಸ್ರಬುಧೆ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದಲ್ಲಿ ಗುರುವಾರ ‘ಡಿಜಿಟಲ್‌ ಶಿಕ್ಷಣ ಹಾಗೂ ತಂತ್ರಜ್ಞಾನದ ಏಕೀಕರಣ’ದ ಕುರಿತು ಮಾತನಾಡಿದ ಅವರು, ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ, ಅಧ್ಯಾಪಕರ ಕೊರತೆಯಿದ್ದರೆ, ಪ್ರಸ್ತುತ ವಿದ್ಯಾರ್ಥಿಗಳು ಸ್ವಯಂ ಹಾಗೂ ತಂತ್ರಜ್ಞಾನಗಳನ್ನು ಬಳಸಿ ವಿಷಯಗಳನ್ನು ಚೆನ್ನಾಗಿ ಅರ್ಥೈಸಿಕೊಂಡು ಪರೀಕ್ಷೆಗೆ ಸಿದ್ಧರಾಗಲು ಈ ನೀತಿಯಲ್ಲಿ ಹಲವು ಅನುಕೂಲವಿದೆ ಎಂದರು.

ಸ್ಯಾಟ್ಸ್‌ ಮೂಲಕ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಚಾಲನೆ

ಅಧ್ಯಾಪಕರು ವೈಯಕ್ತಿಕವಾಗಿ ಬೌದ್ಧಿಕತೆಯ ತಂತ್ರಜ್ಞಾನ ಬಳಸಿಕೊಂಡು ದೇಶದ ಎಲ್ಲ ವಿದ್ಯಾರ್ಥಿಗಳಿಗೂ ತಲುಪಿಸಬಹುದು. ಐಐಟಿ ಪ್ರಾಧ್ಯಾಪಕರು ನೀಡುವ ಉಪನ್ಯಾಸ ಮಾಲೆಗಳನ್ನು ದೇಶದ ಯಾವ ಮೂಲೆಯಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಕೇಳಿ, ಅದರ ಸದುಪಯೋಗ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಯಾವುದೇ ವಿಚಾರಗಳನ್ನು ಆನ್‌ಲೈನ್‌ ತರಗತಿಗಳ ವಿಡಿಯೋಗಳ ಮೂಲಕ ಹಾಗೂ ತಂತ್ರಜ್ಞಾನದ ಮೂಲಕ ಪಡೆಯಲು ಅವಕಾಶವಾಗಲಿದೆ ಎಂದು ಹೇಳಿದರು.

ಪ್ರಾಯೋಗಿಕ ತರಗತಿಗಳಿಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಭೌತಿಕವಾಗಿ ಮಾಡಬೇಕಾಗಿಲ್ಲ, ತಂತ್ರಜ್ಞಾನ ಅಳವಡಿಸಿಕೊಂಡು ವಿಡಿಯೋ ಮೂಲಕ ಸ್ಪಷ್ಟವಾಗಿ ಹಾಗೂ ವ್ಯವಸ್ಥಿತವಾಗಿ ತೋರಿಸಬಹುದಾಗಿದೆ. ಡಿಜಿಟಲ್‌ ಶಿಕ್ಷಣ ಹಾಗೂ ತಂತ್ರಜ್ಞಾನದ ಕೌಶಲ್ಯದ ಶಿಕ್ಷಣ ನಿಜಕ್ಕೂ ಇಂದಿನ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಮತ್ತು ದಾಖಲಾತಿ ಪ್ರಮಾಣವೂ ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯದ ಇನ್ನೋವೇಟಿವ್‌ ಕೌನ್ಸಿಲ್‌ ಅಧ್ಯಕ್ಷ ಪ್ರೊ.ಎಚ್‌.ಪಿ. ಖಿಂಚಾ, ವಿಶ್ರಾಂತ ಕುಲಪತಿ ಪ್ರೊ. ಎಚ್‌.ಎ. ರಂಗನಾಥ್‌, ಬೆಂಗಳೂರು ವಿವಿ ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌ ಪಾಲ್ಗೊಂಡಿದ್ದರು.

ಎಲ್ಲ ಸಂದರ್ಭಕ್ಕೂ ಸಲ್ಲದು

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಎಲ್ಲ ತರಗತಿಗಳು ಮೊಬೈಲ್‌ನಲ್ಲಿಯೇ ನಡೆಯುತ್ತಿರುವುದರಿಂದ ಡಿಜಿಟಲ್‌ ವ್ಯವಸ್ಥೆಯ ಮಹತ್ವ ಜನರಿಗೆ ತಿಳಿಯುತ್ತಿದೆ. ವೈದ್ಯಕೀಯ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಸಿಕೊಂಡು ಕೌಶಲ್ಯ ಆಧಾರಿತ ಪ್ರಯೋಗಾಲಯವನ್ನು ನಡೆಸಬಹುದು. ಟೆಲಿಮೆಡಿಸಿನ್‌ ಹಾಗೂ ಟೆಲಿ ಕನ್ಸಲ್ಟೇಷನ್‌ ಕೂಡ ಮಾಡಬಹುದು ಎಂದರು.

ಆನ್‌ಲೈನ್‌ ಮೂಲಕ ಔಷಧಿಗಳ ಮಾಹಿತಿ ತಿಳಿಸಬಹುದು. ಆದರೆ, ರೋಗಿಯನ್ನು ಭೌತಿಕವಾಗಿ ಮುಟ್ಟುವಿಕೆಯಿಂದ ಆತನ ಹೃದಯ ಬಡಿತ ಹಾಗೂ ರಕ್ತದೊತ್ತಡಗಳನ್ನು ತಿಳಿದುಕೊಂಡು ಔಷಧಿ ನೀಡುವುದೇ ಉತ್ತಮ. ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಆದರೆ, ಎಲ್ಲ ಕ್ಷೇತ್ರಗಳಿಗೆ ಹಾಗೂ ಎಲ್ಲ ಸಂದರ್ಭಗಳಲ್ಲೂ ಅದರ ಮೇಲೆ ಅವಲಂಬಿತವಾಗಬಾರದು ಎಂದರು.
 

Follow Us:
Download App:
  • android
  • ios