ನವದೆಹಲಿ, (ಜುಲೈ.07): . ಕೋವಿಡ್‌ನಿಂದಾಗಿ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ ಇದ್ದು, ಅದಕ್ಕೆ ಸರಿಹೊಂದುವಂತೆ ಶೈಕ್ಷಣಿಕ ವರ್ಷವನ್ನು ಸರಿದೂಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. 

ಈ ಹಿನ್ನೆಲೆಯಲ್ಲಿ  ಸಿಬಿಎಸ್‌ಇ 9, 10, 11 ಮತ್ತು 12ನೇ ತರಗತಿಯ ಪಠ್ಯಕ್ರಮದಲ್ಲಿ ಶೇ.30 ಕಡಿತಗೊಂದಿಗೆ ಈ ಬಾರಿಯ ಶೈಕ್ಷಣಿಕ ವರ್ಷ ಮುಕ್ತಾಯಗೊಳಿಸಲು ತೀರ್ಮಾನಿಸಿದೆ.

ಆಗಸ್ಟ್‌ ಬಳಿಕ ಶಾಲೆ, ಕಾಲೇಜು ಆರಂಭಕ್ಕೆ ಚಿಂತನೆ

ಈ ಕುರಿತಂತೆ ಮಾಹಿತಿ ನೀಡಿರುವ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್‌ಇ) ಕೋವಿಡ್-19 ಸಂದರ್ಭದಲ್ಲಿ ಮಾರ್ಚ್ ನಿಂದ ಆರಂಭಗೊಳ್ಳಬೇಕಿದ್ದಂತ ಶಾಲೆಗಳು ಆರಂಭಗೊಂಡಿಲ್ಲ. ಹೀಗಾಗಿ ಈ ಬಾರಿಯ ಪಠ್ಯಕ್ರಮದಲ್ಲಿ ಶೇ.30 ಕಡಿತಗೊಳಿಸಿ ವಿದ್ಯಾರ್ಥಿಗಳ ಶೈಕ್ಷಣಿಕ, ಮಾನಸಿಕ, ದೈಹಿಕ ಜ್ಞಾನಾರ್ಜನೆಗೆ ಎಷ್ಟು ಸಾಧ್ಯವೋ ಅಷ್ಟು ಮಾತ್ರವೇ ಇಟ್ಟು, ಶೈಕ್ಷಣಿಕ ವರ್ಷವನ್ನು ಮುಗಿಸಲು ಪಠ್ಯಕ್ರಮದಲ್ಲಿ ಕಡಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಅಂದಹಾಗೇ ಪಠ್ಯಕ್ರಮದಲ್ಲಿ ಮಾತ್ರವೇ ಕಡಿತಗೊಳಿಸಲಾಗಿದೆಯೇ ವಿನಹ, ಇಂಟರ್ನಲ್ ಮಾರ್ಕ್ಸ್ ಹಾಗೂ ಬೋರ್ಡ್ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇದು ವಿದ್ಯಾರ್ಥಿಗಳು, ಶಿಕ್ಷಕರ ಶೈಕ್ಷಣಿಕ ಕ್ರಮದ ದೃಷ್ಠಿಯಿಂದ ಕೈಗೊಂಡ ಕ್ರಮವಾಗಿದೆ ಎಂದು ತಿಳಿಸಿದೆ.

ಕರ್ನಾಟಕದಲ್ಲೂ ಸಹ ಶಾಲಾ ಪಠ್ಯಕ್ರಮ ಕಡಿತ ಬಗ್ಗೆ ಈ ಹಿಂದೆ ಸುದ್ದಿ ಕೇಳಿಬಂದಿತ್ತು. ಈ ಬಗ್ಗೆ ಸ್ವತಃ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಸಹ ಪಠ್ಯಕ್ರಮ ಕಡಿತಕ್ಕೆ ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ, ಈ ಸುದ್ದಿ ಅಲ್ಲಿಗೆ ನಿಂತಿದೆ.