ಮಂಜನಾಥ ಗದಗಿನ

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಇಡೀ ರಾಜ್ಯದಲ್ಲೇ ಗಮನ ಸೆಳೆಯುವಂತೆ ಮಾಡಿದ ಕೀರ್ತಿ ಸಾಹಿತಿ ಹಾಗೂ ಶಾಲೆಯ ಶಿಕ್ಷಕ ವೀರಣ್ಣ ಮಡಿವಾಳರ ಎಂಬ ಅಸಾಧಾರಣ ವ್ಯಕ್ತಿಗೆ ಸಲ್ಲುತ್ತದೆ. ಶಾಲೆಯೊಂದು ಪ್ರಯೋಗಾಲಯವಾಗಬೇಕು ಎಂಬ ಅಭಿಲಾಷೆಯಿಂದ ಮಡಿವಾಳರು ಹಲವು ವರ್ಷಗಳಿಂದ ಶ್ರಮಿಸುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳೂ ಖಾಸಗಿ ಪಬ್ಲಿಕ್ ಶಾಲೆಗಳಿಗೆ ಪೈಪೋಟಿ ನೀಡಬೇಕು ಎಂಬ ಮಹತ್ತರ ಕನಸನ್ನು ಕಟ್ಟಿಕೊಂಡು ಅದೊಂದು ದಿನ ಸಾಮಾಜಿಕ ಜಾಲತಾಣ ದಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡರು. ಇದನ್ನು ನೋಡಿದ ಸಹೃದಯಿಗಳು ಮಡಿವಾಳರ ಕನಸಿನ ಶಾಲೆಯ ಆರಂಭಕ್ಕೆ ಕೈ ಜೋಡಿಸಿದರು. ನಂತರ ಮಡಿವಾಳರ ಅವರಿಂದ ನಡೆದದ್ದು ‘ಸ್ಮಾರ್ಟ್ ಪ್ಲಸ್ ಕ್ಲಾಸ್’ ಎಂಬ ಹೊಸ ಕಲ್ಪನೆಯ ಶಾಲೆಯ ಆರಂಭ.

ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸಬೇಕು ಎಂಬ ಕನಸು ನನ್ನದಾಗಿತ್ತು. ಈ ಕನಸಿನಡಿಯಲ್ಲೇ ನಾನು ಸ್ಮಾರ್ಟ್ ಪ್ಲಸ್ ಕ್ಲಾಸ್ ಆರಂಭಿಸಿದ್ದೇನೆ. ನನ್ನ ಈ ಪರಿಕಲ್ಪನೆ ನೋಡಿ ನಾಲ್ಕು ಸರ್ಕಾರಿ ಶಾಲೆಗಳು ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ನಿರ್ಮಾಣಕ್ಕೆ ಮುಂದಾಗಿವೆ. ರಾಜ್ಯದಲ್ಲಿ ಎಲ್ಲ ಶಾಲೆಗಳು ಈ ರೀತಿ ನಿರ್ಮಾಣವಾಗಬೇಕು ಎಂಬ ಆಶಯ ನನ್ನದು. - ವೀರಣ್ಣ ಮಡಿವಾಳರ, ಶಿಕ್ಷ

ಏನಿದು ಸ್ಮಾರ್ಟ್ ಪ್ಲಸ್ ಕ್ಲಾಸ್

ನಾವೆಲ್ಲ ಸ್ಮಾರ್ಟ್ ಕ್ಲಾಸ್‌ಗಳ ಬಗ್ಗೆ ಕೇಳಿದ್ದೇವೆ. ಸ್ಮಾರ್ಟ್ ಕ್ಲಾಸ್ ಅಂದ್ರೆ ಮಕ್ಕಳಿಗೆ ಪಿಪಿಟಿ(ಪವರ್ ಪಾಯಿಂಟ್ ಪ್ರೆಸೆಂಟೇಶನ್) ಮೂಲಕ ಪರದೆ ಮೇಲೆ ಪಾಠ ಮಾಡುವುದಾಗಿದೆ. ಆದರೆ ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ಎನ್ನುವುದು ಅದಕ್ಕೂ ಒಂದು ಹೆಜ್ಜೆ ಮುಂದೆ. ಈ ಕಲ್ಪನೆ ಹುಟ್ಟಿಕೊಂಡಿದ್ದು ಮಡಿವಾಳರ ಅವರಿಂದ. ಸ್ಮಾರ್ಟ್ ಪ್ಲಸ್ ಕ್ಲಾಸ್ ಅಂದ್ರೆ ಮಕ್ಕಳಿಗೆ ಟಿವಿಯ ಮೂಲಕ ಸಚಿತ್ರವಾಗಿ ವೈರ್‌ಲೆಸ್ ಇಂಟರ್ನೆಟ್‌ನ ಬಳಕೆಯಿಂದ ಪಾಠ ಮಾಡುವುದು. ಇದಕ್ಕೆ ಮೊಬೈಲ್ ಮೂಲಕ ಇಂಟರ್ನೆಟ್ ಸಂಪರ್ಕ ಕಲ್ಪಿಸಿ, ಮಕ್ಕಳ ಪಠ್ಯದ ಪೂರಕವಾದ ವಿಷಯವನ್ನು ಯೂಟ್ಯೂಬ್‌ನಲ್ಲಿ ತೋರಿಸಿ ಪಾಠ ಮಾಡುವುದಾಗಿದೆ. ಇದು ಪರಿಣಾಮಕಾರಿಯಾಗಿ ಮಕ್ಕಳ ಮನಸ್ಸಿಗೆ ತಲುಪುತ್ತದೆ. ಇದರಿಂದ ಮಕ್ಕಳಿಗೆ ಬೇಸರವಾಗುವುದು, ಆಯಾಸವಾಗುವುದಿಲ್ಲ ಬದಲಾಗಿ ಉತ್ಸಾಹದಿಂದ ಕಲಿಯುತ್ತಾರೆ. ಅದಕ್ಕಾಗಿ ಈ ಮೊದಲ ಪ್ರಯತ್ನದಲ್ಲಿ ಈ ಶಾಲೆಯಲ್ಲಿ ೪೦ ಇಂಚಿನ ಟಿವಿಯನ್ನೂ ನಿಡಗುಂದಿ ಗ್ರಾಮ ಸರ್ಕಾರಿ ಕಿರಿಯ ಪ್ರಥಮಿಕ ಶಾಲೆಯಲ್ಲಿ ಹಾಕಲಾಗಿದೆ.

ಗ್ರೀನ್ ಬೋರ್ಡ್

ಸ್ಮಾರ್ಟ್ ಪ್ಲಸ್ ಕ್ಲಾಸ್ ಮೂಲಕ ಎಲ್ಲ ಮಕ್ಕಳಿಗೂ ಗ್ರೀನ್ ಬೋರ್ಡ್‌ಗಳನ್ನು ಒದಗಿಸಲಾಗಿದೆ. ಇದರಿಂದ ಕಲಿಕೆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹೆಚ್ಚುತ್ತದೆ. ವಿಶೇಷ ಎಂದರೆ ಗ್ರೀನ್ ಬೋರ್ಡ್ ಸೌಲಭ್ಯ ಇರುವುದರಿಂದ ಮಕ್ಕಳು ಶಾಲೆಗೆ ಪುಸ್ತಕ, ಪೆನ್ಸಿಲ್ ತರಲೇ ಬೇಕೆಂದೇನಿಲ್ಲ. ಹಾಗಾಗಿ  1 ರಿಂದ 5 ನೇ ತರಗತಿವರೆಗಿರುವ ಈ ಶಾಲೆಯಲ್ಲಿ ಸುಮಾರು 120 ಮಕ್ಕಳಿಗೆ ಇಬ್ಬರೇ ಶಿಕ್ಷಕರಿಂದ ಪರಣಾಮಕಾರಿ ಶಿಕ್ಷಣ ನೀಡಲಾಗುತ್ತಿದೆ.ಇದೆ. ಪ್ರತಿ ಮಕ್ಕಳಿಗೂ ಕುರ್ಚಿ ಸರ್ಕಾರಿ ಶಾಲೆಯಾಗಿ ಯಾವುದೇ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಕನ್ನಡಾಭಿವೃದ್ಧಿ ಪ್ರಾಧಿಕಾರ ನೀಡಿದ 1 ಲಕ್ಷ ಹಣದಿಂದ ಶಾಲೆಯ ಮಕ್ಕಳಿಗೆ ಖುರ್ಚಿ ಹಾಗೂ ರೌಂಡ್ ಟೇಬಲ್‌ಗಳನ್ನು ತರಲಾಗಿದೆ. ಮಕ್ಕಳು ಈ ಖುರ್ಚಿ ಮೇಲೆ ಕುಳಿತು ಆರಾಮಾಗಿ ಪಾಠ ನೋಡಿ ಕಲಿಬಹುದಾಗಿದೆ. ಇದಷ್ಟೇ ಅಲ್ಲದೇ, ಶಾಲೆಯಲ್ಲಿ ಆಗಾಗ ಚರ್ಚಾ ಸ್ಪರ್ಧೆ ಏರ್ಪಡಿಸಿದಾಗ ಮಕ್ಕಳು ಈ ರೌಂಡ್ ಟೇಬಲ್ ಸುತ್ತಲೂ ಖುರ್ಚಿ ಹಾಕಿ ಚರ್ಚೆಗಳನ್ನೂ ನಡೆಸುತ್ತಾರೆ. ಇದಕ್ಕೆ ಪೂರಕವಾಗಿ ಶಾಲೆಯ ಖ್ಯೋಪಾಧ್ಯಾಯರ ಕೊಠಡಿಯನ್ನೂ ಹೈಟೆಕ್ ಟಚ್ ನೀಡಲಾಗಿದೆ. 

ಎರಡನೇ ಯೂನಿಟ್ ಆರಂಭ

ಸ್ಮಾರ್ಟ್ ಪ್ಲಸ್ ಕ್ಲಾಸ್‌ನಲ್ಲಿ ಎರಡು ಯೂನಿಟ್ ಮಾಡಿಕೊಳ್ಳಲಾಗಿದೆ. ಈಗಾಗಲೇ ಬೆಂಗಳೂರಿನ ಶಶಿಧರ ಟಿ.ಎಂ ಹಾಗೂ ಚನ್ನಪಟ್ಟಣದಯತೀಶ ಚಂದ್ರ ಅವರು ಕೊಟ್ಟ ಆರ್ಥಿಕ ನೆರವಿನಿಂದ ಪ್ರಥಮ ಯೂನಿಟ್ ಕ್ಲಾಸ್‌ನಲ್ಲಿ ಡಿಜಿಟಲ್ ಪಾಠ ಬೋಧನೆ ಮಾಡಲಾಗುತ್ತಿದೆ. ಒಂದನೆ ಯೂನಿಟ್‌ನಲ್ಲಿ ೪೦ ಇಂಚಿನ ಟಿವಿ ಹೊಂದಿದ್ದು, ಎರಡನೇ ಯುನಿಟ್‌ನಲ್ಲಿ ೫೦ ಇಂಚಿನ ಟಿವಿ ತರಲಾಗುತ್ತಿದೆ. ಈ ಟಿವಿಯಲ್ಲಿ ಇನ್ನಷ್ಟು ಹೆಚ್ಚಿನ ಎಚ್‌ಡಿ ಹಾಗೂ ಬಹು ಆಯ್ಕೆಗಳಿರಲಿದ್ದು, ಮತ್ತಷ್ಟು ಸ್ಮಾರ್ಟ್ ಪ್ಲಸ್ ಕ್ಲಾಸ್ ನಡೆಸಲು ಅನುಕೂಲವಾಗಲಿದೆ ಎನ್ನುತ್ತಾರೆ ವೀರಣ್ಣ ಮಡಿವಾಳರ. ಅಲ್ಲದೆ ಈ ಶಾಲೆ ಮೂರು ವರ್ಷದಲ್ಲಿ ಅದ್ಭುತವಾಗಿ ಬೆಳೆದು ಖಾಸಗಿ ಶಾಲೆಗಳ ಮಕ್ಕಳು ಈ ಶಾಲೆಗೆ ಬರುವಂತಾಗಿದೆ. ವರ್ಷದಿಂದ ವರ್ಷಕ್ಕೆ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಶಾಲೆಯ ಮಾದರಿಯಲ್ಲೇ ರಾಜ್ಯದೆಲ್ಲಡೆ ಮಾಡಿದರೆ ಸರ್ಕಾರಿ ಶಾಲೆಗಳನ್ನು ಉಳಿಸಿ ಎಂಬ ಮಾತು ತಾನಾಗಿಯೇ ಮಾಯವಾಗಿ, ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚುವುದು ಖಚಿತ.