ಆಫೀಸಿನಲ್ಲಿ ನಿದ್ದೆ ಬಂದು ಕುಗುರಿ ಬೀಳುವಂತಾಗುವುದು ಬಹಳ ಮುಜುಗರದ ಸಂಗತಿ. ಆದರೆ ಇದು ಬಹಳಷ್ಟು ಜನರು ಎದುರಿಸುವ ಸಮಸ್ಯೆ ಕೂಡಾ. ನಿರಂತರವಾಗಿ ಸ್ಕ್ರೀನ್ ನೋಡುವುದರಿಂದಲೋ, ಕೆಲಸದ ಒತ್ತಡದಿಂದಲೋ, ಶಿಫ್ಟ್ ಸಮಸ್ಯೆಯೋ ಅಥವಾ ಕೌಟುಂಬಿಕ ಕಾರಣದಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲಾಗದ್ದಕ್ಕೋ ಒಟ್ಟಿನಲ್ಲಿ ಕಚೇರಿಯಲ್ಲಿ ನಿದ್ರೆ ಬರುವುದರಿಂದ ಕೆಲಸದ ಗುಣಮಟ್ಟವನ್ನೂ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಈ ತೂಕಡಿಕೆ ಸಮಸ್ಯೆಯಿಂದ ಹೊರಬರಲು ನೀವೇನು ಮಾಡಬಹುದು?

1. ಡೆಸ್ಕ್‌ಗೆ ತಲೆ ಕೊಡಿ
ಅಯ್ಯೋ ತಮಾಷೆಯಲ್ಲ ಸ್ವಾಮಿ. ನಿದ್ದೆಯನ್ನು ಗೆಲ್ಲುವ ಹೋರಾಟಕ್ಕಿಂತ ಅದಕ್ಕೆ ಶರಣಾಗಿ ಬಿಡೋದೇ ಉತ್ತಮ. ಡೆಸ್ಕ್‌ ಮೇಲೆ ತಲೆ ಇರಿಸಿ 10 ನಿಮಿಷಗಳ ಕಾಲ ಪವರ್ ನ್ಯಾಪ್ ತೆಗೆದುಕೊಳ್ಳಿ. ಖಂಡಿತವಾಗಿಯೂ ಇದು ಮೈಂಡ್ ಫ್ರೆಶ್ ಮಾಡಿ, ಕೆಲಸದತ್ತ ಹೆಚ್ಚು ಫೋಕಸ್ ಮಾಡಲು ಸಹಾಯ ಮಾಡುತ್ತದೆ. 

ಕರಿಯರ್ ಆಯ್ಕೆ ಮಾಡುವಾಗ ಅಪ್ಪಿತಪ್ಪಿಯೂ ಈ 9 ತಪ್ಪುಗಳನ್ನು ಮಾಡ್ಬೇಡಿ..!

2. ಕಾಫಿ ಬ್ರೇಕ್ ತೆಗೆದುಕೊಳ್ಳಿ
ಸಾಮಾನ್ಯವಾಗಿ ಬಹುತೇಕ ಕಚೇರಿಗಳ ಕ್ಯಾಂಟೀನ್‌ಗಳಲ್ಲಿ ಕಾಫಿ ವೆಂಡಿಂಗ್ ಮೆಶಿನ್ ಇಟ್ಟಿರುವುದಕ್ಕೆ ಕಾರಣವಿರುತ್ತದೆ. ನೀವು ನಿದ್ದೆಯಿಂದಾಗಿ ಸಂಪೂರ್ಣ ಅಸಹಾಯಕರಾಗಿ, ಪವರ್ ನ್ಯಾಪ್ ತೆಗೆದುಕೊಳ್ಳುವ ಆಯ್ಕೆ ಸಹೋದ್ಯೋಗಿಗಳೆದುರು ಮುಜುಗರ ತರುತ್ತದೆಂದರೆ ಕಾಫಿ ಸೇವನೆ ನಿಮಗೆ ಸರಿಯಾದ ಆಯ್ಕೆ. ಕಾಫಿಯಲ್ಲಿರುವ ಕೆಫಿನ್ ಖಂಡಿತಾ ನಿಮ್ಮನ್ನು ಎಚ್ಚರಿಸಿ, ಕೆಲಸ ಮಾಡಲು ಹೊಸ ಎನರ್ಜಿ ನೀಡುತ್ತದೆ.

3. ಸಣ್ಣದೊಂದು ವಾಕ್
ಯಾವ ಉಪಾಯವೂ ಕೆಲಸ ಮಾಡುತ್ತಿಲ್ಲವೆಂದಾದರೆ ಕುರ್ಚಿ ಬಿಟ್ಟೆದ್ದು ಸಣ್ಣದೊಂದು ವಾಕ್ ಮಾಡಿ. ಟೆರೇಸ್‌ಗೆ ಹೋಗಿ ತಂಪಾದ ಫ್ರೆಶ್ ಗಾಳಿ ಪಡೆದು ಒಂದೆರಡು ಸ್ಟ್ರೆಚಿಂಗ್ ಎಕ್ಸರ್ಸೈಸ್ ಮಾಡಿ. 

4. ಹೈಡ್ರೇಟ್ ಮಾಡಿಕೊಳ್ಳಿ
ಬೆಳಗ್ಗೆಯಿಂದ ಎಷ್ಟು ಲೋಟ ನೀರು ಕುಡಿದಿರಿ ಯೋಚಿಸಿ. 1 ಅಥವಾ 2 ಲೋಟ ಎಂಬುದು ಉತ್ತರವಾಗಿದ್ದರೆ ಬಹುಷಃ ಅದೂ ನಿಮ್ಮ ನಿದ್ದೆಗೆ ಕಾರಣವಾಗಿರಬಹುದು. ಹೀಗಾಗಿ ತಕ್ಷಣ ಎದ್ದು ಹೋಗಿ ನೀರಿನ ಬಾಟಲ್ ತುಂಬಿಸಿಕೊಂಡು ಬನ್ನಿ. ಪದೇ ಪದೆ ನೀರು ಕುಡಿಯುವುದರಿಂದ ನಿದ್ದೆಗಣ್ಣಿನಿಂದ ಹೊರಬರಬಹುದು. ಮಧ್ಯೆ ಒಮ್ಮೆ ಕ್ಯಾಂಟೀನ್‌ಗೆ ಹೋಗಿ ಶುಗರ್ಲೆಸ್ ಫ್ರೂಟ್ ಜ್ಯೂಸ್ ಕುಡಿಯುವುದೂ ಉತ್ತಮ.

ಕೆಲಸ ಬಿಡುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ....

5. ಸ್ಮಾರ್ಟ್ ವರ್ಕ್ ಮಾಡಿ
ದಿನ ಕಳೆದಂತೆಲ್ಲ ನಮ್ಮ ದೇಹ ಎನರ್ಜಿ ಕಳೆದುಕೊಳ್ಳುತ್ತಾ ಬರುವುದು ಸಾಮಾನ್ಯ. ಹೀಗಾಗಿ, ಕೆಲಸದ ಬಹುತೇಕ ಭಾಗವನ್ನು ಕಚೇರಿ ಸಮಯದ ಮೊದಲಾರ್ಧದಲ್ಲಿ ಮುಗಿಸಿಕೊಳ್ಳುವುದು ಉತ್ತಮ. ಸಾಮಾನ್ಯವಾಗಿ ಮಧ್ಯಾಹ್ನ ಊಟದ ಬಳಿಕ ನಿದ್ದೆ ಬರುವುದು ಹೆಚ್ಚಾಗಿದ್ದರಿಂದ ಈ ನೀತಿ ಅಳವಡಿಸಿಕೊಂಡರೆ ನಿದ್ದೆ ಬಂದರೂ ಹೆಚ್ಚಿನ ಟೆನ್ಷನ್ ಇರದು. 

6. ಕಣ್ಣಿಗೆ ಸ್ಟ್ರೆಸ್ ಮಾಡಬೇಡಿ
ನಿರಂತರ ಸ್ಕ್ರೀನ್ ನೋಡುವುದರಿಂದ ಕಣ್ಣುಗಳು ಸುಸ್ತಾಗುತ್ತವೆ. ಹೀಗಾಗಿ ಮುಚ್ಚಿಕೊಳ್ಳುವ ಹಟ ಹಿಡಿಯುತ್ತವೆ. ಆದ್ದರಿಂದ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಕಣ್ಣುಗಳನ್ನು ಸ್ಕ್ರೀನ್‌ನಿಂದ ಅತ್ತಿತ್ತ ಆಡಿಸಿ. ಅಕ್ಕ ಪಕ್ಕ ಕುಳಿತವರೊಂದಿಗೆ ಒಂದೆರಡು ಮಾತನಾಡಿ.