ಕೊಡಗು: ಕೇರಳದ ಕುಖ್ಯಾತ ಮಾವೋವಾದಿ ನಾಯಕ ಸಿ.ಪಿ.ಜಲೀಲ್ ಎನ್‌ಕೌಂಟರ್‌ನಲ್ಲಿ ಮೃತನಾದ ನಂತರ, ನಕ್ಸಲ್ ಗುಂಪೊಂದು ತಮಿಳುನಾಡು ಅಥವಾ ಕರ್ನಾಟಕದತ್ತ ಮುಖ ಮಾಡಿದೆ ಎಂದು ಹೇಳಲಾಗಿತ್ತು. ಈ ಬೆನ್ನಲ್ಲೇ ಕರ್ನಾಟಕದ ನಕ್ಸಲ್ ವಿರೋಧಿ ಪಡೆ ಕೇರಳ-ಕೊಡಗು ಗಡಿ ಭಾಗದಲ್ಲಿ ಕೂಂಬಿಂಗ್ ಆರಂಭಿಸಿದೆ.

ಕೊಡಗಿನ ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಎನ್‌ಎನ್‌ಎಫ್ ಹೇಳಿದೆ. ಕೊಡಗು-ಕೇರಳ ಗಡಿ ಗ್ರಾಮಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಯುತ್ತಿದೆ. ಮಾಕುಟ್ಟ, ಕುಟ್ಟ, ಸಂಪಾಜೆ, ವ್ಯಾಪ್ತಿಯಲ್ಲಿ ಎಎನ್‌ಎಫ್ ಕಾರ್ಯ ಪ್ರವೃತ್ತವಾಗಿದೆ.

ಕೇರಳದ ನಕ್ಸಲ್ ವಿರೋಧಿ ಪಡೆ ವೈನಾಡು ಜಿಲ್ಲೆಯ ವೈತಿರಿ ಬಳಿ ಮಾವೋವಾದಿ ತಂಡದ ಚಲನವಲನವನ್ನು ಗುರುತಿಸಿತ್ತು. ಸ್ಥಳಕ್ಕೆ ಧಾವಿಸಿ, ಶರಣಾಗುವಂತೆಯೂ ಆಗ್ರಹಿಸಿತ್ತು. ಆದರೆ, ಗುಂಡಿನ ಮೂಲಕ ನಕ್ಸಲರು ಪ್ರತ್ಯುತ್ತರ ನೀಡಿದ ಕಾರಣ ಪೊಲೀಸರು ಪ್ರತಿದಾಳಿ ನಡೆಸಿದ್ದರಿಂದ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದು, ನಕ್ಸಲ್ ಮುಖಂಡ ಹತನಾಗಿದ್ದ.