ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣಕ್ಕೆ ರೂ. 200 ಕೋಟಿ ಬಿಡುಗಡೆಯಾಗಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದ್ದು, ಜನ ಜಾನುವಾರುಗಳ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವರದಿ: ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ: ಧಾರವಾಡ ಜಿಲ್ಲೆಯ ಎರಡು ಪ್ರಮುಖ ಹಳ್ಳಗಳಾದ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನೀರಿನ ಸದ್ಬಳಕೆಗೆ ಅಗತ್ಯ ಯೋಜನೆ ಸಿದ್ಧಗೊಳಿಸಿದ್ದು ಶಾಶ್ವತ ಪರಿಹಾರ ಕ್ರಮಕೈಗೊಳ್ಳಲು ಆರಂಭಿಕವಾಗಿ ರೂ. 200 ಕೋಟಿ ಹಣ ಸರ್ಕಾರದಿಂದ ಈಗಾಗಲೇ ಬಿಡುಗಡೆ ಆಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಚ ಎಸ್ ಲಾಡ್ ಅವರು ಹೇಳಿದರು.

ಅವರು ಇಂದು ಮಧ್ಯಾಹ್ನ ನವಲಗುಂದ ತಾಲೂಕಿನ ಯಮನೂರು ಗ್ರಾಮದ ಸೇತುವೆ ಹತ್ತಿರ ಬೆಣ್ಣಿಹಳ್ಳದ ನಾತೆಯನ್ನು ವೀಕ್ಷಣೆ ಮಾಡಿದ ನಂತರ ಮಾತನಾಡಿದರು ಬೆಣ್ಣೆಹಳ್ಳದಿಂದ ಧಾರವಾಡ ಗದಗ ಮತ್ತು ಹಾವೇರಿ ಜಿಲ್ಲೆಗಳ 6 ತಾಲೂಕುಗಳ 56 ಹಳ್ಳಿಗಳು ಬಾಧಿತವಾಗುತ್ತವೆ. ಬೆಣ್ಣಿಹಳ್ಳವು ಈ ಮೂರು ಜಿಲ್ಲೆಗಳ 148 ಕಿ.ಮೀ ಉದ್ದದಲ್ಲಿ ಹರಿಯುತ್ತದೆ. ಇದು ಸುಮಾರು 4800 ಚದರ ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ ಎಂದು ಸಚಿವರು ಹೇಳಿದರು.

2012 ರಲ್ಲಿ ನೀರಾವರಿ ತಜ್ಞ ಡಾ. ಜಿ.ಎಸ್ ಪರಮಶಿವಯ್ಯ ಅವರು ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನೀರಿನ ಸದ್ಬಳಕೆ ಕುರಿತು ನೀಡಿದ ಅಧ್ಯಯನ ವರದಿಯನ್ನು ಸರಕಾರ ಪರಿಶೀಲಿಸಿದೆ.ಅದರ ಆಧಾರದ ಮೇಲೆ ನೀರಾವರಿ ನಿಗಮದ ವರದಿ ಪಡೆದು ಅನುಷ್ಠಾನಗೊಳಿಸುತ್ತದೆ ಎಂದು ಸಚಿವರು ಹೇಳಿದರು.

ಸ್ಥಳೀಯ ಶಾಸಕರಾದ ಎನ್.ಎಚ್,ಕೋನರಡ್ಡಿ ಅವರ ನಿರಂತರ ಪ್ರಯತ್ನ ಹಾಗೂ ಒತ್ತಾಯದ ಫಲವಾಗಿ ಮಾನ್ಯ ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯದಲ್ಲಿ ರೂ. 200 ಕೋಟಿಗಳ ಅನುದಾನ ನೀಡಿ, ಹಣ ಬಿಡುಗಡೆ ಮಾಡಿದ್ದಾರೆ. ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಅಂತಿಮ ಹಂತದಲ್ಲಿದೆ ಮಳೆಗಾಲ ಮುಗಿದ ನಂತರ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.

ಯಮನೂರ ಸೇತುವೆ ಹತ್ತಿರ ಸಾರ್ವಜನಿಕರ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಬೆಣ್ಣಿಹಳ್ಳ ದಡದಲ್ಲಿ ಸ್ನಾನಘಟ್ಟ, ಉತ್ತಮ ರಸ್ತೆ, ಹೂಳು ಹಳ್ಳಕ್ಕೆ ಬರದಂತೆ ಮಾಡಲು ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳ ಮಳೆಗಾಲದಲ್ಲಿ ಉಂಟಾಗುವ ಹಳ್ಳಗಳ ಪ್ರವಾಹ, ಅತಿವೃಷ್ಟಿ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸಿ ಯಾವುದೇ ಜನ ಜಾನುವಾರ ಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಈಗಾಗಲೇ ಜಿಲ್ಲಾಮಟ್ಟದಲ್ಲಿ ಸಭೆ ಜರುಗಿಸಿ, ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕೇಂದ್ರ ಸ್ಥಾನ ಬಿಡದಂತೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರದಂತೆ ನಿರ್ದೇಶಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರವಾಹ ಪರಿಸ್ಥಿತಿ ಎದುರಿಸಲು ಅನುವಾಗುವಂತೆ ನವಲಗುಂದ ಪಟ್ಟಣದಲ್ಲಿ ಅಗ್ನಿಶಾಮಕ ದಳದ ತಾತ್ಕಾಲಿಕ ನಿಲ್ದಾಣ ತೆರೆಯಲಾಗಿದೆ.ಬೋಟ್ ಸೇರಿದಂತೆ ಎಲ್ಲ ಜೀವ ರಕ್ಷಕ ಪರಿಕರಗಳನ್ನು ಪೂರೈಸಲಾಗಿದೆ. ಸ್ಥಳೀಯ ಈಜುಗಾರರನ್ನು, ಸ್ವಯಂಸೇವಕರ ತಂಡಗಳನ್ನು ಗ್ರಾಮ ಮಟ್ಟದಲ್ಲಿ ರಚಿಸಲಾಗಿದೆ. ಸ್ಥಳೀಯರ ಸಹಭಾಗಿತ್ವದಲ್ಲಿ ತಕ್ಷಣ ಸ್ಪಂದಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗಿದೆ ಎಂದು ಅವರು ಹೇಳಿದರು.

ನವಲಗುಂದ ತಾಲೂಕಿನಲ್ಲಿ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಎರಡು ಹಳ್ಳಗಳು ಹರಿದು ಇದೇ ತಾಲೂಕಿನಲ್ಲಿ ಕೂಡಿ ಮುಂದೆ ಗದಗ ಜಿಲ್ಲೆಗೆ ಹೋಗುವುದರಿಂದ ಪ್ರವಾಹ ಹೆಚ್ಚಿನ ಮಟ್ಟದಲ್ಲಿರುತ್ತದೆ.ಅದಕ್ಕಾಗಿ ಪ್ರವಾಹ ಪರಿಸ್ಥಿತಿ ಎದುರಿಸಲು ಪ್ರತ್ಯೇಕ 10 ತಂಡಗಳನ್ನು ರಚಿಸಿ, ಸನ್ನದಗೊಳಿಸಲು ಸಚಿವರು ನಿರ್ದೇಶಿಸಿದರು.

ಈಗಾಗಲೇ ಜನರ ಸಂರಕ್ಷಣೆಗೊಸ್ಕರ ಐದು ತಂಡವನ್ನು ಸಿದ್ಧ ಮಾಡಲಾಗಿದೆ. ಅವರು ನವಲಗುಂದ ತಾಲೂಕಿನಲ್ಲಿ ದಿನದ 24 ಗಂಟೆ ಸಿದ್ಧರಿರುತ್ತಾರೆ ಒಂದೂ ಜೀವ ಹಾನಿ ಆಗಬಾರದು ಎಂದು ಮೊದಲೆ ವ್ಯವಸ್ಥೆ ಮಾಡಿಕೊಳ್ಳುವ ದೃಷ್ಠಿಯಿಂದ ಐದು ತಂಡಗಳು ಸಿದ್ದಪಡಿಸಲಾಗಿದೆ. ಮುಂದಿನ ಮೂರು ತಿಂಗಳು ಬೇರೆ ಭಾಗದಲ್ಲಿ ಮಳೆ ಆದರೂ ಇಲ್ಲಿನ ಪರಿಸ್ಥಿತಿ ತೊಂದರೆಗೆ ಉಂಟಾಗಬಹುದು ಎಂದು ಎಲ್ಲಿಯವರೆಗೆ ಮಳೆಯ ಆತಂಕ ಇರುತ್ತದೆಯೋ ಅಲ್ಲಿಯವರೆಗೆ ಈ ಐದು ತಂಡಗಳು ಜನರ ಸಂರಕ್ಷಣೆಗೆ ಇರುತ್ತಾರೆ ಎಂದು ಹೇಳಿದರು.

ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದ್ದು ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಪ್ರತಿ ಜಿಲ್ಲೆಯಲ್ಲಿರುವ ಉಸ್ತುವಾರಿ ಸಚಿವರು ಮತ್ತು ಶಾಸಕರು, ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ಬರುವ ಪ್ರತಿಯೊಂದು ಪ್ರವಾಹ ಪೀಡಿತ ಪ್ರದೇಶಗಳನ್ನು ಮತ್ತು ಹಳ್ಳಗಳನ್ನು ಪರೀಕ್ಷಿಸಿ, ವರದಿ ಸಲ್ಲಿಸಬೇಕೆಂದು ಹೇಳಿದ್ದಾರೆ. ಅದರಂತೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳದ ಪ್ರವಾಹ ಪೀಡತವಾಗಬಹುದಾದ ಪ್ರದೇಶಗಳಿಗೆ ಇಂದು ಭೇಟಿ ನೀಡಿದ್ದಾರೆ. ನವಲಗುಂದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರವಾಹ ಪೀಡತ ಪ್ರದೇಶಗಳನ್ನು ತೋರಿಸಿ, ವಿವರಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ವರ್ಷವೂ ಬೆಣ್ಣಿಹಳ್ಳ ಪ್ರವಾಹವಾಗುವದರಿಂದ ಇದನ್ನು ನಿಯಂತ್ರಿಸಿ ಶಾಶ್ವತ ಪರಿಹಾರ ಕಾಣಲು ಮಾನ್ಯ ಮುಖ್ಯಮಂತ್ರಿಗಳು ಅಗತ್ಯ ಅನುದಾನ ನೀಡುವ ಭರವಸೆ ನೀಡಿ, ಈಗಾಗಲೇ ಕಳೆದ ಬಜೆಟ್‍ನಲ್ಲಿ ರೂ. 200 ಕೋಟಿ ಅನುದಾನ ನೀಡಿದ್ದಾರೆ. ಕಾಮಗಾರಿಯನ್ನು ಮಳೆಗಾಲದ ಗಂಭೀರತೆ ನೋಡಿಕೊಂಡು ಸಧ್ಯದಲ್ಲಿ ಆರಂಭಿಸಲಾಗುವುದು. ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣಕ್ಕೆ ಹಾಗೂ ಲಭ್ಯ ನೀರಿನ ಸದ್ಭಳಕೆಗೆ ಅಂದಾಜು ರೂ.1600 ಕೋಟಿ ಅನುದಾನದ ಅಗತ್ಯವಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರ ಮೂಲಕ ಕೇಂದ್ರ ಸರ್ಕಾರದ ಅನುದಾನ ತರಲು ವಿನಂತಿಸಲಾಗುವುದು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಅವರು ತಿಳಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಧಿಕವಾಗಿರುವದರಿಂದ ಜಿಲ್ಲೆಯ ಬಹುತೇಕ ಭಾಗದಲ್ಲಿ ಬಿತ್ತನೆ ಆರಂಭವಾಗಿರುವುದಿಲ್ಲ. ರೈತರಿಗೆ ಅಗತ್ಯವಿರುವ ಬೀಜ, ರಸಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ.

ಅತಿವೃಷ್ಠಿಯಿಂದ ಉಂಟಾಗುವ ಪ್ರವಾಹ ಹಾಗೂ ಇತರ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯ ಮುನ್ನಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

Scroll to load tweet…