ಬೆಂಗಳೂರಿನ ಪ್ರವಾಹದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಂದ ತೀವ್ರ ಛೀಮಾರಿ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಲೋಕಾಯುಕ್ತರು, ತೆರಿಗೆ ಹಣ ದುರುಪಯೋಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯ ಯೋಜನೆ ರೂಪಿಸಿ ಕೆಲಸ ಮಾಡದಿದ್ದರೆ ಕಠಿಣ ಕ್ರಮ, ಖಾಸಗಿ ಏಜೆನ್ಸಿ ಮೂಲಕ ಕಾರ್ಯ ನಿರ್ವಹಣೆ ಮೇಲ್ವಿಚಾರಣೆ ಎಂದು ಎಚ್ಚರಿಕೆ ನೀಡಿದರು. BWSSB, BMRCL ಸಂಸ್ಥೆಗಳ ಪಾತ್ರವನ್ನೂ ಪರಿಶೀಲಿಸಲಾಗುವುದು.
ಬೆಂಗಳೂರು (ಮೇ 23): ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಗಳು ಉಂಟಾಗಿದ್ದು, ಕೆಲವೆಡೆ ಬೃಹತ್ ಗಾತ್ರದ ಮರಗಳು, ಗೋಡೆಗಳು ಬಿದ್ದು ಕೆಲವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ಬಿಬಿಎಂಪಿ ಅಧಿಕಾರೊಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಲೋಕಾಯುಕ್ತರು, ಬಿಬಿಎಂಪಿ ಅಧಿಕಾರಿಗಳನ್ನು ಸಭೆಗೆ ವಿಚಾರಣೆಗೆ ಕರೆದು ಛೀಮಾರಿ ಹಾಕಿದ್ದಾರೆ. ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ನೀವು ಕೆಲಸ ಮಾಡೊಲ್ಲವೆಂದರೆ ಹೇಗೆ? ಬಿಬಿಎಂಪಿ ಮಳೆ ಪ್ರವಾಹ ತಡೆಗೆ ಒಂದು ಆಕ್ಷನ್ ಪ್ಲಾನ್ ಮಾಡಿಕೊಡಿ. ಅದರಂತೆ ಕೆಲಸ ಮಾಡುತ್ತೀರೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಲು ಖಾಸಗಿ ಏಜೆನ್ಸಿ ನೇಮಕ ಮಾಡುತ್ತೇವೆ. ನೀವು ಕೆಲಸ ಮಾಡದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕಳೆದೊಂದು ವಾರದಿಂದ ಸುರಿದ ಮಳೆಯಿಂದ ಬೆಂಗಳೂರಿನ ಜನರು ತುಂಬಾ ನೋವು ಅನುಭವಿಸಿದ್ದಾರೆ. ನಿನ್ನೆ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಲೋಕಾಯುಕ್ತ ತಂಡ ಭೇಟಿ ನೀಡಿ ಪರಿಸ್ಥಿತಿಯನ್ನು ನಿಖರವಾಗಿ ಪರಿಶೀಲಿಸಿತು. ಲೋಕಾಯುಕ್ತ ಬಿಎಸ್ ಪಾಟೀಲ್, ಉಪಲೋಕಾಯುಕ್ತರಾದ ವೀರಪ್ಪ ಹಾಗೂ ಫಣೀಂದ್ರ ಅವರು ಭೇಟಿಯಲ್ಲಿ ಪಾಲಿಕೆಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು. ಇನ್ನು ಲೋಕಾಯುಕ್ತ ಅಧಿಕಾರಿಗಳು ಭೇಟಿಯ ವೇಳೆ ರಾಜಕಾಲುವೆ ಒತ್ತುವರಿ, ಕಡಿಮೆಯಾದ ನಿರ್ವಹಣೆ, ಕಸವಿಲೇವಾರಿ ಸಮಸ್ಯೆ ಹಾಗೂ ನೀರು ಹರಿದು ಮನೆಗಳಲ್ಲಿ ನುಗ್ಗಿರುವ ಬಗ್ಗೆ ಮಾಹಿತಿ ಕಲೆಹಾಕಿದ ಲೋಕಾಯುಕ್ತರು, ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 'ನೀವು ಜನರ ತೆರಿಗೆ ಹಣದಿಂದ ಸಂಬಳ ಪಡೆಯುತ್ತೀರಿ. ಕೆಲಸ ಮಾಡೋದೇ ಸುಮ್ಮನೆ ಕುಳಿತರೆ ಹೇಗೆ?' ಎಂದು ಬಿ.ಎಸ್. ಪಾಟೀಲ್ ಗರಂ ಆದರು.
ದೂರು ದಾಖಲು, ವಿಚಾರಣೆಗೆ ಚಾಲನೆ
ಬಿಬಿಎಂಪಿ ವಿರುದ್ಧ ಮಳೆಗಾಲಕ್ಕೆ ಸಿದ್ಧತೆ ಇಲ್ಲದ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ಅಧಿಕೃತ ದೂರು ದಾಖಲಾಗಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್, ಇಂಜಿನಿಯರ್ ಇನ್ ಚೀಫ್ ಬಿ.ಎಸ್. ಪ್ರಹ್ಲಾದ್ ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಲೋಕಾಯುಕ್ತ ಕಚೇರಿಗೆ ಕರೆಯಲಾಗಿತ್ತು. ಸಾಯಿಲೇಔಟ್ ಸೇರಿದಂತೆ ಹಲವು ನೆರೆ ಪ್ರದೇಶಗಳ ಕುರಿತು ಮಾಹಿತಿ ನೀಡುವಂತೆ ಕೇಳಲಾಗಿದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿಯ 8 ವಲಯಗಳಲ್ಲಿ ರಾಜಕಾಲುವೆಗಳಿಂದ ನೀರು ಉಕ್ಕಿ ಹರಿದಿರುವ, ಸರಿಯಾದ ಕಸ ವಿಲೇವಾರಿ ಮಾಡದಿರುವ, ಕೆರೆ ಮತ್ತು ಕಾಲುವೆಗಳ ಒತ್ತುವರಿ ತೆರವು ಮಾಡದಿರುವ ಆರೋಪಗಳ ಹಿನ್ನೆಲೆ ಪ್ರತ್ಯೇಕವಾಗಿ ಕೇಸು ದಾಖಲಿಸಲಾಗಿದೆ. ಈ ಕುರಿತಾಗಿ ಲೋಕಾಯುಕ್ತ ಬಿಎಸ್ ಪಾಟೀಲ್ ಅವರು ವಿಚಾರಣೆ ಆರಂಭಿಸಿದ್ದಾರೆ.
BWSSB, BMRCL ಕೂಡ ತನಿಖೆಯೊಳಗೆ ಸೇರ್ಪಡೆ:
ಮಳೆಗೆ ಸಂಬಂಧಿಸಿದ ಸಮಸ್ಯೆಯಲ್ಲಿ ಇತರೆ ಸ್ಥಳೀಯ ಆಡಳಿತ ಸಂಸ್ಥೆಗಳಾದ BWSSB ಮತ್ತು BMRCL ಅವರೂ ತನಿಖೆಯೊಳಗೆ ಭಾಗಿಯಾಗಿದ್ದಾರೆ. ಇವುಗಳ ಪಾತ್ರದ ಕುರಿತಾಗಿಯೂ ಲೋಕಾಯುಕ್ತರು ಸ್ಪಷ್ಟನೆ ಕೇಳಿದ್ದಾರೆ. 'ಪ್ರತಿ ವರ್ಷ ಇದೇ ಪರಿಸ್ಥಿತಿ. ನಿಮ್ಮೆಲ್ಲರ ಕೆಲಸ ಏನು?' ಎಂದು ಪ್ರಶ್ನಿಸಿದ ಲೋಕಾಯುಕ್ತರು, ಮುಂದಿನ ಮಳೆಯಾದರೂ ಈ ದುಸ್ಥಿತಿಯ ಪುನರಾವೃತ್ತಿ ಆಗಬಾರದು ಎಂಬ ದೃಢ ನಿರ್ಣಯ ವ್ಯಕ್ತಪಡಿಸಿದರು.
ತಕ್ಷಣದ ಆ್ಯಕ್ಷನ್ ಪ್ಲಾನ್ ಮಾಡಲು ಖಡಕ್ ಸೂಚನೆ:
ಬಿಬಿಎಂಪಿಗೆ ತಕ್ಷಣದ ಆ್ಯಕ್ಷನ್ ಪ್ಲಾನ್ ರೆಡಿಯಾಗಬೇಕೆಂದು ಲೋಕಾಯುಕ್ತರು ಸೂಚಿಸಿದ್ದಾರೆ. 'ನಾನು ನಿಮ್ಮ ಕೆಲಸವನ್ನು ಮಾನಿಟರ್ ಮಾಡಲು ಖಾಸಗಿ ಏಜೆನ್ಸಿ ನೇಮಕ ಮಾಡುತ್ತೇನೆ. ಅದಕ್ಕೆ ಕಾನೂನಿನ ಪ್ರಕಾರ ನನಗೆ ಅಧಿಕಾರವಿದೆ' ಎಂದು ಎಚ್ಚರಿಸಿದರು. ಜೊತೆಗೆ, ಅನಧಿಕೃತ ನಿರ್ಮಾಣಗಳು ಮತ್ತು ರಾಜಕಾಲುವೆ ಡೈವರ್ಸ್ ಮಾಡಿದ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆದೇಶಿಸಿದರು. ಒಟ್ಟಾರೆಯಾಗಿ ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಲೋಕಾಯುಕ್ತರು, ಬೆಳ್ಳಿಗೆ ಕೆಲಸ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಮುಂದಿನ ಮಳೆಯ ಮುನ್ನಾಟಕ್ಕೆ ಸಿದ್ಧತೆ ಮಾಡಿಕೊಳ್ಳದಿದ್ದರೆ, ಮುಂದಿನ ಕ್ರಮ ಗಂಭೀರವಾಗಿರಲಿದೆ ಎಂಬ ಸೂಚನೆ ನೀಡಿದ್ದಾರೆ.


