Asianet Suvarna News Asianet Suvarna News

Republic Day Rangoli ಗಣರಾಜ್ಯೋತ್ಸವ ನಿಮಿತ್ತ ರಂಗೋಲಿ ಉತ್ಸವ, ರಸ್ತೆಯಲ್ಲಿ ಅರಳಿದ ಹೆಣ್ಣು ಮಕ್ಕಳ ರಕ್ಷಣೆ ಚಿತ್ರ!

  • ರಾಷ್ಟ್ರೀಯ ಹೆಣ್ಣು ಮಕ್ಕಳ ಹಕ್ಕುಗಳ ದಿನ, ಗಣರಾಜ್ಯೋತ್ಸವ ದಿನ ನಿಮಿತ್ತ ರಂಗೋಲಿ ಉತ್ಸವ
  • ಸ್ಥಳೀಯ ಕಲಾವಿದರು, ಚಿತ್ರಕಲಾ ಶಿಕ್ಷಕರು ಹಾಗೂ ಸಾರ್ವಜನಿಕರಿಂದ ಈ ಉತ್ಸವ
  • ಸುಮಾರು 500 ಮೀಟರ್‌ ರಸ್ತೆಯಲ್ಲಿ ಅರಳಿದ ರಂಗೂಲಿ
Republic Day Celebration 2022 Rangoli art draw attention at dharwad karnataka ckm
Author
Bengaluru, First Published Jan 25, 2022, 4:30 AM IST

ಧಾರವಾಡ(ಜ.25):  ಇಲ್ಲಿಯ ಕಾರ್ಗಿಲ್‌ ಸ್ತೂಪದ ಸುತ್ತಲೂ ಸೋಮವಾರ ತರಹೇವಾರಿ ಬಣ್ಣ-ಆಕಾರ ಹಾಗೂ ವಿವಿಧ ಕಲ್ಪನೆಗಳಲ್ಲಿ ರಂಗೋಲಿಗಳ(Rangoli) ಚಿತ್ತಾರ ಅರಳಿತ್ತು. ವಯಸ್ಸು ಮತ್ತು ಲಿಂಗಭೇದವಿಲ್ಲದೇ ತಮ್ಮದೇ ಕಲ್ಪನೆಗಳಲ್ಲಿ ಅದ್ಭುತವಾಗಿ ಬಿಡಿಸಿದ್ದ ರಂಗೋಲಿಗಳು ರಸ್ತೆಯಲ್ಲಿ ಹೋಗುತ್ತಿದ್ದವರ ಕೈ ಬೀಸಿ ಕರೆಯುತ್ತಿದ್ದವು..!

ಆಜಾದಿ ಕಾ ಅಮೃತ ಮಹೋತ್ಸವ(Azadi ka Amritmahostav) ಅಂಗವಾಗಿ ಧಾರವಾಡದ(Dharwad) ಕಾರ್ಗಿಲ್‌ ಸ್ತೂಪದ(Kargil) ವೃತ್ತ ಸೇರಿದಂತೆ ದೇಶದ 56 ಕಡೆಗಳಲ್ಲಿ ಒಂದೇ ಸಮಯದಲ್ಲಿ ನಡೆದ ರಂಗೋಲಿ ರಂಗೋತ್ಸವದ ದೃಶ್ಯವಿದು.

ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿದ್ರೆ ಸಂಪತ್ತು , ಸಂತೋಷ ತುಂಬುತ್ತದೆ

ಎಸ್‌.ಎಫ್‌. ಕನಸಲ್ಟ್‌ ಸಂಸ್ಥೆ ಆಯೋಜನೆ ಮಾಡಿದ್ದ ಈ ರಂಗೋಲಿ ಉತ್ಸವ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಮತ್ತು ಗಣರಾಜ್ಯೋತ್ಸವ ಕಲ್ಪನೆಯಲ್ಲಿ ಯಶಸ್ವಿಯಾಯಿತು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ರಂಗೋಲಿ ಉತ್ಸವಕ್ಕೆ ಚಾಲನೆ ನೀಡಿದರು.

ಮಕ್ಕಳ ಶೈಕ್ಷಣಿಕ ಹಕ್ಕುಗಳು, ಭೇಟಿ ಬಚಾವೋ, ಭೇಟಿ ಪಡಾವೋ, ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು-ಗಂಡು ಎಂಬ ಭೇದ ಬೇಡ, ಸಮಾನ ಹಕ್ಕುಗಳು, ಕೃಷಿಯಿಂದ ಅಂತರಿಕ್ಷದ ವರೆಗೆ ಹೆಣ್ಣು ಇಂತಹ ವಿಷಯಗಳು ಸೇರಿದಂತೆ ಸ್ವಾತಂತ್ರ್ಯ ಯೋಧರ ಭಾವಚಿತ್ರಗಳು ರಂಗೋಲಿಯಲ್ಲಿ ಅರಳಿದವು. ಚಿತ್ರಕಲಾವಿದರು, ಚಿತ್ರಕಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಣ್ಣ ಮಕ್ಕಳು ಹಾಗೂ ವಯೋವೃದ್ಧರೂ ಸಹ ಈ ಉತ್ಸವದಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.

ರಂಗೋಲಿಯಲ್ಲಿ ಅರಳಿದ ಪವರ್ ಸ್ಟಾರ್, ನೆಚ್ಚಿನ ನಟನಿಗೆ ಕಲಾವಿದನಿಂದ ಶ್ರದ್ಧಾಂಜಲಿ

ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಆಯೋಜಕ ಕಿರಣಕುಮಾರ ಬಡಿಗೇರ, ಕೇಂದ್ರ ಸಂಸ್ಕೃತಿ ಮಂತ್ರಾಲಯದ ನಿರ್ದೇಶನದ ಮೇಲೆ ದೇಶದ 56 ಸ್ಥಳಗಳಲ್ಲಿ ಏಕ ಕಾಲಕ್ಕೆ ಈ ಎರಡು ವಿಷಯಗಳ ಮೇಲೆ ರಂಗೋಲಿ ಉತ್ಸವ ಮಾಡಲಾಗಿದ್ದು ಧಾರವಾಡದಲ್ಲಂತೂ ಮಹಿಳೆಯರು, ಮಕ್ಕಳು ಮತ್ತು ಕಲಾವಿದರು ಉತ್ತಮ ಸ್ಪಂದನೆ ನೀಡಿದ್ದಾದೆ. ಅದ್ಭುತ ರಂಗೋಲಿ ಬಿಡಿಸಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆ ಸೇರಿದಂತೆ ಸುಭಾಸಚಂದ್ರಬೋಸ್‌, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ರಂಗೋಲಿ ಚಿತ್ರಗಳು ಮೂಡಿ ಬಂದಿವೆ. ತಮ್ಮ ಚಿತ್ರಗಳ ಜೊತೆಗೆ ಸೆಲ್ಫಿ ತೆಗೆದುಕೊಂಡು ಕೇಂದ್ರ ಸಂಸ್ಕೃತಿ ಸಚಿವಾಲಯದ ವೆಬಸೈಟ್‌ಗೆ ಕಳುಹಿಸಿದರೆ ಇ-ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಸಂಸ್ಥೆಯ ಪ್ರಮಾಣ ಪತ್ರ ಸಹ ನೀಡಲಾಗುತ್ತದೆ ಎಂದರು.

ಗಣಪತಿ ಕಲಾವಿದ ಮಂಜುನಾಥ ಹಿರೇಮಠ ಮಾತನಾಡಿ, ಒಂದು ಕಲ್ಪನೆ ಅದರಲ್ಲೂ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ದೇಶಪ್ರೇಮ ಕುರಿತ ಕಲ್ಪನೆಯಲ್ಲಿ ರಂಗೋಲಿ ಬಿಡಿಸಲು ಧಾರವಾಡದ ಜನತೆಗೆ ಉತ್ತಮ ಅವಕಾಶ. ಈ ಅವಕಾಶ ಬಳಸಿಕೊಂಡು ಸುಭಾಸಚಂದ್ರ ಬೋಸ್‌ ಅವರನ್ನು ರಂಗೋಲಿಯಲ್ಲಿ ಬಿಡಿಸಿದ್ದೇನೆ. ಉಳಿದವರು ಉತ್ತಮವಾಗಿ ರಂಗೋಲಿ ಬಿಡಿಸಿದ್ದಾರೆ ಎಂದರು. ಉತ್ಸವ ಯಶಸ್ವಿಯಾಗಲು ನಿರ್ಮಲಾ ಜವಳಿ, ಸುಮಿತ್ರಾ ಕಂಚಗಾರ, ರೇಣುಕಾ ಕೋಳಿಕಾರ, ಪುಷ್ಪಾ ನವಗುಂದ, ಮುಕ್ತಾ ವರ್ಣೇಕರ ಅಲ್ಲದೇ, ಕಲಾವಿದರಾದ ಮಹಾಂತೇಶ ಹುಬ್ಬಳ್ಳಿ, ಮೌನೇಶ ಕಮ್ಮಾರ, ಚನ್ನಬಸ್ಸು ಮಾಳಗಿ, ನಂದನ ಜಾವೂರ ಸೇರಿದಂತೆ 28 ಜನರು ರಂಗೋಲಿ ಉತ್ಸವದಲ್ಲಿ ಭಾಗವಹಿಸಿದ್ದರು.

ರಂಗೋಲಿ ಮೂಲಕ ಶಿವಕುಮಾರ ಶ್ರೀಗಳ ಭಾವಚಿತ್ರ
ದಾವಣಗೆರೆ: ತ್ರಿವಿಧ ದಾಸೋಹಿ, ತುಮಕೂರು ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ, ದಾಸೋಹ ದಿನದ ವಿಶೇಷತೆಗೆ ಇಲ್ಲಿನ ವಿನೋಬನಗರದ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಕ್ಕಿ, ಹಸಿರು ಎಲೆಗಳು, ರಂಗೋಲಿ ಬಳಸಿ 20 ಅಡಿಯ ಭಾವಚಿತ್ರವನ್ನು ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ ಮಾರ್ಗದರ್ಶನದಲ್ಲಿ, ಮುಖ್ಯೋಪಾಧ್ಯಾಯ ಬಿ.ಕೆ.ಹನುಮಂತಪ್ಪನವರ ಪ್ರೋತ್ಸಾಹದೊಂದಿಗೆ ಚಿತ್ರ ರಚಿಸಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಚ್‌.ಬಿ.ಜ್ಯೋತಿ,ಜಿ.ಎಂ.ಪ್ರಭುದೇವ, ಕೆ.ಹಾಲಪ್ಪ, ಎಂ.ಎಸ್‌.ರಾಜಯ್ಯ, ಕೆ.ಪಿ.ರುದ್ರೇಶ ಮುರ್ತಿ, ಲಿಂಗರಾಜ ಗಾಜಿ, ಎಚ್‌.ಶ್ವೇತಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow Us:
Download App:
  • android
  • ios