Asianet Suvarna News Asianet Suvarna News

ಮೂರು ತಿಂಗಳ ವೇತನಕ್ಕೆ 27 ವರ್ಷದಿಂದ ಅಲೆದಾಟ!

ಮೂರು ತಿಂಗಳ ವೇತನಕ್ಕೆ 27 ವರ್ಷದಿಂದ ಅಲೆದಾಟ!  ಅಳಲು ತೋಡಿಕೊಂಡ ಧಾರವಾಡದ ಕರ್ನಾಟಕ ವಿವಿ ಮಾಜಿ ನೌಕರ | ಮನವಿ ಸಲ್ಲಿಸಿದರೂ ಸ್ಪಂದನೆ ಇಲ್ಲ | 18 ಸಾವಿರದ ಬದಲಾಗಿ 10 ಲಕ್ಷ ನೀಡಬೇಕಾದ ಕವಿವಿ

Karnataka university Ex employ  Wandering from 27 to get three months pay
Author
Bengaluru, First Published Nov 18, 2019, 8:53 AM IST

ಧಾರವಾಡ (ನ. 18):  ಗಿರೀಶ್‌ ಕಾಸರವಳ್ಳಿ ನಿರ್ದೇಶನದ ತಬರನ ಕಥೆ ಜನಜನಿತ. ಅದೇ ತಬರನಂತೆ ಕರ್ನಾಟಕ ವಿಶ್ವವಿದ್ಯಾಲಯದ(ಕವಿವಿ) ನಿವೃತ್ತ ನೌಕರ ವಿರೂಪಾಕ್ಷ ಎಂಬುವರು ನಿವೃತ್ತಿ ಅಂಚಿನಲ್ಲಿನ ಮೂರು ತಿಂಗಳಿನ ಸಂಬಳಕ್ಕಾಗಿ 27 ವರ್ಷಗಳಿಂದ ಅಲೆದಾಡುತ್ತಿದ್ದಾರೆ!

ಹೌದು, ಇದು ಧಾರವಾಡ ನಗರದ ಗುಲಗಂಜಿಕೊಪ್ಪದ ಗೌಡರ ಓಣಿಯ ನಿವಾಸಿ ವಿರೂಪಾಕ್ಷಪ್ಪ ಅವರ ಕಥೆ, ಇವರು ಕರ್ನಾಟಕ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಆದರೆ, ಅವರ 1993ರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ ತಿಂಗಳ ವೇತನ ನೀಡದೆ 27 ವರ್ಷಗಳಿಂದ ಅಲೆದಾಡಿಸುತ್ತಿದೆ ಕವಿವಿ.

ಮಡಿಕೇರಿ: ಇಲ್ಲಿ ಮೂರು ರಸ್ತೆ ಸಂಗಮವೇ ಬಸ್ ನಿಲ್ದಾಣ!

ವಿರೂಪಾಕ್ಷಪ್ಪ 1960ರಲ್ಲಿ ಕರ್ನಾಟಕ ವಿವಿಯಲ್ಲಿ ಸೇವೆ ಆರಂಭಿಸಿದ್ದರು. 32 ವರ್ಷಗಳ ಸೇವೆ ಸಲ್ಲಿಸಿ ಹಣಕಾಸು ವಿಭಾಗದ ಅಧೀಕ್ಷಕರಾಗಿ 1993ರಲ್ಲಿ ನಿವೃತ್ತಿಯಾದರು. ಆದರೆ, ಕವಿವಿಯು ಕೊನೆಯ ಮೂರು ತಿಂಗಳÜ ವೇತನ ನೀಡಿಲ್ಲ. ಅದಕ್ಕಾಗಿ ಅವರು ನಡೆಸುತ್ತ ಬಂದಿರುವ ಹೋರಾಟಕ್ಕೆ ಈಗ 27 ವರ್ಷ! 88 ವರ್ಷ ವಯಸ್ಸಿನ ವಿರೂಪಾಕ್ಷಪ್ಪ ಅವರಿಗೆ ಈಗ ಸರಿಯಾಗಿ ಕಿವಿ ಕೇಳುವುದಿಲ್ಲ, ಜತೆಗೆ ಬಿಪಿ, ಶುಗರ್‌ ಸೇರಿದಂತೆ ಅನೇಕ ರೋಗಗಳು ಅಂಟಿಕೊಂಡಿವೆ.

ಲೆಕ್ಕವಿಲ್ಲದಷ್ಟುಮನವಿ ಪತ್ರ ಸಲ್ಲಿಕೆ:

1993ರ ಫೆಬ್ರವರಿ, ಮಾಚ್‌ರ್‍ ಮತ್ತು ಏಪ್ರಿಲ್‌ ತಿಂಗಳ ವೇತನ ತಡೆ ಹಿಡಿದಿರುವ ಬಗ್ಗೆ ವಿರೂಪಾಕ್ಷಪ್ಪ ಕವಿವಿ ಆಡಳಿತ ಮಂಡಳಿಗೆ 27 ವರ್ಷಗಳಿಂದ ಹಲವಾರು ಪತ್ರಗಳನ್ನು ಬರೆದಿದ್ದಾರೆ, ಖುದ್ದಾಗಿಯೂ ಭೇಟಿ ನೀಡಿದ್ದಾರೆ. ಆದರೇ, ಯಾವುದೇ ಪ್ರಯೋಜನವಾಗಿಲ್ಲ.

ಈ ಕುರಿತು ಕುಲಸಚಿವರಿಗೆ, ವಿವಿಯ ಹಣಕಾಸು ಅಧಿಕಾರಿಗಳಿಗೆ, ವಿತ್ತಾಧಿಕಾರಿಗಳಿಗೆ, ಉನ್ನತ ಶಿಕ್ಷಣ ಇಲಾಖೆಗೆ, ರಾಜ್ಯಪಾಲರು, ಜಿಲ್ಲಾಧಿಕಾರಿಗಳಿಗೆ, ಹೈಕೋರ್ಟ್‌, ಗೃಹಮಂತ್ರಿಗಳಿಗೆ, ಕಾನೂನೂ ಮಂತ್ರಿಗಳಿಗೆ , ಪ್ರಧಾನಿಯವರಿಗೂ ಪತ್ರ ಬರೆದರೂ ಯಾವುದೇ ಪ್ರಯೋಜನವಾಗದೆ ಇರುವುದು ವಿರೂಪಾಕ್ಷಪ್ಪನವರ ಮನಸ್ಸಿಗೆ ಮತ್ತಷ್ಟು ಬೇಸರವನ್ನುಂಟು ಮಾಡಿದೆ.

ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ!

ವೃದ್ಧನ ಅಳಲು:

ವೇತನ ತಡೆಹಿಡಿಯಲು ಏನು ಕಾರಣ ಎಂದು ಮೊಮ್ಮಗನ ಜತೆ ಕವಿವಿಗೆ ಕೇಳಲು ಹೋದಾಗ ‘ನಿಮ್ಮದು ತುಂಬಾ ಹಳೆಯ ಪ್ರಕರಣ. ನೀವು ಕೆಲಸ ಮಾಡಿರುವ ಯಾವುದೇ ದಾಖಲೆಗಳು ವಿಶ್ವವಿದ್ಯಾಲಯದಲ್ಲಿ ಇಲ್ಲ, ಕಳೆದು ಹೋಗಿವೆ’ ಎಂದು ಅಲ್ಲಿಯ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ವಿರೂಪಾಕ್ಷಪ್ಪ ಆರೋಪಿಸಿದ್ದಾರೆ.

ನಿವೃತ್ತಿಯ ಸಮಯದಲ್ಲಿ ಪ್ರತಿ ತಿಂಗಳು 6 ಸಾವಿರ ವೇತನ ಪಡೆಯುತ್ತಿದ್ದ ವಿರೂಪಾಕ್ಷಪ್ಪ ಅವರ ಮೂರು ತಿಂಗಳ ಅಂದರೆ .18 ಸಾವಿರ ನೀಡಲು ಕವಿವಿ ಅಲೆದಾಡುವಂತೆ ಮಾಡಿದೆ. ವೇತನ ತಡವಾದಲ್ಲಿ ಶೇ.12ರಷ್ಟುಬಡ್ಡಿ ನೀಡಿ ಹಣ ಪಾವತಿಸಬೇಕು ಎಂಬ ಸರ್ಕಾರದ ಆದೇಶವೂ ಇದ್ದು, ಈಗ ಅದರನ್ವಯ ಒಟ್ಟಾರೆಯಾಗಿ ಬಡ್ಡಿಯನ್ನು ಸೇರಿಸಿ ಅಂದಾಜು .10 ಲಕ್ಷ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

88 ವಯಸ್ಸಾಗಿದೆ, ಕಿವಿನೂ ನೆಟ್ಟಗೆ ಕೇಳುದಿಲ್ಲ. ಎಷ್ಟುದಿನ ಅಂತ ಹೀಗೆ ಸಂಬಳದ ಸಲುವಾಗಿ ಮೊಮ್ಮಗನನ್ನು ಕರೆದುಕೊಂಡು ಸುತ್ತಾಡಲಿ. 27 ವರ್ಷದಿಂದ ಕವಿವಿ ಹಿಂಗೆ ಮಾಡ್ತಾ ಇದೆ. ಹಿಂಗಾದರೆ ಸಾಮಾನ್ಯ ಜನರಿಗೆ ನ್ಯಾಯ ಯಾವಾಗ ಸಿಗುತ್ತದೆ. ನನ್ನ ಕಷ್ಟದ ಕಾಲದಲ್ಲಿ ಸಂಬಳ ಸಿಗದೇ ಇದ್ದರೆ, ನಂತರ ತೆಗೆದುಕೊಂಡು ಏನ್‌ ಮಾಡೋದು.

- ವಿರೂಪಾಕ್ಷಪ್ಪ ಗಿರಿಯಪ್ಪನವರ, ಸಂಬಳಕ್ಕಾಗಿ 27 ವರ್ಷಗಳಿಂದ ಅಲೆಯುತ್ತಿರುವವರು

ಈ ಪ್ರಕರಣ ಇದುವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ನಿಯಮಾನುಸಾರ ಹಾಗೆಲ್ಲ ಸಂಬಳ ತಡೆಯಲು ಬರುವುದಿಲ್ಲ. ತಾಂತ್ರಿಕ ದೋಷ ಇರಬೇಕು. ಪರಿಶೀಲನೆ ನಡೆಸಿ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

- ಡಾ.ಸಿ.ಬಿ.ಹೊನ್ನುಸಿದ್ಧಾರ್ಥ, ಕವಿವಿಯ ಕುಲಸಚಿವ

Follow Us:
Download App:
  • android
  • ios