ಧಾರವಾಡ ಐಐಟಿ ಭೂಸ್ವಾಧೀನದಲ್ಲಿ ಕೋಟ್ಯಂತರ ರೂ. ಅವ್ಯವಹಾರ?
* 10 ಜನರ ಹೆಸರಿನಲ್ಲಿ 21 ಕೋಟಿ ರೂ. ಹಣ ನುಂಗಿದ ಕೆಐಎಡಿಬಿ ಅಧಿಕಾರಿಗಳು
* ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಗ್ರಹ
* ಧಾರವಾಡ ಐಐಟಿಗೆ ಭೂಸ್ವಾಧೀನದ ಪರಿಹಾರ ವಿತರಣೆಯಲ್ಲಿ ಅಕ್ರಮ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ನ.29) : ಧಾರವಾಡದ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಧಾರವಾಡ ಕಚೇರಿಯಲ್ಲಿ ಕೋಟ್ಯಂತರ ರೂ. ಮೊತ್ತದ ಅವ್ಯವಹಾರ ನಡೆದಿದೆ. 2010 ರಲ್ಲಿ ಐಐಟಿ ಧಾರವಾಡಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಯ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ. ಆದರೆ, ಪುನಃ 2022 ರಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ 21,14,78,468 ರೂ. ಮೊತ್ತವನ್ನು ಎರಡನೇ ಬಾರಿಗೆ ಹಲವಾರು ರೈತರ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದೆ. ಇದಕ್ಕಾಗಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಆರ್‍ಟಿಜಿಎಸ್ ಮೂಲಕ ಹಣ ವರ್ಗಾಯಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟವೆಸಗಿದ್ದಾರೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆರೋಪಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸುಮಾರು 100 ಕೋಟಿ ರೂ.ಗಿಂತ ಅಧಿಕ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ. ಈಗಾಗಲೇ ನಮಗೆ ಲಭಿಸಿರುವ ಮಾಹಿತಿಗಳ ಪ್ರಕಾರ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ.ಸಜ್ಜನ ಎಪ್ರಿಲ್ 2021 ರಿಂದ ಎಪ್ರಿಲ್ 2022 ರ ವರೆಗೆ ಅಂದಾಜು 140 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಹೀಗಾಗಿ ಇದರಲ್ಲಿ ಹಿರಿಯ ಅಧಿಕಾರಿಗಳಾದ ಸಿಇಒ ಎನ್. ಶಿವಶಂಕರ್, ದಯಾನಂದ ಬಂಡಾರಿ ಹಾಗೂ ಕೈಗಾರಿಕೆ ಸಚಿವರ ಆಪ್ತರೂ ಆಗಿರುವ ಎಸಿ ಗ್ರೇಡ್ ಅಧಿಕಾರಿ ದೊರೆಸ್ವಾಮಿ, ವಿಶೇಷ ಭೂ ಸ್ವಾಧೀನಧಿಕಾರಿ ವಿ.ಡಿ. ಸಜ್ಜನ, ವ್ಯವಸ್ಥಾಪಕರಾದ ಶಂಕರ ತಳವಾರ ಮತ್ತು ಶಿಂಪಿ, ದ್ವಿತೀಯ ದರ್ಜೆ ಸಹಾಯಕ ಅಮಿತ ಮುದ್ದಿ, ಜವಾನ ರಾಜು ಹೆಬ್ಬಳ್ಳಿ ಅವರು ಶಾಮೀಲು ಆಗಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.
IIT ಸೇರಿಕೊಂಡ್ರೆ ವಿದ್ಯಾರ್ಥಿಗಳಿಗೆ ವಾಸಿಸಲು ಫ್ಲ್ಯಾಟ್ ಕೊಡ್ತಾರಾ?
ಅವ್ಯವಹಾರದಲ್ಲಿ ಬ್ಯಾಂಕ್ ಅಧಿಕಾರಿಗಳ ಶಮೀಲು: ಈ ಪ್ರಕರಣದಲ್ಲಿ ಹೀಗೆ ಒಟ್ಟು 21,14,78,468 ರೂ. ದುರುಪಯೋಗ ಪಡಿಸಿಕೊಂಡು ದೊಡ್ಡ ಮಟ್ಟದ ಅವ್ಯವಹಾರ ಮಾಡಿರುವುದು ಕಂಡುಬರುತ್ತದೆ. ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಅವರ ಸಹಕಾರ ಇಲ್ಲದೇ ಇಷ್ಟೊಂದು ಮೊತ್ತದ ಹಣ ವರ್ಗಾವಣೆ ಆಗಲು ಹೇಗೆ ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ಆದ ಕೋಟ್ಯಾಂತರ ರೂಪಾಯಿ ಅವರಿಂದ ಮರು ವಸೂಲಿ ಮಾಡುವ ಜೊತೆಗೆ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು. ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಮನವಿ ಮಾಡಿದರು.
ಗುಬ್ಬಿ ಕೆಎಂಎಫ್ ಆಹಾರ ಘಟಕದಲ್ಲಿ ಅವ್ಯವಹಾರ : ಕಾರ್ಮಿಕರಿಂದ ಪ್ರತಿಭಟನೆ
ಸುಳ್ಳು ದಾಖಲೆ ಸೃಷ್ಟಿದ್ದಕ್ಕೆ ಕೇಸ್ ದಾಖಲು: ನಮಗೆ ಲಭಿಸಿರುವ ದಾಖಲಾತಿ ಮಾಹಿತಿಗಳ ಪ್ರಕಾರ ಧಾರವಾಡದ ವಿಶೇಷ ಭೂ ಸ್ವಾಧೀನಧಿಕಾರಿ ವಿ.ಡಿ. ಸಜ್ಜನ ಅವರ ವಿರುದ್ದ ಅಕ್ಕಮ್ಮ ಪೂಜಾರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿದಕ್ಕಾಗಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಸರ್ಕಾರದ ಹಣವನ್ನು ದೋಚಿರುವ ಹಿಂದೆ ಐಡಿಬಿಐ ಬ್ಯಾಂಕ್, ಹುಬ್ಬಳ್ಳಿ ಶಾಖೆ ಹಾಗೂ ಬ್ಯಾಂಕ್ ಆಫ್ ಬರೋಡಾ ಕೋಟುರ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹ ಈ ಒಂದು ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಕೂಡಲೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುತ್ತದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಹೇಳಿದರು.
ಈ ವೇಳೆ ಸಾಮಾಜಿಕ ಕಾರ್ಯಕರ್ತ ಮಿಥುನ್ ಜಾಧವ್, ವಕೀಲರಾದ ಐ.ಕೆ. ಧರಣಗೌಡರ, ರೈತ ಮುಖಂಡ ಗುರು ಅಂಗಡಿ, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಯುವ ಮುಖಂಡ ಸುರೇಶ್ ಕೋರಿ ಉಪಸ್ಥಿತರಿದ್ದರು.