ದೇಗುಲ, ಬಸ್, ಪೊಲೀಸರಿಗೆ ಕಲ್ಲು: ಹುಬ್ಬಳ್ಳಿಯಲ್ಲಿ ನಿಷೇಧಾಜ್ಞೆ 93 ಜನರ ಬಂಧನ
- ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್
- ಉದ್ರಿಕ್ತರಿಂದ ದೇಗುಲ, ಬಸ್, ಪೊಲೀಸರಿಗೆ ಕಲ್ಲು
- 12 ಮಂದಿಗೆ ಗಾಯ, 12 ವಾಹನ ಜಖಂ
- ಒವೈಸಿ ಪಕ್ಷದ ಮುಖಂಡ ಸೇರಿ 93 ಜನರ ಬಂಧನ
ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಮರೆಯುವ ಮುನ್ನವೇ ಇದೀಗ ಅಂತಹುದೇ ಮತ್ತೊಂದು ದುರ್ಘಟನೆಗೆ ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿ (hubli) ಸಾಕ್ಷಿಯಾಗಿದೆ. ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್ ಹರಿಯಬಿಟ್ಟಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು ದಿಡ್ಡಿ ಆಂಜನೇಯ ದೇವಸ್ಥಾನ, ಬಸ್ಸು, ಮತ್ತಿತರ ವಾಹನಗಳ ಮೇಲೆ ಕಲ್ಲುತೂರಾಟ ಮಾಡಿ ಗಲಭೆ ನಡೆಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಉದ್ವಿಗ್ನಗೊಂಡಿದ್ದ ಹಳೇಹುಬ್ಬಳ್ಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಸದ್ಯ ಪರಿಸ್ಥಿತಿ ತಣ್ಣಗಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಘಟನೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಾಡದೇವರ ಮಠ(Kadadevara Mutt), ಹೆಡ್‌ಕಾನ್‌ಸ್ಟೇಬಲ್ ಸೇರಿ 12 ಮಂದಿ ಗಾಯಗೊಂಡಿದ್ದು, 12 ವಾಹನಗಳು ಜಖಂಗೊಂಡಿವೆ. ಕಲ್ಲು ತೂರಾಟ, ಗಲಭೆಗೆ ಸಂಬಂಧಿಸಿ 8 ಪ್ರಕರಣಗಳು ದಾಖಲಾಗಿದ್ದು, ಹೈದರಾಬಾದ್ ಸಂಸದ ಅಸಾದುದ್ದಿನ್ ಒವೈಸಿ ನೇತೃತ್ವದ ಎಂಐಎಂ ಪಕ್ಷದ ಮುಖಂಡ ಸೇರಿ 93 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಘಟನೆ ಪೂರ್ವ ನಿಯೋಜಿತವಾಗಿತ್ತೆ ಎಂಬ ದಿಕ್ಕಿನಲ್ಲಿ ತನಿಖೆ ಸಾಗಿದೆ.
Hubli Riots: 8 FIR ದಾಖಲು: 3 ಬಾಲಾಪರಾಧಿಗಳು ಸೇರಿ ನೂರರ ಗಡಿ ದಾಟಿದ ಬಂಧಿತರ ಸಂಖ್ಯೆ
ಯುವಕನೊಬ್ಬ ಮೆಕ್ಕಾ ಮಸೀದಿ ಚಿತ್ರದ ಮೇಲೆ ಕೇಸರಿ ಧ್ವಜ ಹಾರಿಸಿದ ಎಡಿಟ್ ಮಾಡಿದ ಫೋಟೋವನ್ನು ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ (Whatsapp stutus) ಹಾಕಿದ್ದ. ಆತನ ಬಂಧನಕ್ಕೆ ಆಗ್ರಹಿಸಿ ಮುಸ್ಲಿಮರ ಗುಂಪೊಂದು ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ (Police station) ಮುತ್ತಿಗೆ ಹಾಕಿತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಸುತ್ತಮುತ್ತ ರಸ್ತೆಯಲ್ಲಿ ಸುಮಾರು ಅರ್ಧ ಕಿಮೀ ವರೆಗೂ ಉದ್ರಿಕ್ತ ಜನರ ಗುಂಪು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುತ್ತ ಪ್ರಚೋದನಾಕಾರಿ ಘೋಷಣೆ ಕೂಗುತ್ತ, ಕಲ್ಲುತೂರುತ್ತ ಕಾನೂನನ್ನು ಕೈಗೆತ್ತಿಕೊಂಡು ಭಯದ ವಾತಾವರಣ ನಿರ್ಮಿಸಿತು.
ಪೊಲೀಸರ ವಾಹನಗಳನ್ನೇ ಗುರಿಯಾಗಿರಿಸಿ ಕಲ್ಲು ತೂರಿದ್ದಲ್ಲದೆ, ಪೊಲೀಸ್ ಜೀಪೊಂದನ್ನು ಪಲ್ಟಿಮಾಡಿ ಹಾನಿಗೊಳಿಸಿತು. ಅನಗತ್ಯವಾಗಿ ಒಂದು ಸಮುದಾಯದ ಮನೆ, ಅಂಗಡಿ, ಆಸ್ಪತ್ರೆಗಳಿಗೂ ನುಗ್ಗಿ ಧ್ವಂಸಗೊಳಿಸಿತು. ಅಂಜುಮಾನ್ ಸಂಸ್ಥೆ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು, ಗಣ್ಯರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ನೋಡಿದರೂ ಉದ್ರಿಕ್ತ ಜನ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಪುಂಡರು ಅವರ ಮೇಲೆಯೇ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪೊಲೀಸರು ಲಾಠಿಪ್ರಹಾರ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
Hubballi Riot: AIMIM ಮುಖಂಡ ಇರ್ಫಾನ್ ನಲವತ್ತವಾಡ ಪೊಲೀಸ್ ವಶಕ್ಕೆ
ಘಟನೆಗೆ ಸಂಬಂಧಿಸಿದಂತೆ ಮಾತನಾಡಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ಹುಬ್ಬಳ್ಳಿ ಘಟನೆ ಬೆಂಗಳೂರಿನ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣವನ್ನೇ ಹೋಲುತ್ತಿದೆ. ಆದ್ದರಿಂದ ಇದನ್ನು ಲಘುವಾಗಿ ಪರಿಗಣಿಸುವುದಿಲ್ಲ. ಸಮಗ್ರವಾಗಿ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಧರ್ಮದವರಾದರೂ ಬಿಡುವ ಪ್ರಶ್ನೆಯೇ ಇಲ್ಲ. ಪೊಲೀಸರು ಅತ್ಯಂತ ಕ್ಷಿಪ್ರವಾದ ಕ್ರಮಗಳನ್ನು ತೆಗೆದುಕೊಂಡ ಕಾರಣದಿಂದ ಗಲಭೆ ಮತ್ತು ಹಿಂಸಾಚಾರ ಅತ್ಯಲ್ಪ ಸಮಯದಲ್ಲೇ ಹತೋಟಿಗೆ ಬಂದಿದೆ.
ಪೂರ್ವನಿಯೋಜಿತ?:
ರಾತ್ರಿ ಪೊಲೀಸ್ ಠಾಣೆ ಎದುರು ಏಕಾಏಕಿ ಸಾವಿರ ಸಂಖ್ಯೆಯಲ್ಲಿ ಒಂದು ಸಮುದಾಯದವರು ಸೇರಿದ್ದು ಹೇಗೆ? ಸುಮಾರು 3 ಟ್ರ್ಯಾಕ್ಟರ್‌ಗಳಷ್ಟುಪ್ರಮಾಣದಲ್ಲಿ ಕಲ್ಲುಗಳು ಸಿಕ್ಕಿದ್ದಾದರೂ ಹೇಗೆ ಎಂಬ ಕುರಿತು ಸ್ವತಃ ಅಂಜುಮನ್ ಇಸ್ಲಾಂ ಸಂಸ್ಥೆ (Anjuman) ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಿಂದೂ ಸಂಘಟನೆಗಳು ಕೂಡ ಅನುಮಾನ ವ್ಯಕ್ತಪಡಿಸಿವೆ. ವಶಕ್ಕೆ ಪಡೆದವರಿಂದ ಈ ಕುರಿತಾಗಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
50ಕ್ಕೂ ಹೆಚ್ಚು ಬೈಕ್ ವಶ:
ಎಐಎಂಐಎಂ ಮುಖಂಡ, ಪಾಲಿಕೆ ಚುನಾಯಿತ ಸದಸ್ಯೆ ಹುಸೇನ್ ಬಿ (Husein B) ಅವರ ಪತಿ ಇರ್ಫಾನ್ (Irfan) ನಲವತ್ತವಾಡ ಸೇರಿ ಗಲಭೆಗೆ ಕಾರಣರಾದ ಹಾಗೂ ಕಲ್ಲು ತೂರಾಟ ನಡೆಸಿ ಶಿಗ್ಗಾಂವಿ, ಬಂಕಾಪುರಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಅಪ್ರಾಪ್ತರು ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಕರೆತಂದು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರ ಸಂಖ್ಯೆ ನೂರು ಮೀರಲಿದೆ. ಘಟನೆ ಸ್ಥಳದಲ್ಲಿದ್ದ 50ಕ್ಕೂ ಹೆಚ್ಚಿನ ಬೈಕ್‌ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದುಷ್ಕರ್ಮಿಗಳ ವಿರುದ್ಧ ಐಪಿಸಿ 1860 143, 147,148,353, 307,427, 504, 506 341, ಪ್ರಿವೆಂಟೀವ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ 1984 ಅಡಿ ಪ್ರಕರಣ ದಾಖಲಾಗಿದೆ.
ಮುಂಜಾಗೃತಾ ಕ್ರಮವಾಗಿ ಹುಬ್ಬಳ್ಳಿ ನಗರಾದ್ಯಂತ ಏ.20ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಧಾರವಾಡ (Dharwada) , ಹಾವೇರಿ (Haveri), ಬಾಗಲಕೋಟೆ (Bagalkote) , ಬೆಳಗಾವಿ ಸೇರಿ ಇತರೆ ಜಿಲ್ಲೆಗಳಿಂದ ಸಿವಿಲ್ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ಪಡೆಗಳು ಹಳೆ ಹುಬಳ್ಳಿ ಸೇರಿ ನಗರದಾದ್ಯಂತ ಬಿಗಿ ಬಂದೋಬಸ್‌್ತ ಏರ್ಪಡಿಸಿದ್ದಾರೆ. ಇನ್ನು ಸಂಜೆಯೇ ನಗರದಲ್ಲಿ ಪೊಲೀಸ್ ಪಥ ಸಂಚಲನ ನಡೆಸಿ ಗಲಭೆಕೋರರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.