ಟಾಟಾ ಮೋಟಾರ್ಸ್ 17 ಹೊಸ ಟ್ರಕ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಹೊಚ್ಚಹೊಸ ಅಜುರಾ, ಇ.ವಿ. ಟ್ರಕ್‌ಗಳು ಮತ್ತು ಸುಧಾರಿತ ಪ್ರೈಮಾ, ಸಿಗ್ನಾ ಮಾದರಿಗಳು ಸೇರಿದ್ದು, ಇವುಗಳು ಅಧಿಕ ಪೇಲೋಡ್ ಸಾಮರ್ಥ್ಯ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ.
ಮೈತ್ರಿ ಎಸ್.
ದೆಹಲಿ: ದೇಶದ ವಾಹನ ಉತ್ಪಾದಕ ಕಂಪನಿಗಳ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್ ವಿವಿಧ ಶ್ರೇಣಿಯ 17 ಹೊಸ ಟ್ರಕ್‌ಗಳನ್ನು ಬಿಡುಗಡೆ ಮಾಡಿದೆ. ಮಂಗಳವಾರ ದೆಹಲಿಯ ಭಾರತ ಮಂಡಪಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವುಗಳ ಅನಾವರಣ ಮಾಡಲಾಯಿತು.
ಚಾಲಕರ ಸುರಕ್ಷತೆ ಮತ್ತು ಮಾಲೀಕರ ಲಾಭವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿರುವ ಹೊಚ್ಚಹೊಸ ಅಜುರಾ, ಮೊದಲ ಬಾರಿ ಮಾರುಕಟ್ಟೆ ಪ್ರವೇಶಿಸಲಿರುವ ಇ.ವಿ. ಹಾಗೂ ಪ್ರೈಮಾ, ಸಿಗ್ನಾ, ಅಲ್ಟ್ರಾ ಮಾದರಿಯ ಸುಧಾರಿತ ಆವೃತ್ತಿಯನ್ನು ಕಂಪನಿಯ ಎಂಡಿ, ಸಿಇಓ ಆಗಿರುವ ಗಿರೀಶ್ ವಾಘ್, ಉಪಾಧ್ಯಕ್ಷ ರಾಜೇಶ್ ಕೌಲ್ ಉಪಸ್ಥಿತಿಯಲ್ಲಿ ಪ್ರದರ್ಶಿಸಲಾಯಿತು.
ಈ ವೇಳೆ ಮಾತನಾಡಿದ ವಾಘ್, ‘ದೇಶದ ಪ್ರಗತಿಪರ ನೀತಿಗಳು, ಆಧುನಿಕ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಬೇಡಿಕೆಯಿಂದಾಗಿ ಟ್ರಕ್ ಕ್ಷೇತ್ರದಲ್ಲಿ ಕ್ಷಿಪ್ರ ಹಾಗೂ ಗಮನಾರ್ಹ ಬದಲಾವಣೆಗಳಾಗುತ್ತಿವೆ. ಹೀಗಿರುವಾಗ, ಭವಿಷ್ಯದ ಆವಶ್ಯಕತೆಗಳಿಗೆ ತಕ್ಕಹಾಗೆ ನಮ್ಮ ಟ್ರಕ್‌ಗಳನ್ನು ತಯಾರಿಸಿದ್ದೇವೆ. ನಮ್ಮ ಟ್ರಕ್‌ಗಳನ್ನು ಚಲಾಯಿಸುವವರು ಸುರಕ್ಷಿತವಾಗಿ ತಮ್ಮ ಮನೆ ತಲುಪಬೇಕು ಎಂಬುದೇ ನಮ್ಮ ಗುರಿ. ಬೆಟರ್ ಆಲ್ವೇಸ್ ಎಂಬ ಧ್ಯೇಯದಡಿ ಆತ್ಮನಿರ್ಭರ ಭಾರತ ತತ್ವಕ್ಕೆ ತಕ್ಕಹಾಗೆ ಹೊಸ ಆವಿಷ್ಕಾರಗಳನ್ನು ಮಾಡುತ್ತೇವೆ. ಪ್ರಸ್ತುತ ಬಿಡುಗಡೆಯಾಗಿರುವ ಟ್ರಕ್‌ಗಳು 4-5 ವರ್ಷಗಳ ಸಂಶೋಧನೆ ಮತ್ತು 2-3 ವರ್ಷದ ಪರೀಕ್ಷೆಯ ಫಲವಾಗಿದೆ’ ಎಂದರು.
2045ಕ್ಕೇ ಶೂನ್ಯ ಕಾರ್ಬನ್ ಗುರಿ:
ಭಾರತ 2070ರ ಹೊತ್ತಿಗೆ ನಿವ್ವಳ ಶೂನ್ಯ ಕಾರ್ಬನ್ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯನ್ನು ಹಾಕಿಕೊಂಡಿದೆ. ಆದರೆ ಟಾಟಾ ಇದನ್ನು 2045ರ ಒಳಗಾಗಿ ಮಾಡುವ ಪ್ರಯತ್ನದಲ್ಲಿದ್ದೇವೆ. ಇದಕ್ಕೆ ಪೂರಕವಾಗಿ ವಿದ್ಯುತ್ ಚಾಲಿತ ಟ್ರಕ್‌ಗಳನ್ನು ಪರಿಚಯಿಸುವುದರ ಜತೆಗೆ ಡೀಸೆಲ್ ವಾಹನಗಳು ಕಡಿಮೆ ಇಂಧನ ಬಳಸುವಂತೆ ಉನ್ನತೀಕರಿಸಿದ್ದೇವೆಂದೂ ವಾಘ್ ಹೇಳಿದ್ದಾರೆ.
ಅಜೂರಾ ಅದ್ಭುತ:
ಟಾಟಾದ ಹೊಸ ‘ಅಜುರಾ’ ಮಾದರಿಯ ಟ್ರಕ್‌ಗಳು ಮಧ್ಯಮ ಮತ್ತು ಹಗುರ ವಾಣಿಜ್ಯ ವಾಹನ (ಐಎಲ್ಎಂಸಿವಿ) ವಿಭಾಗಕ್ಕೆ ಸೇರಿದವಾಗಿವೆ. ಇವುಗಳು 7ರಿಂದ 19 ಟನ್ ಸರಕನ್ನು ಹೊರುವ ವಿವಿಧ ಮಾದರಿಗಳು ಲಭ್ಯವಿವೆ. 3.6 ಲೀ. ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿರುವ ಇದು, ಇ-ಕಾಮರ್ಸ್, ಗೃಹೋಪಯೋಗಿ ವಸ್ತುಗಳು, ನಿರ್ಮಾಣ ಸಾಮಗ್ರಿ, ಕೃಷಿ ಉತ್ಪನ್ನ ಮತ್ತು ಕೈಗಾರಿಕಾ ಸರಕುಗಳ ಸಾಗಣೆಗೆ ಹೇಳಿಮಾಡಿಸಿದಂತಿದೆ. ಚಾಲಕರ ಅನುಕೂಲಕ್ಕಾಗಿ ಇಬ್ಬರು ಕೂರಬಹುದಾದಂತಹ ವಿಶಾಲವಾದ ಮತ್ತು ಸುರಕ್ಷಿತ ಕ್ಯಾಬಿನ್‌ಗಳನ್ನು ಒದಗಿಸಲಾಗಿದೆ.
ಇ.ವಿ. ಟ್ರಕ್:
ದ್ವಿಚಕ್ರ ಮತ್ತು 4 ಚಕ್ರದ ವಾಹನಗಳ ಉತ್ಪಾದಕರು ಮತ್ತು ಗ್ರಾಹಕರು ನಿಧಾನವಾಗಿ ಇ.ವಿ.ಗಳತ್ತ ಮುಖ ಮಾಡುತ್ತಿರುವ ಹೊತ್ತಿನಲ್ಲಿ ಟಾಟಾ ಮೋಟಾರ್ಸ್ ವಿದ್ಯುತ್ ಚಾಲಿತ ಟ್ರಕ್‌ಗಳ ಉತ್ಪಾದನೆಗೆ ಕೈಹಾಕಿದ್ದು, 7-55 ಟನ್ ತೂಕ ಹೊರಬಲ್ಲ ಟ್ರಕ್‌ಗಳನ್ನು ಪರಿಚಯಿಸಿದೆ. ಅವುಗಳ ಅಲ್ಟ್ರಾ ಸರಣಿಯು 7, 9, 12 ಟನ್ ಸಾಮರ್ಥ್ಯಗಳಲ್ಲಿ ಲಭ್ಯವಿವೆ. ಪ್ರೈಮಾ ಇ.55ಎಸ್ ಪ್ರೈಂ ಮೂವರ್ 470 ಕಿಲೋವಾಟ್ ಪವರ್ ಮತ್ತು 453 ಕಿಲೋವಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಕ್ಕಾಗಿ ವಿನ್ಯಾಸಗೊಳಿಸಲಾದ ಪ್ರೈಮಾ ಇ.28ಕೆ ಟಿಪ್ಪರ್, ವೇಗದ ಕಾರ್ಯಾಚರಣೆ ಮತ್ತು ಪರಿಸರ ಸ್ನೇಹಿ ಗಣಿಗಾರಿಕೆಗೆ ಪೂರಕವಾಗಿದೆ.
ಈ ದೈತ್ಯದೇಹಿಗಳ ಬ್ಯಾಟರಿಗಳು ವೇಗವಾಗಿ (2 ತಾಸಲ್ಲಿ) ಚಾರ್ಜ್ ಆಗುವಂತಿದ್ದು, ಇದಕ್ಕೆ ಇನ್ನಷ್ಟು ವೇಗ ತುಂಬಲು 2 ಗನ್ ಬಳಸಿ ಏಕಕಾಲಕ್ಕೆ ಚಾರ್ಜ್ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಇವುಗಳ ಬೆಲೆಯನ್ನು ಬಹಿರಂಗಪಡಿಸಿಲ್ಲವಾದರೂ, ಸಾಮರ್ಥ್ಯಕ್ಕೆ ಅನುಗುಣವಾಗಿ ನಿಗದಿಪಡಿಸಲಾಗುವುದು ಎನ್ನಲಾಗಿದೆ.
ಸುರಕ್ಷತೆಗೆ ಆದ್ಯತೆ:
ಚಾಲಕರ ಸುರಕ್ಷತೆಯನ್ನು ಖಚಿತಪಡಿಸುವ ಸಲುವಾಗಿ ಟಾಟಾದ ಎಲ್ಲಾ ಟ್ರಕ್‌ಗಳನ್ನು ಯುರೋಪಿಯನ್ ಕ್ರಾಶ್ ನಿಯಮಗಳ ಅಡಿಯಲ್ಲಿ ಪರೀಕ್ಷಿಸಲಾಗಿದೆ. ಕ್ಯಾಬಿನ್‌ನ ಮೇಲ್ಭಾಗ, ಮುಂಭಾಗ ಹಾಗೂ ಎರಡೂ ಕಡೆಗಳಿಂದ ಅಪಾಯವುಂಟಾದಾಗಲೂ ಅದನ್ನು ತಡೆದುಕೊಳ್ಳಲು ಅವು ಶಕ್ತವಾಗಿವೆ. ಇದರಿಂದಾಗಿ ವಾಹನಗಳ ಮುಖಾಮುಖಿ ಡಿಕ್ಕಿ ಅಥವಾ ಉರುಳಿಬಿದ್ದ ಸಂದರ್ಭಗಳಲ್ಲಿ ಚಾಲಕರು ಸುರಕ್ಷಿತವಾಗಿರಬಲ್ಲರು.
ಇದರೊಂದಿಗೆ, ರಸ್ತೆಯಲ್ಲಿ ಸಾಗುತ್ತಿರುವ ಅನ್ಯ ವಾಹನಗಳ ವೇಗಕ್ಕೆ ಅನುಗುಣವಾಗಿ ಟ್ರಕ್‌ನ ವೇಗವನ್ನು ಹೊಂದಿಸುವ, ಅವುಗಳಿಂದ ಸೂಕ್ತ ಅಂತರ ಕಾಯ್ದುಕೊಳ್ಳುವ, ಲೇನ್ ಬಿಟ್ಟು ಅತ್ತಿತ್ತ ಚಲಿಸಿದರೆ ಅಥವಾ ಚಾಲಕ ತೂಕಡಿಸಿದರೆ ಎಚ್ಚರಿಸುವ ವ್ಯವಸ್ಥೆಗಳು ಇವೆ.
ಪೇಲೋಡ್ ಸಾಮರ್ಥ್ಯ ಹೆಚ್ಚಳ:
ಮೇಲ್ದರ್ಜೆಗೆ ಏರಿಸಲಾಗಿರುವ ಟ್ರಕ್‌ಗಳಲ್ಲಿ ಮಾಡಲಾದ ಪ್ರಮುಖ ಬದಲಾವಣೆಯೆಂದರೆ, ಅವುಗಳ ಪೇಲೋಡ್ ಸಾಮರ್ಥ್ಯದ ಹೆಚ್ಚಿಸುವಿಕೆ. ಇದರಡಿಯಲ್ಲಿ ಟಾಟಾ ಟ್ರಕ್‌ಗಳಿನ್ನು ಮೊದಲಿಗಿಂತ 1.8 ಟನ್ ಅಧಿಕ ತೂಕ ಹೊರಬಲ್ಲವು. ಇದರಿಂದಾಗಿ ಇಂಧನ ಬಳಕೆ ಶೇ.7ರಷ್ಟು ಕಡಿಮೆಯಾಗುವುದಲ್ಲದೆ ಮಾಲೀಕರ ವೆಚ್ಚ ಶೇ.60ರಷ್ಟು ತಗ್ಗಲಿದೆ. ಟ್ರಕ್‌ಗಳ ಗಾತ್ರ ಅಥವಾ ಚಕ್ರಗಳ ಸಂಖ್ಯೆಯನ್ನು ಏರಿಸದೇ ಇದನ್ನು ಸಾಧಿಸಲಾಗಿರುವುದು ಗಮನಾರ್ಹ.


