6 ಕಿ.ಮೀ ಪ್ರಯಾಣಕ್ಕೆ ಪ್ರಯಾಣಿಕ ಕಂಗಾಲು, 32 ಲಕ್ಷ ರೂಪಾಯಿ ಚಾರ್ಜ್ ಮಾಡಿದ ಉಬರ್!
ಉಬರ್ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕನಿಗೆ 5 ನಿಮಿಷದಲ್ಲಿ ಕಾರು ಬಂದಿದೆ. ಕ್ಯಾಬ್ ಹತ್ತಿ ನಿಗದಿತ ಸ್ಥಳದಲ್ಲಿ ಇಳಿದಿದ್ದಾನೆ. 6 ಕೀಲೋಮೀಟರ್ ಪ್ರಯಾಣ, 15 ನಿಮಿಷ ಸಮಯ. ಆದರೆ ಚಾರ್ಜ್ ಬರೋಬ್ಬರಿ 32 ಲಕ್ಷ ರೂಪಾಯಿ. ಬಿಲ್ ನೋಡಿ ಕಂಗಾಲಾದ ಪ್ರಯಾಣಿಕರ ದೂರು ದಾಖಲಿಸಿದ್ದಾನೆ. ಈ ವೇಳೆ ಉಬರ್‌ಗೆ ತಪ್ಪಿನ ಅರಿವಾಗಿದೆ.
ಲಂಡನ್(ಅ.08): ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದೆ ಅನ್ನೋ ಕಾರಣಕ್ಕೆ ಬೆಂಗಳೂರಿನಲ್ಲಿ ಉಬರ್, ಓಲಾ, ರ್ಯಾಪಿಡೋ ಆಟೋಗಳನ್ನು ನಿಷೇಧಿಸಲಾಗಿದೆ. ಇದು ಸುಲಿಗೆಯ ಕಥೆಯಾದರೆ ಇಲ್ಲೊಂದು ಘಟನೆ ನಿಮಗೆ ಅಚ್ಚರಿ ನೀಡಬಹುದು. ಕ್ಯಾಬ್ ಮೂಲಕ 6 ಕಿಲೋಮೀಟರ್ ಪ್ರಯಾಣಿಸಿದ ಪ್ರಯಾಣಿಕನಿಗೆ ಉಬರ್ ಬರೋಬ್ಬರಿ 32 ಲಕ್ಷ ರೂಪಾಯಿ ಚಾರ್ಜ್ ಮಾಡಿದೆ. ಈ ಘಟನೆ ನಡೆದಿರುವುದು ಲಂಡನ್‌ನಲ್ಲಿ. 22 ವರ್ಷಗ ಪ್ರಯಾಣಿಕ ಒಲಿವರ್ ಕಪ್ಲಾನ್ ರಾತ್ರಿ ವೇಳೆ ಪಾರ್ಟಿಗೆ ತೆರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದಾನೆ. ತಲುಪಬೇಕಾದ ಸ್ಥಳ ಉಲ್ಲೇಖಿಸಿದ ಒಲಿವರ್‌ಗೆ 5 ನಿಮಿಷದಲ್ಲಿ ಉಬರ್ ಕ್ಯಾಬ್ ಬಂದಿದೆ. ಕ್ಯಾಬ್ ಹತ್ತಿದ ಒಲಿವರ್‌ನನ್ನು ಪಾರ್ಟಿ ಸ್ಥಳದಲ್ಲಿ ಬಿಟ್ಟಿದ್ದಾನೆ. 15 ನಿಮಿಷದ ಪ್ರಯಾಣದ ಬಳಿಕ ನಿಗದಿತ ಸ್ಥಳ ತಲುಪಿದ ಒಲಿವರ್‌ಗೆ ಆಘಾತ ಎದುರಾಗಿತ್ತು. ಕಾರಣ 32 ಲಕ್ಷ ರೂಪಾಯಿ ಚಾರ್ಜ್ ನೋಡಿ ಕಂಗಲಾಗಿದ್ದಾನೆ.
ಒಲಿವರ್ ಕಪ್ಲಾನ್ ಆ್ಯಶ್ಟನ್‌ಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದಾನೆ. ಆ್ಯಶ್ಟನ್‌ನಲ್ಲಿ ರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ಹೀಗಾಗಿ ತನ್ನ ಕಾರಿನಲ್ಲಿ ತೆರಳಿದರೆ ಡ್ರಿಂಕ್ ಅಂಡ್ ಡ್ರೈವ್ ಸೇರಿದಂತೆ ಇತರ ಸಮಸ್ಯೆಗಳು ಬರಬಹುದು ಅನ್ನೋ ಕಾರಣಕ್ಕೆ ಉಬರ್ ಕ್ಯಾಬ್ ಬುಕ್ ಮಾಡಿದ್ದಾನೆ. 5 ನಿಮಿಷದಲ್ಲಿ ಕ್ಯಾಬ್ ಒಲಿವರ್ ಮನೆ ಮುಂದೆ ಬಂದಿದೆ. ಒಟಿಪಿ ತಿಳಿಸಿ ಕ್ಯಾಬ್ ಹತ್ತಿದ ಒಲಿವರ್‌ನನ್ನು 15 ನಿಮಿಷದಲ್ಲಿ ಉಬರ್ ಚಾಲಕ ಆ್ಯಶ್ಟನ್ ಸ್ಥಕ್ಕೆ ತಲುಪಿಸಿದ್ದಾನೆ. ಆನ್‌ಲೈನ್ ಪೇಮೆಂಟ್ ಕಾರಣ ಒಲಿವರ್ ಕ್ಯಾಬ್‌ನಿಂದ ಇಳಿದ ನೇರವಾಗಿ ಪಾರ್ಟಿ ಹಾಲ್‌ನತ್ತ ತೆರಳಿದ್ದಾನೆ.
ಓಲಾ, ಉಬರ್, ರ್ಯಾಪಿಡೋ ಆಟೋ ಸರ್ವೀಸ್ ನಿಷೇಧ!
ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಬಂದು ಮಲಗಿದ ಒಲಿವರ್ ಮರುದಿನ ಬೆಳಗ್ಗೆ ಎದ್ದು ಮೊಬೈಲ್ ನೋಡಿದಾಗ ಆಘಾತವಾಗಿದೆ. ತನ್ನ ಕ್ರೆಡಿಡ್ ಕಾರ್ಡ್‌ನಿಂದ 32 ಲಕ್ಷ ರೂಪಾಯಿ ಮೊತ್ತ ಉಬರ್ ಕ್ಯಾಬ್ ಪ್ರಯಾಣಕ್ಕೆ ಪಾವತಿಯಾಗಿರುವ ಸಂದೇಶ ಬಂದಿದೆ. ಇರೇ ಇದೇನಿದು ಎಂದು ನೋಡಿದಾಗ ಉಬರ್ ಎಡವಟ್ಟು ಬೆಳಕಿಗೆ ಬಂದಿದೆ. 6 ಕಿಲೋಮೀಟರ್ ಪ್ರಯಾಣಕ್ಕೆ ಉಬರ್ 32 ಲಕ್ಷ ರೂಪಾಯಿ ಚಾರ್ಜ್ ಮಾಡಲಾಗಿದೆ.
ತಕ್ಷಣವೇ ಉಬರ್‌ಗೆ ದೂರು ನೀಡಿದ್ದಾನೆ. ಈತನ ದೂರು ಬಂದ ಬೆನ್ನಲ್ಲೇ ಉಬರ್ ಪ್ರಕರಣದ ವಿಚಾರಣೆ ನಡೆಸಿದೆ. ಇದು ಉಬರ್‌ನಿಂದ ಆಗಿರುವ ತಪ್ಪು ಅನ್ನೋದು ಖಚಿತವಾಗಿದೆ. ಲಂಡನ್ ಸಮೀಪದ ಆ್ಯಶ್ಟನ್ ಅನ್ನೋ ಸ್ಥಳಕ್ಕೆ ಕ್ಯಾಬ್ ಬುಕ್ ಮಾಡಿದ್ದ. ಉಬರ್ ಕ್ಯಾಬ್ ಚಾಲಕ ಮ್ಯಾಪ್‌ನಲ್ಲೂ ನಿಗದಿತ ಸ್ಥಳ ತೋರಿಸಿದೆ. ಆದರೆ ಉಬರ್ ಸಿಸ್ಟಮ್‌ನಲ್ಲಿ ಒಲಿವರ್ ಬುಕ್ ಮಾಡಿದ ಆ್ಯಶ್ಟನ್ ಸ್ಥಳ ಆಸ್ಟ್ರೇಲಿಯಾದಲ್ಲಿ ತೋರಿಸಿದೆ. ಬರೋಬ್ಬರಿ 16,0000 ಕಿಲೋಮೀಟರ್ ದೂರ ಎಂದು ಉಬರ್ ಸಿಸ್ಟಮ್ 32 ಲಕ್ಷ ರೂಪಾಯಿ ಚಾರ್ಜ್ ಮಾಡಿದೆ. ಈ ಕುರಿತು ಉಬರ್ ಒಲಿವರ್ ಬಳಿ ಕ್ಷಮೆಯಾಚಿಸಿದೆ. ಇಷ್ಟೇ ಅಲ್ಲ, ನಿಮ್ಮ ಪ್ರಯಾಣ ದರ ಕೇವಲ 900 ರೂಪಾಯಿ ಎಂದು ಉಬರ್ ಹೇಳಿದೆ.
ಪ್ರಯಾಣಿಕರ ಸುಲಿಗೆಗೆ ಬೆಲೆತೆತ್ತ ಓಲಾ, ಉಬರ್: ಚಾಲಕರು, ಪ್ರಯಾಣಿಕರು ಇಬ್ಬರಿಗೂ ಅನ್ಯಾಯ