ಬೆಂಗಳೂರು(ಜ.12):   ಬೆಂಗಳೂರಿನ ಯುವ ರೇಸರ್‌ಗಳು 2020ರ ಮೀಕೋ-ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್ (ರೋಟಾಕ್ಸ್ ಮ್ಯಾಕ್ಸ್)ನಲ್ಲಿ ಪಾರಮ್ಯ ಮೆರೆದಿದ್ದು, ಅರ್ಜುನ್ ಮೈನಿ, ರಿಶೋನ್ ರಾಜೀವ್ ಮತ್ತು ಇಶಾನ್ ಮಾದೇಶ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. 

ಎಫ್‌2 ರೇಸ್‌ ಗೆದ್ದ ಮೊದಲ ಭಾರತೀಯ ಜೆಹನ್ ದಾರೂವಾಲಾ.

ಕೋವಿಡ್ ನಡುವೆಯೇ ಎಲ್ಲ ಚಾಲಕರು ಹಾಗೂ ತಂಡಗಳ ಸುರಕ್ಷತೆ ಹಾಗೂ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ಒಂದೇ ಸ್ಥಳದಲ್ಲಿ ಸತತ 3 ಸುತ್ತುಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ವಾರಾಂತ್ಯದಲ್ಲಿ ಭಾರತದ ಮೊದಲ ಫಾರ್ಮುಲಾ 1 ಡ್ರೈವರ್ ಎನ್ನುವ ಹಿರಿಮೆ ಹೊಂದಿರುವ ನರೇನ್ ಕಾರ್ತಿಕೇಯನ್ ಅತಿಥಿ ಚಾಲಕರಾಗಿ ಪಾಲ್ಗೊಂಡು ಕೆಲ ರೇಸ್‌ನಲ್ಲಿ ಭಾಗವಹಿಸಿದರು. 

ಫಾರ್ಮುಲಾ 2 ಚಾಲಕ ಅರ್ಜುನ್ ಮೈನಿ (ಎನ್‌ಕೆ ರೇಸಿಂಗ್ ಅಕಾಡೆಮಿ) ರೋಟಾಕ್ಸ್ ಮ್ಯಾಕ್ಸ್‌ನ ಗುಣಮಟ್ಟಕ್ಕಿಂತ ಬಹಳ ಉತ್ಕೃಷ್ಟವಾದ ಪ್ರದರ್ಶನ ತೋರಿ ಎಲ್ಲ ಮೂರು ಸುತ್ತುಗಳಲ್ಲಿ ಗರಿಷ್ಠ ಅಂಕಗಳನ್ನು ಕಲೆಹಾಕಿ ಪ್ರಶಸ್ತಿಗೆ ಮುತ್ತಿಟ್ಟರು. 

ಪ್ರೀ-ಫೈನಲ್ಸ್ ಮತ್ತು ಫೈನಲ್ಸ್‌ನ 3ನೇ ಹಾಗೂ 4ನೇ ಸುತ್ತಿನಲ್ಲಿ ಅವರು ೨ನೇ ಸ್ಥಾನ ಪಡೆದರು ಆದರೆ 5ನೇ ಸುತ್ತಿನಲ್ಲಿ 2 ಬಾರಿ ಮೊದಲ ಸ್ಥಾನ ಪಡೆದು ಒಟ್ಟಾರೆ 421 ಅಂಕಗಳನ್ನು ಕಲೆಹಾಕಿದರು. ಅವರ ಕಿರಿಯ ಸಹೋದರ ಖುಷ್ (ಎನ್‌ಕೆ ರೇಸಿಂಗ್ ಅಕಾಡೆಮಿ), ತಾವು ಕಣಕ್ಕಿಳಿದಿದ್ದ ಎಲ್ಲ ಮೂರು ಸುತ್ತುಗಳಲ್ಲಿ ಅಗ್ರಸ್ಥಾನ ಗಳಿಸಿದರು. ಆದರೆ 2ನೇ ಹಾಗೂ 5ನೇ ಸುತ್ತಿನಲ್ಲಿ ಖುಷ್ ಸ್ಪರ್ಧಿಸದ ಕಾರಣ ಅವರ ಸಹೋದರ ಅರ್ಜುನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಅನುಕೂಲವಾಯಿತು. 

ಈ ವಿಭಾಗದಲ್ಲಿ ಆಗ್ರಾದ ಶಹಾನ್ ಅಲಿ ಮೋಹ್ಶಿನ್ (ಎಂಸ್ಪೋರ್ಟ್) 400 ಅಂಕಗಳೊಂದಿಗೆ 2ನೇ ಸ್ಥಾನ ಗಳಿಸಿದರೆ, ಬೆಂಗಳೂರಿನವರೇ ಆದ ಮಿಹಿರ್ ಸುಮನ್ (ಬಿರೆಲ್ ಆರ್ಟ್) ಕೇವಲ 4 ಅಂಕಗಳಿಂದ ಹಿಂದೆ ಬಿದ್ದು ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದರು. 

ಬೆಂಗಳೂರಿನ ಮತ್ತೊಬ್ಬ ಯುವ ರೇಸರ್ ರಿಶೋನ್ ರಾಜೀವ್ (ಬಿರೆಲ್ ಆರ್ಟ್) ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿ ೪೩೬ ಅಂಕಗಳೊಂದಿಗೆ ಕಿರಿಯರ ಮ್ಯಾಕ್ಸ್ ಪ್ರಶಸ್ತಿಯನ್ನು ಜಯಿಸಿದರು. ಎಚ್ಚರಿಕೆಯ ಆರಂಭ ಪಡೆದ ರಿಶೋನ್, 3ನೇ ಸುತ್ತಿನ ಎರಡು ರೇಸ್ ಹಾಗೂ 4ನೇ ಸುತ್ತಿನ ಮೊದಲ ರೇಸ್‌ನಲ್ಲಿ 3ನೇ ಸ್ಥಾನ ಪಡೆದರು. ಆದರೆ ಆನಂತರ ಅವರ ಓಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಉಳಿದ 3 ರೇಸ್‌ಗಳಲ್ಲಿ ರಿಶೋನ್ ಮೊದಲ ಸ್ಥಾನ ಗಳಿಸಿದರು. ತಮ್ಮ ಸ್ಥಿರ ಪ್ರದರ್ಶನಕ್ಕೆ ವರ್ಷದ ಶ್ರೇಷ್ಠ ಚಾಲಕ ಪ್ರಶಸ್ತಿಯನ್ನೂ ಸಹ ಗಳಿಸಿದರು. 
410 ಅಂಕಗಳೊಂದಿಗೆ ರುಹಾನ್ ಆಳ್ವಾ (ಎಂಸ್ಪೋರ್ಟ್) ಹಾಗೂ 399 ಅಂಕಗಳೊಂದಿಗೆ ರೋಹನ್ ಮಾದೇಶ್ (ಪೆರಿಗ್ರೈನ್ ರೇಸಿಂಗ್ ಇಂಟರ್‌ನ್ಯಾಷನಲ್) ಉಳಿದೆರಡು ಸ್ಥಾನಗಳನ್ನು ಗಳಿಸಿದರು. 

ರೋಹನ್‌ರ ಕಿರಿಯ ಸಹೋದರ ಇಶಾನ್ ಮಾದೇಶ್ (ಪೆರಿಗ್ರೈನ್ ರೇಸಿಂಗ್ ಇಂಟರ್‌ನ್ಯಾಷನಲ್) ಮಿಕ್ರೋ ಮ್ಯಾಕ್ಸ್ ವಿಭಾಗದಲ್ಲಿ ಚಾಂಪಿಯನ್‌ಶಿಪ್ ಟ್ರೋಫಿಗೆ ಮುತ್ತಿಟ್ಟರು. 445 ಅಂಕ ಗಳಿಸಿದ ಇಶಾನ್ 2ನೇ ಸ್ಥಾನ ಪಡೆದ ಆದಿತ್ಯ ಸುರೇಶ್ ಕಾಮತ್ (ಬಿರೆಲ್ ಆರ್ಟ್ ರೇಸಿಂಗ್; 413) ಹಾಗೂ ಅರಾಫತ್ ಶೇಖ್ (ಎಂಸ್ಪೋರ್ಟ್; 413)ರನ್ನು ದೊಡ್ಡ ಅಂತರದಲ್ಲಿ ಹಿಂದಿಕ್ಕಿದರು. 

ಆದಿತ್ಯ ಈ ಚಾಂಪಿಯನ್‌ಶಿಪ್‌ನ ಉದಯೋನ್ಮುಖ ರೇಸರ್ ಪ್ರಶಸ್ತಿ ಗಳಿಸಿದರು. ಇಶಾನ್ ಮಾದೇಶ್ ಈ ಋತುವಿನಲ್ಲಿ ಅತಿಹೆಚ್ಚು ಪೋಲ್ ಪೊಸಿಷನ್ ಹಾಗೂ ಅತಿಹೆಚ್ಚು ಗೆಲುವು ಸಾಧಿಸಿದ ರೇಸರ್ ಎಂಬ 2 ವಿಶೇಷ ಪ್ರಶಸ್ತಿಗಳಿಗೆ ಪಾತ್ರರಾದರು. 

ನರೇನ್ ಕಾರ್ತಿಕೇಯನ್ (ಎಫ್‌1), ಅರ್ಜುನ್ ಮೈನಿ (ಎಫ್‌2) ಹಾಗೂ ಖುಷ್ ಮೈನಿ (ಎಫ್‌3) ಪಾಲ್ಗೊಂಡಿದ್ದು ಚಾಂಪಿಯನ್‌ಶಿಪ್‌ನ ಮೌಲ್ಯ ಹೆಚ್ಚಿಸಿದ್ದು, ಭಾರತದ ಯುವ ರೇಸರ್‌ಗಳಿಗೆ ಉತ್ತಮ ವೇದಿಕೆ ಒದಗಿಸುವ ಮೀಕೋ ಮೋಟಾರ್‌ಸ್ಪೋರ್ಟ್ಸ್‌ನ ಬದ್ಧತೆಯನ್ನು ತೋರಿಸುತ್ತದೆ. 

ಚಾಂಪಿಯನ್‌ಶಿಪ್‌ನ ವಿಜೇತರು:
ಸೀನಿಯರ್ ಮ್ಯಾಕ್ಸ್: 1.ಅರ್ಜುನ್ ಮೈನಿ (ಎನ್‌ಕೆ ರೇಸಿಂಗ್ ಅಕಾಡೆಮಿ, 431), 
2.ಶಹಾನ್ ಅಲಿ ಮೋಹ್ಶಿನ್ (ಎಂಸ್ಪೋರ್ಟ್, 400), 
3.ಮಿಹಿರ್ ಸುಮನ್ (ಬಿರೆಲ್ ಆರ್ಟ್, 396)

ಜೂನಿಯರ್ ಮ್ಯಾಕ್ಸ್: 1.ರಿಶೋನ್ ರಾಜೀವ್ (ಬಿರೆಲ್‌ಆರ್ಟ್, 436), 2.ರುಹಾನ್ ಆಳ್ವಾ (ಎಂಸ್ಪೋರ್ಟ್, 410), 3.ರೋಹನ್ ಮಾದೇಶ್(ಪೆರಿಗ್ರೈನ್ ರೇಸಿಂಗ್, 399) 

ಮೈಕ್ರೋ ಮ್ಯಾಕ್ಸ್: 1.ಇಶಾನ್ ಮಾದೇಶ್ (ಪೆರಿಗ್ರೈನ್ ರೇಸಿಂಗ್, 445), ಆದಿತ್ಯ ಸುರೇಶ್ ಕಾಮತ್ (ಬಿರೆಲ್ ಆರ್ಟ್ ರೇಸಿಂಗ್ 413), 3.ಅರಾಫತ್ ಶೇಖ್ (ಎಂಸ್ಪೋರ್ಟ್, 413)