ದಾವಣಗೆರೆ: ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒತ್ತಾಯ
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗ ಕುರಿತು ಪತ್ರ| ಕೇಂದ್ರ ರೈಲ್ವೆ ಸಚಿವ ಗೋಯಲ್‌ಗೆ ರೈಲ್ವೆ ಪ್ರಯಾಣಿಕರ ಸಂಘದಿಂದ ಪತ್ರ| ಉದ್ದೇಶಿತ ನೇರ ರೈಲ್ವೆ ಮಾರ್ಗದ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಲ್ಲಿ ಬೆಂಗಳೂರು-ದಾವಣಗೆರೆ ಮಧ್ಯೆ 65 ಕಿಮೀನಷ್ಟು ಅಂತರ ಕಡಿಮೆಯಾಗುತ್ತದೆ| ಈಗಾಗಲೇ ಈ ಮಾರ್ಗದ ಸಮೀಕ್ಷೆ ಕಾರ್ಯವೂ ಪೂರ್ಣವಾಗಿದೆ| ನೇರ ಮಾರ್ಗದಿಂದ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗಿ, ವಿಜಯಪುರ ಮಧ್ಯೆ ಇರುವ ಅಂತರ ಸಹ ಗಣನೀಯವಾಗಿ ಕಡಿಮೆಯಾಗುತ್ತದೆ|
ದಾವಣಗೆರೆ(ಅ.10): ಬಹು ದಶಕಗಳ ಕನಸಾದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಉತ್ತರ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ಮಧ್ಯೆ ಇರುವ ಅಂತರ ಕಡಿಮೆ ಮಾಡುವಂತೆ ನೈರುತ್ಯ ರೈಲ್ವೆ ವಲಯದ ಪ್ರಯಾಣಿಕರ ಸಂಘ, ಕೇಂದ್ರ ವಲಯದ ರೈಲ್ವೆ ಪ್ರಯಾಣಿಕರ ಸಂಘ ಕೇಂದ್ರ ರೈಲ್ವೆ ಸಚಿವರಿಗೆ ಒತ್ತಾಯಿಸಿದೆ.
ಉದ್ದೇಶಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿಯು ಕಳೆದ ಕೆಲ ವರ್ಷದಿಂದಲೂ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಬಹು ಮುಖ್ಯವಾದ ಯೋಜನೆ ಆಮೆಗತಿಯಲ್ಲಿ ಸಾಗುತ್ತಿರುವುದು ಕಂಡು ಬರುತ್ತಿದೆ ಎಂದು ಸಂಘದ ಕಾರ್ಯದರ್ಶಿ ರೋಹಿತ್‌ಕುಮಾರ ಎಸ್.ಜೈನ್, ಅಶ್ವಿನ್ ಜೈನ್ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಕೇಂದ್ರ ರೈಲ್ವೆ ಮಂಡಳಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತ್ವರಿತವಾಗಿ ಉದ್ದೇಶಿತ ನೇರ ರೈಲ್ವೆ ಮಾರ್ಗದ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಲ್ಲಿ ಬೆಂಗಳೂರು-ದಾವಣಗೆರೆ ಮಧ್ಯೆ 65 ಕಿಮೀನಷ್ಟು ಅಂತರ ಕಡಿಮೆಯಾಗುತ್ತದೆ. ಈಗಾಗಲೇ ಈ ಮಾರ್ಗದ ಸಮೀಕ್ಷೆ ಕಾರ್ಯವೂ ಪೂರ್ಣವಾಗಿದೆ. ನೇರ ಮಾರ್ಗದಿಂದ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗಿ, ವಿಜಯಪುರ ಮಧ್ಯೆ ಇರುವ ಅಂತರ ಸಹ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಹೊಸ ಮಾರ್ಗ ನಿರ್ಮಾಣವಾಗುವುದರಿಂದ ಬೆಂಗಳೂರು-ಚಿತ್ರದುರ್ಗ ಮಧ್ಯೆ ಅಂತರವು 110 ಕಿಮೀನಷ್ಟು ಕಡಿಮೆ ಆಗಲಿದೆ. ಸಿರಾ, ಹಿರಿಯೂರು ಹೊಸ ರೈಲ್ವೆ ಮಾರ್ಗ, ಹೊಸ ರೈಲು ಸಂಪರ್ಕವನ್ನು ಕಲ್ಪಿಸಿದಂತಾಗುತ್ತದೆ. ಈವರೆಗೆ ರೈಲ್ವೇ ಮಾರ್ಗ, ರೈಲ್ವೆ ಸೇವೆಯನ್ನೇ ಕಾಣದ ಸಿರಾ, ಹಿರಿಯೂರು ಭಾಗದ ಪ್ರಯಾಣಿಕರಿಗೂ ಸಾಕಷ್ಟು ಅನುಕೂಲ ಆಗಲಿದೆ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರವು ಶೇ.50 ರಷ್ಟು ಕಡಿಮೆಯಾಗಲಿದೆ. ಶಿವಮೊಗ್ಗ-ಬೆಂಗಳೂರು ಮಧ್ಯೆ ಹೆಚ್ಚು ಪ್ರಯಾಣಿಕ ರೈಲುಗಳನ್ನು ಹೊಂದಲು ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೇ, ಬೆಂಗಳೂರಿನಿಂದ ಬೆಳಗಾವಿ, ವಿಜಯಪುರ ಮಧ್ಯೆ ಇರುವ ಮಾರ್ಗದಲ್ಲಿ ಶೇ.35 ರಷ್ಟು ರೈಲು ಸಂಚಾರವೂ ಕಡಿಮೆಯಾಗಲಿದೆ.
ಈಗಿರುವ ರೈಲ್ವೆ ಮಾರ್ಗದಲ್ಲಿ ಹರಿಹರ-ಬೀರೂರು-ಅರಸೀಕೆರೆ ಸಾಲಿನಲ್ಲಿ ರೈಲು ದಟ್ಟಣೆ ಕಡಿಮೆಯಾಗುವುದರಿಂದಾಗಿ ಹೆಚ್ಚಿನ ಮಟ್ಟದಲ್ಲಿ ಸರಕು ಸಾಗಾಣಿಕೆ ಗೂಡ್ಸ್ ರೈಲುಗಳಿಗೂ ಸಾಕಷ್ಟುಅನುಕೂಲವಾಗುತ್ತದೆ. ಮುಖ್ಯವಾಗಿ ವಿವಿಧ ಜಿಲ್ಲೆಗಳ ಮಧ್ಯೆ ಅಂತರ ಕಡಿಮೆಯಾಗುತ್ತದೆ. ಪ್ರಯಾಣ ಸಮಯ, ಇಂಧನ ವೆಚ್ಚ ಕಡಿಮೆಯಾಗುತ್ತದೆ. ಮಾನವ ಸಮಯವೂ ಉಳಿತಾಯವಾಗುವ ಜೊತೆಗೆ ರೈಲ್ವೆ ಇಲಾಖೆ ಇಂಧನ ವೆಚ್ಚವೂ ಕಡಿಮೆಯಾದಂತಾಗುತ್ತದೆ ಎಂದು ವಿವರಿಸಿದ್ದಾರೆ.
ಉದ್ದೇಶಿತ ನೇರ ರೈಲ್ವೆ ಮಾರ್ಗದ ಅತ್ಯವಶ್ಯಕತೆ, ಅಗತ್ಯತೆ ಗಮನದಲ್ಲಿಟ್ಟುಕೊಂಡು, ಈ ಭಾಗದ ಪ್ರಯಾಣಿಕರ ಭಾವನೆಗಳಿಗೆ ಕಿವಿಗೊಟ್ಟು ಕೇಂದ್ರ ರೈಲ್ವೆ ಸಚಿವರು, ರೈಲ್ವೆ ಮಂಡಳಿ ಅಧ್ಯಕ್ಷರು ಪ್ರಥಮಾದ್ಯತೆಯ ಮೇಲೆ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಂಡು, ಪೂರ್ಣಗೊಳಿಸಲು ಮುಂದಾಗಬೇಕು ಎಂದು ರೋಹಿತ ಎಸ್.ಜೈನ್, ಅಶ್ವಿನ್ ಜೈನ್ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ನಕ್ಷೆ
ನೇರ ಮಾರ್ಗದಿಂದ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗಿ, ವಿಜಯಪುರ ಮಧ್ಯೆ ಇರುವ ಅಂತರ ಸಹ ಗಣನೀಯವಾಗಿ ಕಡಿಮೆಯಾಗುತ್ತದೆ. ಹೊಸ ಮಾರ್ಗ ನಿರ್ಮಾಣದಿಂದ ಬೆಂಗಳೂರು-ಚಿತ್ರದುರ್ಗ ಮಧ್ಯೆ ಅಂತರವು 110 ಕಿಮೀನಷ್ಟುಕಡಿಮೆ ಆಗಲಿದೆ. ಸಿರಾ, ಹಿರಿಯೂರು ಹೊಸ ರೈಲ್ವೆ ಮಾರ್ಗ, ಹೊಸ ರೈಲು ಸಂಪರ್ಕವನ್ನು ಕಲ್ಪಿಸಿದಂತಾಗುತ್ತದೆ. ಈವರೆಗೆ ರೈಲ್ವೇ ಮಾರ್ಗ, ರೈಲ್ವೆ ಸೇವೆಯನ್ನೇ ಕಾಣದ ಸಿರಾ, ಹಿರಿಯೂರು ಭಾಗದ ಪ್ರಯಾಣಿಕರಿಗೂ ಸಾಕಷ್ಟುಅನುಕೂಲ ಆಗಲಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಯಾಣಿಕರ ಸಂಘ ಹೇಳಿದೆ.