ದಾವಣಗೆರೆ [ಅ.07]: ವಾಹನ ಸವಾರನಿಂದ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸದೇ, ಅಕ್ರಮವಾಗಿ ಹಣ ವಸೂಲು ಮಾಡಿದ್ದ ಮುಖ್ಯಪೇದೆ ಹಾಗೂ ಎಎಸ್‌ಐಗೆ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಟ ಹನುಮಂತರಾಯ ಆದೇಶ ಹೊರಡಿಸಿದ್ದಾರೆ.

ಪಿ.ಬಿ.ರಸ್ತೆಯಲ್ಲಿ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದ ಸಂಚಾರ ಪೊಲೀಸ್‌ ಠಾಣೆಯ ಇಂಟರ್‌ ಸೆಪ್ಟರ್‌ ವಾಹನದ ಮುಖ್ಯ ಪೇದೆ ರವಿ ಹಾಗೂ ಎಎಸ್‌ಐ ಜಯಣ್ಣ ಅಮಾನತುಗೊಂಡವರು.

ಸಂಚಾರಿ ಪೊಲೀಸ್‌ ಠಾಣೆಯ ಮುಖ್ಯಪೇದೆ ರವಿ ಇಲ್ಲಿನ ಪಿ.ಬಿ.ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ಸವಾರನಿಂದ 500-600 ರು. ವಸೂಲು ಮಾಡಿ, ಅದಕ್ಕೆ ರಸೀದಿ ನೀಡಿರಲಿಲ್ಲ. ಇತ್ತ ಈ ದೃಶ್ಯವನ್ನೆಲ್ಲಾ ಮೊಬೈಲ್‌ನಲ್ಲಿ ಸೆರೆ ಹಿಡಿದ ಸವಾರನು ಅದನ್ನು ಸೋಷಿಯಲ್‌ ಮೀಡಿಯಾಗಳಲ್ಲೂ ಹರಿಯ ಬಿಟ್ಟಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ವಿಧಿಸಿದ್ದಕ್ಕೆ ರಸೀದಿಯನ್ನೂ ನೀಡದ ಮುಖ್ಯಪೇದೆ ರವಿ ಬಳಿ ವಾಹನ ಸವಾರನು ಮುಂದೆ ಎಲ್ಲಿಯಾದರೂ ವಾಹನವನ್ನು ಪೊಲೀಸರು ತಡೆಯುತ್ತಾರಾ ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಮುಖ್ಯ ಪೇದೆ ರವಿ ಅಲ್ಲಿಯೂ ಗಾಡಿ ಹಿಡಿಯುತ್ತಾರೆ ಕೊಡು ಎಂಬಂತೆ ಬೇಜವಾಬ್ಧಾರಿಯಿಂದ ವರ್ತಿಸುತ್ತಾ, ಮತ್ತೊಂದು ವಾಹನ ತಡೆಯಲು ಮುಂದಾಗುವ ದೃಶ್ಯ ವೈರಲ್‌ ಆಗಿ, ಸಾರ್ವಜನಿಕರಿಂದ ತೀವ್ರ ಟೀಕೆಗೂ ಗುರಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಎಸ್ಪಿ ಹನುಮಂತರಾಯ ಸಂಚಾರಿ ಠಾಣೆ ಮುಖ್ಯಪೇದೆ ರವಿ, ಎಎಸ್‌ಐ ಜಯಣ್ಣಗೆ ಅಮಾನತು ಮಾಡಿ, ಮುಂದಿನ ತನಿಖೆಗೆ ಆದೇಶಿಸಿದ್ದಾರೆ.