ವಿಷದ ಮೇವಿನ ಪರಿಣಾಮ ಒಂದೇ ಬಾರಿ ಅಸುನೀಗಿದ 150 ಕುರಿಗಳು
ವಿಷಯುಕ್ತ ಮೇವು ಸೇವಿಸಿದ 150 ಕ್ಕೂ ಹೆಚ್ಚು ಕುರಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ [ಅ.19]: ವಿಷಯುಕ್ತ ಮೇವು ಸೇವಿಸಿದ 150 ಕ್ಕೂ ಹೆಚ್ಚು ಕುರಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ಘಟನೆ ನ್ಯಾಮತಿ ತಾಲೂಕಿನ ಜಯನಗರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ವರದಿಯಾಗಿದೆ. ನ್ಯಾಮತಿ ತಾಲೂಕು ಸಂಚಾರಿ ಕುರಿಗಾಯಿ ಮೈಲಪ್ಪ ವಾಲಿಕೆ ಎಂಬುವರಿಗೆ ಸೇರಿದ ಕುರಿಗಳನ್ನು ಹೊಲವೊಂದರಲ್ಲಿ ಮೇಯಲು ಬಿಡಲಾಗಿತ್ತು. ಮೇವು ಮೇಯ್ದ ಕೆಲವೇ ಹೊತ್ತಿನಲ್ಲಿ ಒಂದೊಂದಾಗಿ ಕುರಿಗಳು ತೀವ್ರ ಅಸ್ವಸ್ಥಗೊಂಡು ಸ್ಥಳದಲ್ಲೇ ಬಿದ್ದು ಒತ್ತಾಡುತ್ತಾ ಅಸುನೀಗಿವೆ.
ಎಂದಿನಂತೆ ಕುರಿ ಮೇಯಿಸಲು ಬಂದಿದ್ದ ಕುರಿಗಾಯಿಗಳು ತಮ್ಮ ಕುರಿಗಳನ್ನು ಹೊಲವೊಂದರಲ್ಲಿ ಗುರುವಾರ ಬಿಟ್ಟಿದ್ದರು. ಕುರಿ ಹಿಂಡಿನಲ್ಲಿ ಇದ್ದಕ್ಕಿದ್ದಂತೆ ಒಂದೊಂದಾಗಿ ರಾತ್ರಿಯಿಂದಲೇ ಕುರಿಗಳು ಬಿದ್ದು ಒತ್ತಾಡುತ್ತಾ, ಅಸ್ವಸ್ಥವಾಗುತ್ತಿದ್ದುದನ್ನು ಕಂಡು ತಕ್ಷಣವೇ ಪಶು ವೈದ್ಯರಿಗೆ ವಿಷಯ ಮುಟ್ಟಿಸಿದ್ದಾರೆ.
ಆದರೆ, ವಿಷಯುಕ್ತ ಮೇವನ್ನು ಸೇವಿಸಿರುವ ಕುರಿಗಳು ಸ್ಥಳದಲ್ಲೇ ನಿತ್ರಾಣಗೊಂಡು ಸಾವನ್ನಪ್ಪಿವೆ. ಕುರಿಗಳನ್ನೇ ನಂಬಿಕೊಂಡು ಬದುಕನ್ನು ಕಟ್ಟಿಕೊಂಡಿದ್ದ ಕುರಿಗಾಯಿ ಮೈಲಪ್ಪ ವಾಲಿಕೆ ಮತ್ತು ಕುಟುಂಬ ವರ್ಗ, ಕುರಿಗಾಯಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯುಕ್ತ ಸೊಪ್ಪನ್ನು ಸೇವಿಸಿರುವ ಕುರಿಗಳು ಒಂದೊಂದಾಗಿ ಸಾಮೂಹಿಕ ಸನ್ನಿಗೆ ಒಳಗಾದಂತೆ ತೀವ್ರ ಅಸ್ವಸ್ಥವಾಗಿ ನಿಂತಲ್ಲೇ ನಿತ್ರಾಣಗೊಂಡು ಕುಸಿದು ಬಿದ್ದು ಸಾವನ್ನಪ್ಪಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜೀವಾನಾಧಾರವಾಗಿದ್ದ ಕುರಿ ಹಿಂಡಿನಲ್ಲಿದ್ದ 150 ಕ್ಕೂ ಹೆಚ್ಚು ಕುರಿಗಳು ಸಾಮೂಹಿಕವಾಗಿ ವಿಷಯುಕ್ತ ಮೇವಿಗೆ ಬಲಿಯಾಗಿದ್ದರಿಂದ ಕುರಿಗಾಯಿ ಕುಟುಂಬಕ್ಕೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಸ್ಥಳಕ್ಕೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು, ಪಶು ವೈದ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿದ್ದರು.
ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಂತರ ಸಮೀಪದಲ್ಲೇ ಜೆಸಿಬಿ ಯಂತ್ರದಿಂದ ದೊಡ್ಡ ಗುಂಡಿಯನ್ನು ತೋಡಿ ಅದರಲ್ಲಿ ಅಷ್ಟೂ ಕುರಿಗಳನ್ನು ಹಾಕುವ ಮೂಲಕ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು. ಕುರಿಗಳನ್ನು ಕಳೆದುಕೊಂಡ ಕುರಿಗಳ ಮಾಲೀಕ, ಕುರಿಗಾಯಿ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಇಲಾಖೆಗೆ ಒತ್ತಾಯಿಸಿದ್ದಾರೆ. ಅಧಿಕಾರಿಗಳೂ ಆದಷ್ಟು ಬೇಗನೆ
ಪರಿಹಾರ ಒದಗಿಸುವ ಭರವಸೆ ನೀಡಿ, ಕುರಿಗಾಯಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.