Asianet Suvarna News Asianet Suvarna News

ಮಂಗಳೂರು: ಪಾಲಿಕೆ ಚುನಾವಣೆಗೆ ನೀರಸ ಪ್ರತಿಕ್ರಿಯೆ, ಕೈಕೊಟ್ಟ ಯುವಜನ

ಮಹಾನಗರ ಪಾಲಿಕೆ ಮತದಾನ ದಿನವಾದ ಮಂಗಳವಾರ ಬೆರಳೆಣಿಕೆಯ ಮತಗಟ್ಟೆಗಳನ್ನು ಹೊರತುಪಡಿಸಿದರೆ ಬಹುತೇಕ ಮತಗಟ್ಟೆಗಳಲ್ಲಿ ಸರತಿ ಸಾಲೇ ಕಾಣಲಿಲ್ಲ! ಮತಗಟ್ಟೆಗಳಿಗೆ ಭೇಟಿ ನೀಡಿದಾಗ ಜನಸಂಖ್ಯೆ ತೀರ ವಿರಳವಾಗಿದ್ದು ಕಂಡುಬಂತು.

youth stay back from voting for corporation election
Author
Bangalore, First Published Nov 13, 2019, 10:39 AM IST

ಮಂಗಳೂರು(ನ.13): ಮಹಾನಗರ ಪಾಲಿಕೆ ಮತದಾನ ದಿನವಾದ ಮಂಗಳವಾರ ಬೆರಳೆಣಿಕೆಯ ಮತಗಟ್ಟೆಗಳನ್ನು ಹೊರತುಪಡಿಸಿದರೆ ಬಹುತೇಕ ಮತಗಟ್ಟೆಗಳಲ್ಲಿ ಸರತಿ ಸಾಲೇ ಕಾಣಲಿಲ್ಲ!

ಮತಗಟ್ಟೆಗಳಿಗೆ ಭೇಟಿ ನೀಡಿದಾಗ ಜನಸಂಖ್ಯೆ ತೀರ ವಿರಳವಾಗಿದ್ದು ಕಂಡುಬಂತು. ಮತದಾನ ಎಂದರೆ ಉದ್ದದ ಸರತಿ ಸಾಲು, ಜನರಿಂದ ಗಿಜಿಗುಡುವ- ಹಬ್ಬದ ವಾತಾವರಣ ಸಾಮಾನ್ಯವಾಗಿರುತ್ತದೆ. ಆದರೆ ಪಾಲಿಕೆ ಚುನಾವಣೆ ಇದೆಲ್ಲದಕ್ಕೆ ಹೊರತಾಗಿತ್ತು. ವಿದ್ಯಾವಂತರೇ ಹೆಚ್ಚಿರುವ ನಗರವು ಮತದಾನವೆಂಬ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಹಭಾಗಿಗಳಾಗುವಲ್ಲಿ ಹಿಂದುಳಿದದ್ದು ಸ್ಪಷ್ಟವಾಗಿದೆ. ನಗರದ ಕೇಂದ್ರ ವ್ಯಾಪ್ತಿಯಲ್ಲಿರುವ ಬೂತ್ ಗಳಂತೂ ಬಿಕೋ ಎನಿಸುತ್ತಿದ್ದವು.

ಮಂಗಳೂರು: ಪಾಲಿಕೆ ಮತದಾನ ಶಾಂತಿಯುತ, ನೀರಸ

ಆದರೆ ಕುದ್ರೋಳಿ, ಬಂದರು, ಕೋಡಿಕಲ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಮಾತ್ರ ಜನರ ಉತ್ಸಾಹ ಕಂಡುಬಂತು. ವಿವಿಧ ಪಕ್ಷಗಳು ಟೆಂಟ್ ಹಾಕಿ ಕೂತಿದ್ದರೂ ಅವರ ಬಳಿಯೂ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಬಾರದೆ ಆತಂಕ ತೋಡಿಕೊಂಡರು.

ಕೋಡಿಕಲ್‌ನಲ್ಲಿ ಜನಜಂಗುಳಿ:

ನಗರದ ಕೋಡಿಕಲ್‌ನಲ್ಲಿರುವ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರೋಬ್ಬರಿ 11 ಮತಗಟ್ಟೆಗಳನ್ನು ತೆರೆಯಲಾಗಿದ್ದು, ನೂರಕ್ಕೂ ಹೆಚ್ಚು ಮಂದಿ ಸರತಿಯಲ್ಲಿ ನಿಂತಿದ್ದರು. ಯುವ ಮತದಾರರು ಸೇರಿದಂತೆ ನಡೆಯಲಾಗದ ವೃದ್ಧರು ಕೂಡ ಬಂದು ಇಲ್ಲಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. 86 ವರ್ಷದ ವಿಲಾಸಿನಿ ಅವರು ಕಾರಿನಲ್ಲಿ ಬಂದರೂ ಮತಗಟ್ಟೆ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿರುವ ಹೋಮ್ ಗಾರ್ಡ್ ಮತ್ತು ಪೊಲೀಸ್ ಸಿಬ್ಬಂದಿ ಅವರನ್ನು ಆತ್ಮೀಯತೆಯಿಂದ ಕರೆದೊಯ್ದು ವಿಲಾಸಿನಿ ಅವರ ಸಂಭ್ರಮದಲ್ಲಿ ಪಾಲುದಾರರಾದರು.

ಗ್ಯಾಸ್‌ ಮೇಲೆ ಹಾಲಿಟ್ಟು ಮಲಗಿದ ದಂಪತಿ, ನಿದ್ರಾಸ್ಥಿತಿಯಲ್ಲೇ ಸಾವು..!

82 ವರ್ಷ ಪ್ರಾಯದ ಶೀಲಾವತಿ ಅವರನ್ನು ಸಂಬಂಧಿಕರು ಬಹುಕಷ್ಟದಲ್ಲಿ ಕರೆದುಕೊಂಡು ಬಂದದ್ದು ಅವರಲ್ಲಿನ ಜವಾಬ್ದಾರಿಯನ್ನು ಸಾಬೀತುಪಡಿಸಿತ್ತು. ಈ ಮತಗಟ್ಟೆಯಲ್ಲಿ ಮತದಾರರ ಪರಿಸ್ಥಿತಿಗೆ ಅನುಗುಣವಾಗಿ ಸಿಬ್ಬಂದಿಯನ್ನೂ, ವೀಲ್ ಚೇರ್ ಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಉಳಿದಂತೆ ಸುರತ್ಕಲ್‌ನ ಇಡ್ಯಾ ಪಶ್ಚಿಮ ಮತಗಟ್ಟೆಯೂ ಚಟುವಟಿಕೆಯಿಂದ ಕೂಡಿತ್ತು. ನಡು ಮಧ್ಯಾಹ್ನ 12ರ ಹೊತ್ತಿಗೂ ಉರಿ ಬಿಸಿಲಿನಲ್ಲಿ ಬಂದು ಜನತೆ ಮತ ಚಲಾಯಿಸುತ್ತಿದ್ದರು. ಕಾಟಿಪಳ್ಳ ಉತ್ತರ ವಾರ್ಡ್‌ನ ಕೃಷ್ಣಾಪುರ ಶಾಲೆಯ ಮತಗಟ್ಟೆಯಲ್ಲೂ ಜನರ ಉತ್ಸಾಹ ಕಂಡುಬಂತು.

ಯುವ ಮತದಾರರು ಕೈಕೊಟ್ಟರೇ?

ಕಳೆದ ವಿಧಾನಸಭೆ, ಲೋಕಸಭೆಯಲ್ಲಿ ಗರಿಷ್ಠ ಮತದಾನ ಆಗಿರುವುದರಿಂದ ಸಹಜವಾಗಿ ಪಾಲಿಕೆ ಚುನಾವಣೆಯಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಮತದಾನ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಯುವ ಮತದಾರರು ಈ ಬಾರಿ ಆಸಕ್ತಿ ತೋರಿಸದಿರುವುದು ಮತಗಟ್ಟೆಗಳಲ್ಲಿ ಕಂಡುಬಂತು. ಎಲ್ಲೆಡೆಯೂ ನಡು ವಯಸ್ಸಿನವರು, ಹಿರಿಯ ನಾಗರಿಕರೇ ಹೆಚ್ಚಾಗಿ ಬರುತ್ತಿದ್ದರು. ಚುನಾವಣೆ ಪೂರ್ವ ಸಾಮಾಜಿಕ ಜಾಲತಾಣಗಳಲ್ಲಿ ಯುವ ಸಮೂಹ ಭರ್ಜರಿ ಪ್ರಚಾರದಲ್ಲಿ ತೊಡಗಿತ್ತು. ಆದರೆ ಮತದಾನದ ದಿನ ಬಹುತೇಕ ಯುವ ಜನತೆ ತಮ್ಮ ಓಟಿನ ಹಕ್ಕಿಗೆ ಬದ್ಧರಾಗಲಿಲ್ಲ.

ಕಾಟಿಪಳ್ಳ:

ಬೀಡುಬಿಟ್ಟ ಕ್ಷಿಪ್ರಪಡೆ ಕಾಟಿಪಳ್ಳ 2ನೇ ಬ್ಲಾಕ್‌ನಲ್ಲಿ ಸೋಮವಾರ ತಡರಾತ್ರಿ ಎರಡು ತಂಡಗಳ ನಡುವೆ ನಡೆದ ಗಲಾಟೆ ನಡೆದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಮತಗಟ್ಟೆಯಲ್ಲಿ ಕ್ಷಿಪ್ರ ಕಾರ್ಯಪಡೆಯ 30-40 ಸಿಬ್ಬಂದಿ ಶಸ್ತ್ರಸಜ್ಜಿತರಾಗಿ ಬೀಡುಬಿಟ್ಟಿದ್ದರು. ಸೋಮವಾರ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ೨ ತಂಡಗಳ ನಡುವೆ ಚುನಾವಣೆ ವಿಚಾರವಾಗಿ ಜಗಳ ಆರಂಭವಾಗಿತ್ತು. ವಿಕೋಪಕ್ಕೆ ತೆರಳುವ ಮೊದಲು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕ್ಷಿಪ್ರ ಕಾರ್ಯಪಡೆಯೊಂದಿಗೆ ಪೊಲೀಸ್ ಪಡೆಯೂ ಕಣ್ಗಾವಲು ಇರಿಸಿತ್ತು. ಮತದಾನವು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತವಾಗಿ ನಡೆಯಿತು.

ನಾಳೆ ಮತ ಎಣಿಕೆ, ದುಗುಡದಲ್ಲಿ ಅಭ್ಯರ್ಥಿಗಳು ಮಂಗಳೂರು:

ಮತದಾನ ನಡೆದು ಮತದಾರರ ತೀರ್ಪು ಇವಿಎಂಗಳಲ್ಲಿ ಭದ್ರವಾಗಿದ್ದು, ನ.14ರಂದು ಫಲಿತಾಂಶ ಹೊರಬೀಳಲಿದೆ. ಅಲ್ಲಿಯವರೆಗೂ ಚುನಾವಣೆಗೆ ಸ್ಪರ್ಧಿಸಿರುವ ೧೮೦ ಅಭ್ಯರ್ಥಿಗಳಲ್ಲಿ ದುಗುಡ ಮನೆಮಾಡಿದೆ. ನ.14ರಂದು ಬೆಳಗ್ಗೆ ೮ರಿಂದ ನಗರದ ಪಾಂಡೇಶ್ವರ ರೊಜಾರಿಯೊ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿದ್ದು, ಸೂಕ್ತ ಸಿಬ್ಬಂದಿಗಳನ್ನೂ ಮತಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಅಭ್ಯರ್ಥಿಗಳು ಈಗ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಅನೇಕರು ತಮ್ಮ ಮತದಾನೋತ್ತರ ವಿಶ್ಲೇಷಣೆಯಲ್ಲಿ ತೊಡಗಿದ್ದು, ಸೋಲು- ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.

Follow Us:
Download App:
  • android
  • ios