ಮಂಗಳೂರು(ನ.13): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಮಂಗಳವಾರ ಶಾಂತಿಯುತವಾಗಿ ನಡೆದಿದ್ದರೂ, ನಗರವಾಸಿ ಮತದಾರರ ಪ್ರತಿಕ್ರಿಯೆ ಮಾತ್ರ ನೀರಸವಾಗಿತ್ತು.

ಪಾಲಿಕೆಯ ಒಟ್ಟು 60 ವಾರ್ಡ್‌ಗಳಲ್ಲಿ ಒಟ್ಟು ಸರಾಸರಿ ಕೇವಲ ಶೇ.59.67 ಮತದಾನವಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಮಂಗಳೂರು ನಗರದಲ್ಲಿ ಮಾತ್ರ ಪ್ರತಿ ಚುನಾವಣೆಯಲ್ಲೂ ಅತಿ ಕಡಿಮೆ ಮತದಾನವಾಗುತ್ತಿತ್ತು. ಈ ಬಾರಿಯಂತೂ ಮತದಾನ ಪ್ರಮಾಣ ತೀವ್ರವಾಗಿ ಕುಸಿದಿರುವುದು ಆತಂಕ ಮೂಡಿಸಿದೆ. ಚುನಾವಣೆ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಿದ್ದರೂ ಮತದಾನ ಮಾಡುವಲ್ಲಿ ಆಸಕ್ತಿ ತೋರಿಸಿಲ್ಲ.

ಬೆಳಗ್ಗಿನಿಂದಲೇ ಕ್ಷೀಣ ಪ್ರತಿಕ್ರಿಯೆ: ಒಟ್ಟು 3,87,517 ಮತದಾರರು ಇರುವ ಪಾಲಿಕೆ ವ್ಯಾಪ್ತಿಯಲ್ಲಿ ರಚಿಸಲಾಗಿದ್ದ ಒಟ್ಟು 448 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿತ್ತು. ಸಾಮಾನ್ಯವಾಗಿ ಬೆಳಗ್ಗಿನ ಹೊತ್ತು ಹೆಚ್ಚಿನ ಮತದಾನ ಆಗುವ ನಿರೀಕ್ಷೆ ಹುಸಿಯಾಗಿದೆ. ಬೆಳಗ್ಗೆ 9 ಗಂಟೆವರೆಗೆ ಕೇವಲ ಶೇ.10.75 ಮಂದಿ ಮಾತ್ರ ಮತದಾನ ಮಾಡಿದ್ದಾರೆ. 11 ಗಂಟೆಗೆ ಶೇ.24.50 ಮತದಾನವಾಗಿದ್ದರೆ, ಮಧ್ಯಾಹ್ನ 1 ಗಂಟೆವರೆಗೆ ಶೇ.39.50 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.

ಬಂದರು ನಗರಿ ಮಂಗಳೂರಿನಿಂದ ಹೊಸ ರೈಲು ಸಂಚಾರ : ಎಲ್ಲಿಗೆ?

3 ಗಂಟೆವರೆಗೆ ಈ ಪ್ರಮಾಣ ಶೇ.46ಕ್ಕೆ ಬಂದು ತಲುಪಿತ್ತು. 5 ಗಂಟೆಗೆ ಮತದಾನ ಅಂತ್ಯವಾಯಿತು. ಬಿಗಿ ಬಂದೋಬಸ್ತ್: ಒಟ್ಟು 448 ಮತಗಟ್ಟೆಗಳಲ್ಲಿ 75 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಶಾಂತಿಯುತ ಮತದಾನಕ್ಕಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮಂಗಳೂರು ಉತ್ತರ ಕ್ಷೇತ್ರದ ಅನೇಕ ಮತಗಟ್ಟೆಗಳಲ್ಲಿ ಪೊಲೀಸರ ಸರ್ಪಗಾವಲು ಕಂಡುಬಂತು.

ಪೊಲೀಸ್ ಸರ್ಪಗಾವಲು:

ಒಟ್ಟು 754 ಪೊಲೀಸ್, ಹೋಮ್‌ಗಾರ್ಡ್‌ಗಳು, ಕೆಎಎಸ್‌ಆರ್‌ಪಿಯ 5 ತುಕಡಿಗಳು, 10 ಪ್ಲಟೂನ್ ಸಿಎಆರ್ ಮತ್ತು 2 ಕ್ಷಿಪ್ರ ಕ್ರಿಯಾ ಪಡೆಗಳನ್ನು ಅಲ್ಲಲ್ಲಿ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದೆ ಸಂಪೂರ್ಣ ಮತದಾನ ಶಾಂತಿಯುತವಾಗಿ ಜರುಗಿತು.

ಲೀಡರ್ಸ್ ಓಟ್:

ಪಾಲಿಕೆ ವ್ಯಾಪ್ತಿಯೊಳಗೆ ಮತದಾನ ಹಕ್ಕು ಹೊಂದಿರುವ ಜನಪ್ರತಿನಿಧಿಗಳು ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಬೆಳಗ್ಗೆ 8 ಗಂಟೆಗೆ ವಾರ್ಡ್ ಸಂಖ್ಯೆ 26ರ ಉರ್ವ ಲೇಡಿಹಿಲ್ ನ ಸೈಂಟ್ ಅಲೋಶಿಯಸ್ ಇಂಗ್ಲಿಷ್ ಮಾಧ್ಯಮ ಶಾಲೆಗೆ ತೆರಳಿ ಮತದಾನ ಮಾಡಿದರೆ, ಶಾಸಕ ಭರತ್ ಶೆಟ್ಟಿ ಅವರು ಬೆಳಗ್ಗೆ 8.30ಕ್ಕೆ ಕೆಪಿಟಿ ಬಳಿಯ ಮತಗಟ್ಟೆಯಲ್ಲಿ, ಶಾಸಕ ವೇದವ್ಯಾಸ ಕಾಮತ್ ಗಾಂಧಿನಗರ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಮಾಜಿ ಶಾಸಕ ಜೆ.ಆರ್. ಲೋಬೊ ಬೆಂದೂರಿನ ಸಂತ ಸೆಬಾಸ್ಟಿಯನ್ ಶಾಲೆಯಲ್ಲಿ ಮತ ಹಾಕಿದರೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪತ್ನಿ ಸಮೇತ ಜೆಪ್ಪು ಮತಗಟ್ಟೆಯಲ್ಲಿ ಮತ ಹಾಕಿದರು.

ಕೈ - ಕಮಲ ಬಿಗ್ ಫೈಟ್: ಪಾಲಿಕೆ ಚುಕ್ಕಾಣಿ ಹಿಡಿಯೋರ‍್ಯಾರು..?