ಮಂಗಳೂರುಅ.22): ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿಯಲ್ಲಿ 60 ವಾರ್ಡ್‌ಗಳಿಗೆ ಸೂಕ್ತ ಅಭ್ಯರ್ಥಿ ಆಯ್ಕೆಯ ಕಸರತ್ತು ಕೂಡ ಆರಂಭವಾಗಿದೆ. ಆದರೆ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳಾಮಣಿಯರ ಲಾಬಿಯೇ ಜೋರಾಗಿದೆ!

ಈ ಬಾರಿ ಮಂಗಳೂರು ಪಾಲಿಕೆಗೆ ಶೇ.50 ಮಹಿಳಾ ಮೀಸಲಾತಿ ಅನ್ವಯಿಸುತ್ತದೆ. ಇದುವರೆಗೆ ಬಹುತೇಕ ಪುರುಷರೇ ಸ್ಪರ್ಧಿಸುತ್ತಿದ್ದರು. ಈಗ ಮೀಸಲಾತಿ ಬದಲಾಗಿರುವುದರಿಂದ ಮಹಿಳಾ ಆಕಾಂಕ್ಷಿಗಳು ಚುರುಕಿನಿಂದ ಓಡಾಡತೊಡಗಿದ್ದಾರೆ.

ಗೆಲ್ಲುವ ಅಭ್ಯರ್ಥಿಗೆ ಹುಡುಕಾಟ:

ಎರಡೂ ಪ್ರಮುಖ ಪಕ್ಷಗಳಲ್ಲಿ ಬಹುತೇಕ ಮಾಜಿ ಕಾರ್ಪೊರೇಟರ್‌ಗಳಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿರುವುದರಿಂದ ಉಳಿದ ಸ್ಥಾನಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ಆರಂಭವಾಗಿದೆ. ಹೀಗಾಗಿ ಟಿಕೆಟ್‌ ಆಕಾಂಕ್ಷಿಗಳು ಪಕ್ಷಗಳ ಕಚೇರಿಗಳಿಗೆ, ಜಿಲ್ಲಾ ಮುಖಂಡರ ಮನೆಗಳಿಗೆ ಎಡತಾಕುತ್ತಿದ್ದಾರೆ. ಇದರಲ್ಲಿ ಮಹಿಳೆಯರೇ ದೊಡ್ಡ ಸಂಖ್ಯೆಯಲ್ಲಿರುವುದು ವಿಶೇಷ.

ಮಾಜಿ ಕಾರ್ಪೊರೇಟರ್‌ಗಳಿಗೆ ಮಣೆ?:

ಪ್ರಮುಖ ಪಕ್ಷಗಳ ನಾಯಕರು ಸೋಮವಾರ ಮೊದಲ ಹಂತದ ಸಭೆ ನಡೆಸಿ ಅಭ್ಯರ್ಥಿ ಆಯ್ಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ಮೀಸಲಾತಿ ಬದಲಾಗಿರುವುದರಿಂದ ಈ ಹಿಂದಿನ ಕಾರ್ಪೊರೇಟರ್‌ಗಳಲ್ಲಿ ಕೆಲವರು ಬೇರೆ ವಾರ್ಡ್‌ಗೆ ಶಿಫ್ಟ್‌ ಆಗಲಿದ್ದು ಅವರಿಗೆ ಮುಖಂಡರ ಮೌಖಿಕ ಸಮ್ಮತಿಯೂ ಸಿಕ್ಕಿದೆ ಎಂದು ತಿಳಿದುಬಂದಿದೆ. ಅ.31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಅದಕ್ಕಿಂತ ನಾಲ್ಕೈದು ದಿನ ಮೊದಲೇ ಎಲ್ಲ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಮನೆ ಮನೆ ಪ್ರಚಾರ:

ಭಾನುವಾರವೇ ಚುನಾವಣೆ ಘೋಷಣೆಯಾಗಿದ್ದರೂ ಅಭ್ಯರ್ಥಿಗಳ ಆಯ್ಕೆಯಾಗದೆ ಪಕ್ಷಗಳ ಪ್ರಚಾರ ಕಾರ್ಯ ಇನ್ನೂ ಆರಂಭವಾಗಿಲ್ಲ. ‘‘ಕಾಂಗ್ರೆಸ್‌ನಲ್ಲಿ 30-35 ವಾರ್ಡ್‌ಗಳಲ್ಲಿ ಅಭ್ಯರ್ಥಿ ಆಯ್ಕೆಯ ಗೊಂದಲವಿಲ್ಲ. ಅಂತಹ ವಾರ್ಡ್‌ಗಳಲ್ಲಿ ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯ ಆರಂಭವಾಗಲಿದೆ. ಉಳಿದ ವಾರ್ಡ್‌ಗಳಲ್ಲಿ ಅರ್ಹ ಅಭ್ಯರ್ಥಿಯ ಆಯ್ಕೆ ಮಾಡಿದ ಕೂಡಲೆ ಪ್ರಚಾರವೂ ಬಿರುಸುಗೊಳ್ಳಲಿದೆ. ಮನೆ ಮನೆ ಪ್ರಚಾರಕ್ಕೆ ಮುಖ್ಯ ಆದ್ಯತೆ ನೀಡಲಿದ್ದೇವೆ. ಜತೆಗೆ ರಾಜ್ಯ ನಾಯಕರಾದ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ರಮೇಶ್‌ ಕುಮಾರ್‌ ಮತ್ತಿತರರು ಆಗಮಿಸಿ ಪ್ರಚಾರ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ’’ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್‌ ತಿಳಿಸಿದ್ದಾರೆ.

ಗಾಂಜಾ ಸೇವಿಸಿದ್ದ ಮಣಿಪಾಲದ 9 ವಿದ್ಯಾರ್ಥಿಗಳ ಬಂಧನ

ಬಿಜೆಪಿ ರೋಡ್‌ಶೋ ಅಬ್ಬರ:

‘60 ವಾರ್ಡ್‌ಗಳಲ್ಲಿ ಪಕ್ಷಕ್ಕೆ ಬದ್ಧತೆಯಿರುವ ಕಾರ್ಯಕರ್ತರನ್ನೇ ಆಯ್ಕೆ ಮಾಡಲಿದ್ದೇವೆ. ಅವರಲ್ಲಿ ಹಿರಿಯರು, ಕಿರಿಯರು ಎಲ್ಲರೂ ಇರುತ್ತಾರೆ. ಆಕಾಂಕ್ಷಿಗಳಿರಬಹುದು. ಆದರೆ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಈ ಬಾರಿ ಪಾಲಿಕೆ ಚುನಾವಣೆಗೆ ಅಬ್ಬರದ ಪ್ರಚಾರ ನಡೆಸಲಿದ್ದೇವೆ. ಮೈಕ್‌ ಕಟ್ಟಿರೋಡ್‌ ಶೋಗಳನ್ನು ಆಯೋಜಿಸುತ್ತೇವೆ. ಜತೆಗೆ ಮನೆ ಮನೆ ಪ್ರಚಾರವೂ ನಡೆಯಲಿದೆ. ಪಕ್ಷದ ನಾಯಕರು ಕೂಡ ಆಗಮಿಸಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಬಿಜೆಪಿ ಪರ ಬಾಯಿಂದ ಬಾಯಿಗೆ ಮೌಖಿಕ ಪ್ರಚಾರ ಆರಂಭವಾಗಿದೆ’’ ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು.

ಬಿಜೆಪಿಗೆ ಪ್ರತಿಷ್ಠೆ, ಕಾಂಗ್ರೆಸ್‌ಗೆ ಅಧಿಕಾರ ಉಳಿಸಿಕೊಳ್ಳುವ ತವಕ

1984ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ಬಳಿಕ ಒಂದು ಅವಧಿ ಹೊರತುಪಡಿಸಿ ಉಳಿದೆಲ್ಲ ಅವಧಿಗಳಲ್ಲಿ ಕಾಂಗ್ರೆಸ್‌ ಅಧಿಕಾರ ನಡೆಸಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಪಾಲಿಕೆಯಲ್ಲೂ ಅಧಿಕಾರಕ್ಕೇರುವ ಪ್ರತಿಷ್ಠೆಯ ಪ್ರಶ್ನೆ ಬಿಜೆಪಿಯದ್ದಾಗಿದ್ದರೆ, ಅಧಿಕಾರದ ಚುಕ್ಕಾಣಿ ಉಳಿಸಿಕೊಳ್ಳಲು ಕಾಂಗ್ರೆಸ್‌ ಭರದ ಸಿದ್ಧತೆ ನಡೆಸತೊಡಗಿದೆ. ಈ ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದರೆ ಮಂಗಳೂರು ಪಾಲಿಕೆಯಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೇರಿತ್ತು. ಅದಕ್ಕಿಂತ ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಇಲ್ಲೂ ಬಿಜೆಪಿ ಬಂದಿತ್ತು. ಈಗ ಮತ್ತೆ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದೆ.

ಕೈ- ಕಮಲ ಉಲ್ಟಾಪಲ್ಟಾ!

2007ರಲ್ಲಿ ಪ್ರಥಮವಾಗಿ ಪಾಲಿಕೆ ಅಧಿಕಾರಕ್ಕೇರಿದ ಬಿಜೆಪಿ 35 ಸ್ಥಾನ ಗೆದ್ದಿದ್ದರೆ ಕಾಂಗ್ರೆಸ್‌ ಸದಸ್ಯ ಬಲ 20ಕ್ಕೆ ಕುಸಿದಿತ್ತು. ಅದೇ 2013ರ ಚುನಾವಣೆಯಲ್ಲಿ ಈ ಅಂಕಿ ಅಂಶ ಉಲ್ಟಾಪಲ್ಟಾಆಗಿತ್ತು. ಕಾಂಗ್ರೆಸ್‌ 35 ಸ್ಥಾನ ಗೆದ್ದು ಬೀಗಿದರೆ, ಬಿಜೆಪಿ 20 ಸ್ಥಾನಕ್ಕಿಳಿದಿತ್ತು.

ಪಾಲಿಕೆಯ 35 ವಾರ್ಡ್‌ಗಳಲ್ಲಿ ಮಾಜಿ ಕಾರ್ಪೊರೇಟರ್‌ಗಳು ಉತ್ತಮ ಜನಪ್ರಿಯತೆ ಹೊಂದಿರುವುದಲ್ಲದೆ ಅತ್ಯುತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಈ ಬಾರಿ ನಮಗೆ ಗೆಲ್ಲುವುದು ಕಷ್ಟವೇ ಅಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಥಳೀಯ ಅಭಿವೃದ್ಧಿ, ಸ್ಥಳೀಯ ವಿಚಾರಗಳೇ ಮುಖ್ಯವಾಗುತ್ತವೆ. ಏನಿಲ್ಲವೆಂದರೂ 35-40 ಸೀಟು ಗೆದ್ದೇ ಗೆಲ್ತೇವೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

13 ವರ್ಷಗಳ ಹಿಂದಿನ ಕುಕ್ಕೆ ಚಿನ್ನದ ರಥ ಯೋಜನೆಗೆ ಕೂಡಿ ಬರುತ್ತಿಲ್ಲ ಕಾಲ!

ದ.ಕ. ಜಿಲ್ಲೆಯಲ್ಲಿ 2018ರ ಬಳಿಕ ವಿಧಾನಸಭೆ, ಲೋಕಸಭೆಯಿಂದ ಹಿಡಿದು ಸ್ಥಳೀಯ ಸಂಸ್ಥೆಗಳವರೆಗೆ ಎಲ್ಲ ಚುನಾವಣೆಗಳನ್ನು ಬಿಜೆಪಿ ಗೆದ್ದಿದೆ. ಈಗ ವಾತಾವರಣ ಅದಕ್ಕಿಂತಲೂ ಚೆನ್ನಾಗಿದೆ. ಜಮ್ಮು ಕಾಶ್ಮೀರದ 370ನೇ ವಿಧಿ ರದ್ದತಿಯನ್ನು ನಗರದ ಜನರು ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಇದು ವರ್ಕ್ಔಟ್‌ ಆಗಲಿದೆ. ಬಿಜೆಪಿ ಗೆಲ್ಲುವುದು ಶತಸಿದ್ಧ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ.

-ಸಂದೀಪ್‌ ವಾಗ್ಲೆ