ಮಂಗಳೂರು(ನ.09): ಕೋರ್ಟ್‌ಗೆ ಹಾಜರುಪಡಿಸಿ ಉಪಕಾರಾಗೃಹಕ್ಕೆ ಕರೆ ತರುತ್ತಿದ್ದ ಸಂದರ್ಭ ವಿಚಾರಣಾಧೀನ ಕೈದಿಯೋರ್ವ ಶುಕ್ರವಾರ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಬಂಟ್ವಾಳ ಗೂಡಿನಬಳಿಯ ನಿವಾಸಿ ಮಹಮ್ಮದ್‌ ರಫೀಕ್‌ (28) ಪರಾರಿಯಾದ ಆರೋಪಿ. ಈತನ ಮೇಲೆ ಸರ ಕಳ್ಳತನ, ದರೋಡೆ ಪ್ರಕರಣಗಳಿವೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

ಮಹಮ್ಮದ್‌ ರಫೀಕ್‌ನ ವಿರುದ್ಧದ ಪ್ರಕರಣ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಇಬ್ಬರು ಪೊಲೀಸರು ಆತನನ್ನು ಬಸ್‌ ಮೂಲಕ ಕರೆದೊಯ್ದು, ವಿಚಾರಣೆ ಮುಗಿಸಿ ಮಂಗಳೂರಿಗೆ ಬಂದಿದ್ದರು. ಪಿವಿಎಸ್‌ ವೃತ್ತದ ಬಳಿ ಬಸ್‌ನಿಂದ ಇಳಿದು ಉಪಕಾರಾಗೃಹದತ್ತ ನಡೆದುಕೊಂಡು ಬರುತ್ತಿದ್ದಾಗ ಇಬ್ರೋಸ್‌ ಕಾಂಪ್ಲೆಕ್ಸ್‌ ಎದುರು ಪೊಲೀಸರನ್ನು ತಳ್ಳಿ ಆರೋಪಿ ಪರಾರಿಯಾಗಿದ್ದಾನೆ.

ಪೂರ್ವ ಯೋಜಿತ ಕೃತ್ಯ:

ಮಹಮ್ಮದ್‌ ರಫೀಕ್‌ ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಮೊದಲೇ ನಿರ್ಧರಿಸಿದ್ದ. ಇದಕ್ಕಾಗಿ ಬೈಕ್‌ ವ್ಯವಸ್ಥೆ ಮಾಡಿಕೊಂಡಿದ್ದ. ಪೊಲೀಸರೊಂದಿಗೆ ಉಪಕಾರಾಗೃಹದ ಗೇಟ್‌ ಎದುರು ತಲುಪುತ್ತಿದ್ದಂತೆ ಎದುರಿನಿಂದ ಯುವಕನೋರ್ವ ಬೈಕ್‌ ಚಲಾಯಿಸಿಕೊಂಡು ಬಂದಿದ್ದನು. ರಫೀಕ್‌ನ ಕೈಯಲ್ಲಿ ಕೋಳವಿದ್ದರೂ ಜೊತೆಗಿದ್ದ ಪೊಲೀಸರು ಹಿಡಿದುಕೊಳ್ಳದೆ ನಿರ್ಲಕ್ಷ್ಯ ತೋರಿಸಿದ್ದರು.

ಕೇಂದ್ರ ಮಾಜಿ ಸಚಿವ, ಹಿರಿಯ 'ಕೈ' ಮುಖಂಡನ ಕಟ್ಟಾ ಬೆಂಬಲಿಗರು ಬಿಜೆಪಿಗೆ

ಕಾರಾಗೃಹ ಸಮೀಪಿಸಿದ ಕಾರಣ ಆತ ಇನ್ನೆಲ್ಲಿಗೂ ಓಡಿ ಹೋಗಲಾರನೆಂದು ಪೊಲೀಸರು ಕೋಳ ಹಿಡಿದುಕೊಂಡಿರಲಿಲ್ಲ. ಈ ಸಮಯವನ್ನು ಸದುಪಯೋಗಪಡಿಸಿಕೊಂಡ ರಫೀಕ್‌ ತಕ್ಷಣ ಎದುರಿನಿಂದ ಬಂದ ಬೈಕ್‌ನಲ್ಲಿ ಕುಳಿತು ಪರಾರಿಯಾಗಿದ್ದಾನೆ. ಇದರಿಂದ ಗಾಬರಿಗೊಂಡ ಪೊಲೀಸರು ಆತನ ಹಿಂದಿನಿಂದಲೇ ಹಿಂಬಾಸಿದ್ದಾರೆ. ಪಿವಿಎಸ್‌ ವೃತ್ತದಲ್ಲಿ ವಾಹನ ದಟ್ಟಣೆ ಇದ್ದುದರಿಂದ ಸಿಗ್ನಲ್‌ನಲ್ಲಿ ನಿಂತಿದ್ದ ಬೈಕೊಂದರಲ್ಲಿ ಓರ್ವ ಪೊಲೀಸ್‌ ಬಂಟ್ಸ್‌ ಹಾಸ್ಟೆಲ್‌ ಕಡೆಗೆ ಬೆನ್ನಟ್ಟಿದ್ದಾರೆ. ಆದರೆ ಆರೋಪಿ ಪತ್ತೆಯಾಗಿಲ್ಲ. ಈತನ ಪತ್ತೆಗೆ ಎಲ್ಲೆಡೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.