ಮಂಗಳೂರು(ಅ.23): ನೀರುಮಾರ್ಗದ ಪಡು ಬಿತ್ತುಪಾದೆ ಸಮೀಪ ರಿಕ್ಷಾ ಚಾಲಕನ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಭತ್ತು ಆರೋಪಿಗಳನ್ನು ಮಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಶ್ರೀರಾಮ ಸೇನೆ ಮುಖಂಡ ಮಲ್ಲೂರು ನಿವಾಸಿ ಜೀವನ್‌ ಪೂಜಾರಿ (35), ಅರ್ಕುಳ ಕಂಪ ನಿವಾಸಿ ನಿತಿನ್‌ ಪೂಜಾರಿ (24), ಅಡ್ಯಾರ್‌ಕಟ್ಟೆಕೆಮಂಜೂರು ನಿವಾಸಿ ಪ್ರಾಣೇಶ್‌ (23), ಪಡು ಕಾಪೆಟ್ಟು ನಿವಾಸಿ ಗಣೇಶ್‌ (21), ಕಾಪೆಟ್ಟು ಸೈಟ್‌ ನಿವಾಸಿ ಗಣೇಶ್‌ (21), ಕಾಪೆಟ್ಟು ಸೈಟ್‌ ನಿವಾಸಿ ಶಿವಾನಂದ ಆಚಾರಿ (28), ಅಡ್ಯಾರ್‌ಪದವು ನಿವಾಸಿ ರಾಘವೇಂದ್ರ (24), ಕೋನಿಮಾರ್‌ ಮಡಿವಾಳಕೋಡಿ ನಿವಾಸಿ ಸಂತೋಷ್‌ (29), ಕಂಕನಾಡಿ ನಿವಾಸಿ ಧನರಾಜ್‌ (24), ಎಕ್ಕೂರು ನಿವಾಸಿ ​ನೀರಜ್‌ (24) ಬಂ​ತ ಆರೋಪಿಗಳು.

17ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ ಆರೋಪ ಸಾಬೀತು, 24ರಂದು ಶಿಕ್ಷೆ ಪ್ರಕಟ ಸಾಧ್ಯತೆ..

ಗಾಯಾಳು ರಿಕ್ಷಾ ಚಾಲಕ ಕಾಪೆಟ್ಟು ಗುತ್ತಿಗೆ ನಿವಾಸಿ ಸಂತೋಷ್‌ (35) ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ.

ಅ.17ರಂದು ಸಂಕ್ರಮಣವಾದ ಕಾರಣ ಸಂತೋಷ್‌ ಅವರು ಬಿತ್ತುಪಾದೆಯ ಅಂಗಡಿಯೊಂದರಲ್ಲಿ ಎಳ್ಳೆಣ್ಣೆ ಖರೀದಿಸಿ ತನ್ನ ಮನೆ ಗುತ್ತಿಗೆಯತ್ತ ರಿಕ್ಷಾದಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಕಪ್ಪು ಬಣ್ಣದ ಆಕ್ಟೀವಾದಲ್ಲಿ ಬಂದ ಇಬ್ಬರು ಯುವಕರು ಸಂತೋಷ್‌ನನ್ನು ಅಡ್ಡಗಟ್ಟಿತಗಾದೆ ತೆಗೆದಿದ್ದಾರೆ.

ತಲವಾರಿನಿಂದ ಹಲ್ಲೆ:

ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ತಾವು ತಂದಿದ್ದ ತಲವಾರಿನಿಂದ ಸಂತೋಷ್‌ಗೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂತೋಷ್‌ ಅವರ ಎರಡು ಕೈ ಹಾಗೂ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದೆ. ಘಟನೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು ಯುವಕ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದರು. ಗಾಯಗೊಂಡ ರಿಕ್ಷಾ ಚಾಲಕನನ್ನು ಸ್ಥಳೀಯರು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಪ್ರಕರಣ ಬೇಧಿಸಿದ ಮಂಗಳೂರು ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದರೋಡೆಗೂ ಸಂಚು ಮಾಡಿದ್ರು:

ಈ ಬಂಧಿತ ಆರೋಪಿಗಳ ವಿರುದ್ಧ ನಗರದ ಹೊರವಲಯದ ಕೆಲರಾಯಿ-ಕಾಪೆಟ್ಟು ರಸ್ತೆಯ ಸ್ಮಶಾನವೊಂದರ ಬಳಿ ಕುಳಿತು ವ್ಯಕ್ತಿಯೊಬ್ಬರ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಇನ್ನೊಂದು ಆರೋಪ ದಾಖಲಾಗಿದೆ. ಬಂಧಿತರೆಲ್ಲ ಶ್ರೀರಾಮಸೇನೆ ಸಂಘಟನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀರಾಮ ಸೇನೆಯ ಮಂಗಳೂರು-ಉಡುಪಿ ವಿಭಾಗ ಅಧ್ಯಕ್ಷ ಜೀವನ್‌ ಮಲ್ಲೂರು ಎಂಬಾತನ ನೇತೃತ್ವದಲ್ಲಿ ಆರೋಪಿಗಳು ಅ.21ರಂದು ನಸುಕಿನ ಜಾವ ಕೆಲರಾಯಿ ಕಾಪೆಟ್ಟು ರಸ್ತೆಯ ಸ್ಮಶಾನದ ಬಳಿ ಒಟ್ಟು ಸೇರಿ ಯಾರನ್ನೋ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಪೊಲೀಸರು ರೌಡಿ ನಿಗ್ರಹದಳದ ಅಧಿಕಾರಿಗಳ ಜೊತೆಗೂಡಿ ದಾಳಿ ನಡೆಸಿದ್ದರು.

ಬಂಟ್ವಾಳದ ಹರೀಶ್‌ ಪೂಜಾರಿ ಕೊಲೆ ಸಾಕ್ಷಿಗೆ ಜೀವ ಬೆದರಿಕೆ..!

ಈ ಸಂದರ್ಭ ಯುವಕರು ಸ್ಮಶಾನದ ಬಳಿ ಸುತ್ತುವರಿದು ಮಾತನಾಡುತ್ತಿದ್ದು, ಪೊಲೀಸರನ್ನು ನೋಡಿ ಪರಾರಿಗೆ ಯತ್ನಿಸಿದ್ದರು. ಕೂಡಲೇ ಆರೋಪಿಗಳನ್ನು ಬೆನ್ನಟ್ಟಿಹಿಡಿದ ಪೊಲೀಸರು ಅವರಿಂದ ಕಬ್ಬಿಣ ರಾಡ್‌, ಮರದ ಸೋಂಟೆ ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ ಒಬ್ಬ ಆರೋಪಿ ಮಾತ್ರ ತಪ್ಪಿಸಿಕೊಂಡು ಪರಾರಿಯಾಗಿದ್ದು ಆತನ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಶ್ರೀಮಂತರ ದರೋಡೆಗೆ ಸಂಚು:

ಆರೋಪಿಗಳು ಬೊಂಡಂತಿಲ ಗ್ರಾಮದ ಮೆಲ್ವಿನ್‌ ಡಿಸೋಜಾ ಅಥವಾ ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡುವ ಬಗ್ಗೆ ಒಳಸಂಚು ರೂಪಿಸಿದ್ದರು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ಕೊಲೆಯತ್ನ ಪ್ರಕರಣದ ಖರ್ಚು-ವೆಚ್ಚಗಳಿಗೆ ಹಣದ ಅವಶ್ಯಕತೆ ಇದ್ದುದರಿಂದ ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ದರೋಡೆಗೆ ಯತ್ನಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಮಂಡ್ಯ: ಒಂದು ಲವ್ ಸ್ಟೋರಿ.. ಮೂರು ಸಾವು