ಮಂಗಳೂರು(ಅ.23): ಯುವತಿಯರ ಸರಣಿ ಹಂತಕ ಸೈನೈಡ್‌ ಮೋಹನ್‌ನ 17ನೇ ಪ್ರಕರಣದ ಆರೋಪವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣವನ್ನು ಅ.24ರಂದು ಪ್ರಕಟವಾಗುವ ಸಾಧ್ಯತೆ ಇದೆ.

ಅಪರಾಧಿ ಮೋಹನ್‌ ಮೇಲೆ ಐಪಿಸಿ ಸೆಕ್ಷನ್‌ 366 (ಅತ್ಯಾಚಾರ), ಸೆಕ್ಷನ್‌ 302 (ಕೊಲೆ), ಸೆಕ್ಷನ್‌ 328 (ವಿಷ ಉಣಿಸಿದ್ದು), ಸೆಕ್ಷನ್‌ 392 (ಚಿನ್ನಾಭರಣ ಸುಲಿಗೆ), ಸೆಕ್ಷನ್‌ 394 (ವಿಷ ಉಣಿಸಿ ಸುಲಿಗೆ), ಸೆಕ್ಷನ್‌ 417 (ವಂಚನೆ), ಸೆಕ್ಷನ್‌ 207 (ಸಾಕ್ಷ್ಯನಾಶ)ದ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮೋಹನ್‌ ವಿರುದ್ಧ ದಾಖಲಾಗಿದ್ದ ಎಲ್ಲ ಆರೋಪ ಈ ಪ್ರಕರಣದಲ್ಲಿ ಸಾಬೀತಾಗಿದೆ.

ಆನಂದ ಎಂದು ಪರಿಚಯಿಸಿಕೊಂಡಿದ್ದ ಮೋಹನ್:

ಆರೋಪಿ ಮೋಹನ್‌ 2005 ಅಕ್ಟೋಬರ್‌ 21ರಂದು ಬಿ.ಸಿ.ರೋಡ್‌ ಬಸ್‌ ತಂಗುದಾಣದಲ್ಲಿ ಬಂಟ್ವಾಳ ತಾಲೂಕು ಬಾಳೆಪುಣಿಯ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಯುವತಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅಂಗನವಾಡಿ ಸಭೆ ಹಾಗೂ ಸಂಬಳಕ್ಕಾಗಿ ಬಿ.ಸಿ.ರೋಡ್‌ಗೆ ಬಂದಿದ್ದಾಗ ಆಕೆಯ ಬಳಿ ತನ್ನನ್ನು ಆನಂದ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮದೇ ಜಾತಿಯವನಾಗಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ.

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೇ ಬಿದ್ದಿದ್ದಳು:

ಆಕೆಯೊಂದಿಗೆ ಎಲ್ಲ ಚಿನ್ನಾಭರಣ ಧರಿಸಿ ಬರಲು ಹೇಳಿದ್ದ. ಅದರಂತೆ 2005 ಅ.21ರಂದು ಸಹೋದ್ಯೋಗಿಗಳೊಂದಿಗೆ ಶೃಂಗೇರಿಗೆ ಪಿಕ್‌ನಿಕ್‌ಗೆ ಹೋಗುವುದಾಗಿ ತಿಳಿಸಿ ಬೆಳಗ್ಗೆ ಬಿ.ಸಿ.ರೋಡ್‌ಗೆ ಬಂದ ಆಕೆಯನ್ನು ಬಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದ. ಅವರಿಬ್ಬರು ಬೆಂಗಳೂರಿನ ಲಾಡ್ಜ್‌ನಲ್ಲಿ ಕೊಠಡಿ ಪಡೆದು ತಂಗಿದ್ದರು. ರಾತ್ರಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ. ಮರುದಿನ ಬೆಳಗ್ಗೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಆಕೆಗೆ ಗರ್ಭ ನಿರೋಧಕ ಮಾತ್ರೆ ಎಂದು ತಿಳಿಸಿ ಸೈನೈಡ್‌ ನೀಡಿದ್ದ.

ಮಂಗಳೂರು: ಎಲ್ಲ ಅಂಚೆ ಕಚೇರಿ ವಿವರ ಗೂಗಲ್ ಮ್ಯಾಪ್‌ನಲ್ಲಿ..!

ಅದನ್ನು ಸೇವಿಸಿದ್ದ ಆಕೆ ಪ್ಲ್ಯಾಟ್‌ ನಂ.1ರಲ್ಲಿ ಬಿದ್ದಿದ್ದಳು. ತಕ್ಷಣ ಸ್ಥಳೀಯರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದರು. ಅ.27ರಂದು ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರು ಯಾರೂ ಬಾರದ ಕಾರಣ ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿತ್ತು. ಅಲ್ಲಿನ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲುಗೊಂಡಿತ್ತು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆ ಸೈನೈಡ್‌ ಸೇವಿಸಿರುವುದು ದೃಢಪಟ್ಟಿತ್ತು.

ಯುವತಿ ಬಸ್‌ ನಿಲ್ದಾಣದಲ್ಲಿ ಬಿದ್ದ ಬಳಿಕ ಮೋಹನ್‌ ತಾನು ತಂಗಿದ್ದ ರೂಮುಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಆ ಚಿನ್ನಾಭರಣವನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಿದ್ದ.

ಮಂಗಳೂರು: 16ನೇ ಪ್ರಕರಣದಲ್ಲಿ ಸೈನೈಡ್‌ ಮೋಹನ್‌ಗೆ ಜೀವಾವಧಿ ಶಿಕ್ಷೆ

ಯುವತಿಯ ಮನೆಯವರು ಎಲ್ಲ ಕಡೆ ಹುಡುಕಾಡಿದ್ದರು. ಅಂಗನವಾಡಿ ಸಮಿತಿಯ ಅಧ್ಯಕ್ಷರು ಈಕೆ ವ್ಯಕ್ತಿಯೋರ್ವನ ಜೊತೆ ಬಸ್‌ಗೆ ಹತ್ತುವುದನ್ನು ನೋಡಿದ್ದರು. ಅ.25ರಂದು ಮನೆಯವರು ಕೊಣಾಜೆ ಪೊಲೀಸ್‌ ಠಾಣೆಗೆ ನಾಪತ್ತೆ ದೂರು ನೀಡಿದ್ದರು.

2009 ಸೆ.21ರಂದು ಆರೋಪಿಯ ಬಂಧನವಾಗಿ ವಿಚಾರಣೆ ನಡೆಸುತ್ತಿದ್ದಾಗ ಬಾಳೆಪುಣಿಯ ಯುವತಿಯನ್ನು ಬೆಂಗಳೂರಿನಲ್ಲಿ ಸೈನೈಡ್‌ ನೀಡಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಕೊಣಾಜೆ ಅಂದಿನ ಇನ್‌ಸ್ಪೆಕ್ಟರ್‌ ಲಿಂಗಪ್ಪ ಅವರು ಪ್ರಥಮಿಕ ಹಂತದಲ್ಲಿ ತನಿಖೆ ನಡೆಸಿದ್ದರು. ಆ ಬಳಿಕ ಸಿಒಡಿ ಇನ್‌ಸ್ಪೆಕ್ಟರ್‌ ವಜೀರ್‌ ಸಾಬ್‌ ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಯಿದುನ್ನೀಸಾ ಅವರು, 41 ಸಾಕ್ಷಿ ವಿಚಾರಣೆ ನಡೆಸಿ, 67 ದಾಖಲೆ ಪರಿಗಣಿಸಿ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದ್ದಾರೆ. ಸರ್ಕಾರದ ಪರವಾಗಿ ಜುಡಿತ್‌ ಒ.ಎಂ. ಕ್ರಾಸ್ತ ವಾದಿಸಿದ್ದರು.

ಇದುವರೆಗೆ 16 ಪ್ರಕರಣದಲ್ಲಿ ಶಿಕ್ಷೆ ಪ್ರಕಟ

ಸೈನೈಡ್‌ ಮೋಹನ್‌ಗೆ ಇದುವರೆಗೆ 20 ಪ್ರಕರಣಗಳ ಪೈಕಿ ಒಟ್ಟು 16 ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ. ಇದರಲ್ಲಿ 3 ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇದನ್ನು ಸೈನೈಡ್‌ ಮೋಹನ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದನು. ಬಳಿಕ ಈ ಪೈಕಿ ಒಂದು ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ನೀಡಿದ ಮರಣದಂಡನೆ ತೀರ್ಪನ್ನು ಎತ್ತಿ ಹಿಡಿಯಲಾಗಿತ್ತು. ಇನ್ನೊಂದು ಪ್ರಕರಣದ ಶಿಕ್ಷೆ ಪ್ರಮಾಣವನ್ನು ಜೀವಿತಾವಧಿ ವರೆಗೆ ವಿಧಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಐದು ವರ್ಷಗಳಿಗೆ ಇಳಿಕೆ ಮಾಡಲಾಗಿತ್ತು. ಉಳಿದಂತೆ 13 ಪ್ರಕರಣಗಳಲ್ಲಿ ವಿವಿಧ ಪ್ರಮಾಣದ ಶಿಕ್ಷೆಯನ್ನು ನೀಡಲಾಗಿದೆ.