ಮಂಗಳೂರು(ಅ.23): ಉದ್ದೇಶಿಸಿತ ಮೈಸೂರು-ಕುಶಾಲನಗರ ರೈಲು ಮಾರ್ಗದ ನಿರ್ಮಾಣಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯೂ ಸೇರಿದಂತೆ ಸಂಬಂಧಪಟ್ಟಎಲ್ಲಾ ಇಲಾಖೆಗಳಿಂದ ಅನುಮತಿ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಹಾಗೂ ರೈಲ್ವೇ ಇಲಾಖೆಗೆ ಹೈಕೋರ್ಟ್‌ ಮಂಗಳವಾರ ತಾಕೀತು ಮಾಡಿದೆ.

ಯೋಜನೆ ಪ್ರಶ್ನಿಸಿ ಕೊಡಗು ಜಿಲ್ಲೆ ಕರ್ನಲ್‌ ಸಿ.ಪಿ.ಮುತ್ತಣ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

17ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ ಆರೋಪ ಸಾಬೀತು, 24ರಂದು ಶಿಕ್ಷೆ ಪ್ರಕಟ ಸಾಧ್ಯತೆ

ಅರ್ಜಿದಾರರ ಪರ ವಕೀಲ ಬಿ.ಆರ್‌.ದೀಪಕ್‌ ವಾದ ಮಂಡಿಸಿ, ಮೈಸೂರು-ಕುಶಾಲನಗರ ರೈಲು ಮಾರ್ಗದ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಈ ಮಾರ್ಗದಲ್ಲಿ ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳ ಸಂರಕ್ಷಿತ ವಲಯ ಬರಲಿದೆ. ಕುಶಾಲನಗರದಲ್ಲಿ ಆನೆ ರಹದಾರಿ ಇದೆ ಎಂದು ವಾದಿಸಿದ್ದಾರೆ.

ಅಲ್ಲದೆ, ಉದ್ದೇಶಿತ ರೈಲು ಮಾರ್ಗ ನಿರ್ಮಾಣದಿಂದ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗಲಿದೆ. ಪರಿಸರ ಹಾಗೂ ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಆನೆ ರಹದಾರಿಯಲ್ಲಿ ಅಭಿವೃದ್ಧಿ ಚಟುವಟಿಕೆ ನಡೆಸಬೇಕಾದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಮತ್ತು ಪರಿಸರ ಇಲಾಖೆ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ಪಡೆಯುವುದು ಕಡ್ಡಾಯ. ಯೋಜನೆಗೆ ಸಂಬಂಧಪಟ್ಟಇಲಾಖೆಯಿಂದ ಅನುಮತಿ ಪಡೆದಿಲ್ಲ. ಹೀಗಾಗಿ, ಯೋಜನೆಯನ್ನು ಜಾರಿ ಮಾಡದಂತೆ ಕೇಂದ್ರ ಸರ್ಕಾರ ಮತ್ತು ರೈಲ್ವೇ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ಮಂಗಳೂರು: ಎಲ್ಲ ಅಂಚೆ ಕಚೇರಿ ವಿವರ ಗೂಗಲ್ ಮ್ಯಾಪ್‌ನಲ್ಲಿ..!

ಈ ವಾದ ಪರಿಗಣಿಸಿದ ನ್ಯಾಯಪೀಠ ಯೋಜನೆ ಜಾರಿಗೆ ಸಂಬಂಧÜಪಟ್ಟಎಲ್ಲಾ ಇಲಾಖೆಗಳಿಂದ ಅನುಮತಿ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಮತ್ತು ರೈಲ್ವೇ ಇಲಾಖೆಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಸುಮಾರು 87 ಕಿ.ಮೀ ಉದ್ದದ ಮೈಸೂರು- ಕುಶಾಲನಗರ ರೈಲು ಮಾರ್ಗದ ನಿರ್ಮಾಣ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಒಟ್ಟು .1,860 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರವು 2019ರ ಫೆಬ್ರವರಿ 28ರಂದು ಒಪ್ಪಿಗೆ ನೀಡಿತ್ತು. ಕೇಂದ್ರ ಹಾಗೂ ರಾಜ್ಯ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು.

ಕಂಬಳದ ವಿರುದ್ಧ ಮತ್ತೆ ಧ್ವನಿ ಎತ್ತಿದ ಪೆಟಾ..!

ಕೊಡಗಿನಲ್ಲಿ ರೈಲು ಮಾರ್ಗ ನಿರ್ಮಿಸುವುದರಿಂದ ಪರಿಸರಕ್ಕೆ ಧಕ್ಕೆ ಉಂಟಾಗಲಿದೆ ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಯೋಜನೆ ಸಾಕಷ್ಟುವಿವಾದಕ್ಕೆ ಗುರಿಯಾಗಿತ್ತು. ಯೋಜನೆ ಪ್ರಶ್ನಿಸಿ ಕರ್ನಲ್‌ ಮುತ್ತಣ್ಣ, 2019ರ ಮಾ.23ರಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.