Asianet Suvarna News Asianet Suvarna News

ಈರುಳ್ಳಿ: ಗದಗದಲ್ಲಿ ಕ್ವಿಂ.ಗೆ 200, ಮಂಗಳೂರಲ್ಲಿ ಕೆಜಿಗೆ 70..!

ಗದಗ ಜಿಲ್ಲೆಯ ರೈತರು ಬೆಳೆದ ಈರುಳ್ಳಿಯನ್ನು ಕೇಳುವವರೇ ಇಲ್ಲವಾದರೆ, ಇತ್ತ ಮಂಗಳೂರಿನಲ್ಲಿ ಈರುಳ್ಳಿ ಬೆಲೆ ಡೀಸೆಲ್ ಬೆಲೆಯನ್ನೂ ದಾಟಿ ಹೋಗುತ್ತಿದೆ! ಅಲ್ಲಿ ರೈತರ ಈರುಳ್ಳಿ ಖರೀದಿ ದರ ಕ್ವಿಂಟಾಲ್‌ಗೆ ಕೇವಲ 200 ರುಪಾಯಿಯಾದರೆ, ಇಲ್ಲಿನ ಮಾರುಕಟ್ಟೆಯಲ್ಲಿ ಸಗಟು ಕೆಜಿಗೆ 66 ರು. ಚಿಲ್ಲರೆಗೆ 70 ರುಪಾಯಿ ಧಾರಣೆ ಇದೆ.

onion rate in mangalore increases
Author
Bangalore, First Published Nov 11, 2019, 12:07 PM IST

ಮಂಗಳೂರು(ನ.11): ಗದಗ ಜಿಲ್ಲೆಯ ರೈತರು ಬೆಳೆದ ಈರುಳ್ಳಿಯನ್ನು ಕೇಳುವವರೇ ಇಲ್ಲವಾದರೆ, ಇತ್ತ ಮಂಗಳೂರಿನಲ್ಲಿ ಈರುಳ್ಳಿ ಬೆಲೆ ಡೀಸೆಲ್ ಬೆಲೆಯನ್ನೂ ದಾಟಿ ಹೋಗುತ್ತಿದೆ! ಅಲ್ಲಿ ರೈತರ ಈರುಳ್ಳಿ ಖರೀದಿ ದರ ಕ್ವಿಂಟಾಲ್‌ಗೆ ಕೇವಲ 200 ರುಪಾಯಿಯಾದರೆ, ಇಲ್ಲಿನ ಮಾರುಕಟ್ಟೆಯಲ್ಲಿ ಸಗಟು ಕೆಜಿಗೆ 66 ರು. ಚಿಲ್ಲರೆಗೆ 70 ರುಪಾಯಿ ಧಾರಣೆ ಇದೆ.

ಗದಗ ಎಪಿಎಂಸಿಗೆ ಒಂದೇ ದಿನ 700 ಟನ್‌ಗೂ ಹೆಚ್ಚು ಈರುಳ್ಳಿ ರಾಶಿ ಬಿದ್ದು ಕೊಳ್ಳುವವರೇ ಇಲ್ಲವಾಗಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಮಂಗಳೂರಿಗೆ ಮಾತ್ರ ಬೇಡಿಕೆಗೆ ತಕ್ಕಷ್ಟು ಈರುಳ್ಳಿಯೇ ಬರುತ್ತಿಲ್ಲ. ದರ ಭಾರೀ ಏರಿಕೆಯಾಗಿರುವುದರಿಂದ ಈರುಳ್ಳಿ ಬೆಲೆ ಕೇಳಿಯೇ ಗ್ರಾಹಕರು ತೃಪ್ತರಾಗುತ್ತಿದ್ದಾರೆ.

ಕುತ್ತಾರು ಕೊರಗಜ್ಜನ ಕಟ್ಟೆಗೆ ಸೇವೆ ಸಲ್ಲಿಸಿದ ನಟ ಆದಿತ್ಯ

ಮಧ್ಯವರ್ತಿಗಳ ಹಾವಳಿ: ರಾಜ್ಯದೊಳಗೆ ಒಂದು ಜಿಲ್ಲೆಯಿಂದ ಇನ್ನೊಂದಕ್ಕೆ ಈ ಅಜ-ಗಜಾಂತರ ದರ ವ್ಯತ್ಯಾಸ ಆಗಲು ಮಧ್ಯವರ್ತಿಗಳ ಹಾವಳಿಯೇ ಕಾರಣ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಹೆಚ್ಚು ದಿನ ಕೂಡಿಟ್ಟರೂ ಹಾಳಾಗದ ಹಳೆ ಈರುಳ್ಳಿಯನ್ನು ಅಧಿಕ ಲಾಭದಾಸೆಯಿಂದ ಮಾರುಕಟ್ಟೆಗೆ ಬಿಡದೆ ಅಭಾವ ಸೃಷ್ಟಿಗೆ ಕಾರಣರಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಮಳೆ ಹೊಡೆತ: ರಾಜ್ಯದಲ್ಲಿ ಭಾರೀ ಮಳೆ ಬಂದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಪ್ರವಾಹ ಪೀಡಿತವಾಗಿರುವುದೂ ದರ ಏರಿಕೆಗೆ ಕಾರಣ ಎಂದು ಮಂಗಳೂರು ಕೇಂದ್ರ ಮಾರುಕಟ್ಟೆಯ ಸಗಟು ತರಕಾರಿ ವ್ಯಾಪಾರಿ ಅಬ್ದುಲ್ ಲತೀಫ್ ಅಭಿಪ್ರಾಯಪಡುತ್ತಾರೆ. ಮಳೆಗಾಲದ ಈ ಈರುಳ್ಳಿ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ. ಹೆಚ್ಚೆಂದರೆ 2-3 ದಿನ ಇಡಬಹುದು. ಇದಕ್ಕೂ ಚಿಲ್ಲರೆ ಅಂಗಡಿಗಳಲ್ಲಿ 50 ರು.ಗೂ ಅಧಿಕ ದರ ಇದೆ. ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಬಾರದಿರುವುದೇ ಒಟ್ಟಾರೆ ದರ ಏರಿಕೆಗೆ ಕಾರಣ ಎನ್ನುತ್ತಾರವರು.

50 ವರ್ಷದ ಬಳಿಕ ತೆರಳಿ ದತ್ತನ ಆಶೀರ್ವಾದ ಪಡೆದ ದೇವೇಗೌಡರು

ಒಂದು ತಿಂಗಳಿಂದ ಇದೇ ರೇಟು: ಮಂಗಳೂರಿನಲ್ಲಿ ಕಳೆದೊಂದು ತಿಂಗಳಿನಿಂದಲೂ ಈರುಳ್ಳಿ ದರ 50 ರು. ಆಸುಪಾಸಿನಲ್ಲೇ ಇದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದೆ ಇದ್ದರೆ ಇನ್ನೂ ಕೆಲವು ದಿನಗಳಕಾಲ ಇದೇ ದರ ಮುಂದುವರಿಯುವ ಸಾಧ್ಯತೆಗಳಿವೆ.

ಈರುಳ್ಳಿಯತ್ತ ಕಣ್ಣೂ ಹಾಕಲ್ಲ!: ‘‘ರುಚಿ ಅನಿವಾರ್ಯತೆಯ ಗ್ರಾಹಕರು ಮಾತ್ರ ಸದ್ಯಕ್ಕೆ ಈರುಳ್ಳಿ ಕೊಳ್ಳುತ್ತಿದ್ದಾರೆ. ಅದರ ದರ ಕೇಳಿಯೇ ನನ್ನ ಹೊಟ್ಟೆ ತುಂಬಿದೆ. ಬೆಲೆ ಕಡಿಮೆ ಆಗುವವರೆಗೂ ಈರುಳ್ಳಿ ಕಡೆ ಕಣ್ಣೂ ಹಾಕಲ್ಲ. ಅದಿಲ್ಲದೆ ನಾವೇನೂ ಸಾಯುವುದಿಲ್ಲ’’ ಎಂದು ದರ ಏರಿಕೆಯಿಂದ ಕ್ರೋಧಗೊಂಡ ಗ್ರಾಹಕರೊಬ್ಬರು ಮಾರುಕಟ್ಟೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತರ ತರಕಾರಿಗಳೂ ಕೈಗೆಟುಕಲ್ಲ:

ಈರುಳ್ಳಿ, ಸೊಪ್ಪು ಹೋಗಲಿ, ತರಕಾರಿಯಾದರೂ ಕಡಿಮೆಗೆ ಸಿಗುತ್ತದೆಯೇ ಎಂದರೆ ಅದೂ ಇಲ್ಲ. ಅತಿ ಅಗ್ಗದ ತರಕಾರಿ ಎಂದರೆ ಕುಂಬಳಕಾಯಿ ಮತ್ತು ಸೌತೆ ಮಾತ್ರ. ಇದು ಪೌಷ್ಟಿಕ ಆಹಾರವಾದರೂ ನಗರವಾಸಿ ಗ್ರಾಹಕರಿಗೆ ಮಾತ್ರ ಒಗ್ಗಲ್ಲ. ಹಾಗಾಗಿ ರೇಟ್ ಕಮ್ಮಿ. ಮಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಗುರುವಾರ ತರಕಾರಿ ಧಾರಣೆ ಹೀಗಿತ್ತು- ಕುಂಬಳಕಾಯಿ, ಸೌತೆ- 20 ರು., ಹಾಗಲಕಾಯಿ- 40 ರು., ಬೀನ್ಸ್- 45 ರು., ಬೆಂಡೆ- 45 ರು., ಹೀರೆಕಾಯಿ- 60 ರು., ಸಿಹಿಕುಂಬಳ- 24 ರು., ಮುಳ್ಳುಸೌತೆ- 24 ರು., ಕ್ಯಾಬೇಜ್- 20 ರು., ಆಲೂಗೆಡ್ಡೆ- 28 ರು., ಹಸಿಮೆಣಸು- 40 ರು., ದೊಣ್ಣೆಮೆಣಸು- 50 ರು., ಟೊಮೆಟೊ- 32 ರು., ಕ್ಯಾರೆಟ್- 60 ರು.

ಕೊತ್ತಂಬರಿ ಸೊಪ್ಪು ದರ ಇಳಿದೇ ಇಲ್ಲ!

ಕಳೆದೆರಡು ತಿಂಗಳ ಹಿಂದೆ ಕೊತ್ತಂಬರಿ ಸೊಪ್ಪು ದರ ಭಾರೀ ಏರಿಕೆಯಾಗಿದ್ದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಹೊಸ ಸುದ್ದಿ ಏನು ಎಂದರೆ, ಆ ಬೆಲೆ ಇನ್ನೂ ಇಳಿದೇ ಇಲ್ಲ! ಏನಿಲ್ಲವೆಂದರೂ 120- 160 ರು.ಗೆ ಮಾರಾಟವಾಗುತ್ತಿದೆ. ಇನ್ನು ಮೆಂತೆ ಸೊಪ್ಪಂತೂ ಮಾರುಕಟ್ಟೆಗೆ ಆಗೊಮ್ಮೆ ಈಗೊಮ್ಮೆ ಮಾತ್ರ ಬರುತ್ತಿದೆ- ಬೇಕು ಎಂದಾಗ ಸಿಗಲ್ಲ. ಒಂದೊಮ್ಮೆ ಬಂದರೂ ದರ ಮಾತ್ರ 160 ರು.ಗಿಂತ ಕಮ್ಮಿಯಿಲ್ಲ

-ಸಂದೀಪ್ ವಾಗ್ಲೆ

Follow Us:
Download App:
  • android
  • ios