ಶಿವಮೊಗ್ಗ(ಆ.29): ಮಾಹಿತಿ ಹಕ್ಕು ಕಾಯ್ದೆಯಡಿ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗೆ ಮಾಹಿತಿ ಹಕ್ಕು ಆಯೋಗ 15 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ ಎಂದು ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ ರಾಜ್ಯ ಉಪಾಧ್ಯಕ್ಷ ಸುರೇಶ್‌ ಕಾರ್ಗಲ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಸಾಗರ ತಾಲೂಕು ಕಾರ್ಗಲ್‌ ಪಪಂಗೆ ಸೇರಿದ ಅಂಬೇಡ್ಕರ್‌ ಭವನ, ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಳಲಾಗಿತ್ತು. ಆದರೆ ಇಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಭ್ರಷ್ಟಾಚಾರ ಮುಚ್ಚಿಹಾಕುವ ಉದ್ದೇಶದಿಂದ ಕೇಳಿದ ದಾಖಲೆಗಳನ್ನು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಸಾಗರ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಲಾಗಿತ್ತು ಎಂದರು.

ಆದರೆ ಅಲ್ಲಿಯೂ ಕೂಡ ಸಮರ್ಪಕ ಮಾಹಿತಿ ದೊರಕಲಿಲ್ಲ. ಭ್ರಷ್ಟಾಚಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಅನುಮಾನವಿದೆ. ಇದರ ಜೊತೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಯೋಜನಾ ನಿರ್ದೇಶಕ ಮತ್ತು ಹಂಗಾಮಿ ನೌಕರರೊಬ್ಬರು ಭಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು ಎಂದರು.

ಶಿವಮೊಗ್ಗ: ನೆರೆ ಪ್ರಭಾವ; ಕಾಯಿ, ಕಡುಬು ತಿನ್ನೋ ಮೊದಲೇ ನೀರಲ್ಲಿ ಮುಳುಗಿದ ಗಣಪ..!

ಅಗತ್ಯ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಮಾಹಿತಿ ಕೊಡುವ ಹೊಣೆಗಾರಿಕೆ ಹೊತ್ತಿದ್ದವರು ಅಗತ್ಯ ಮಾಹಿತಿ ನೀಡದೆ ಅರ್ಜಿದಾರರನ್ನು ಮತ್ತು ಆಯೋಗವನ್ನು ವಂಚಿಸಿದ್ದಾರೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ವಿಜಯಕುಮಾರ್‌, ಸಮಗ್ರ ದಾಖಲಾತಿ ಪರಿಶೀಲನೆ ನಡೆಸಿ ವಂಚಿಸಿರುವುದು ನಿಜ ಎಂದು ತಿಳಿದು ಬಂದ ಕಾರಣ, ಮಾಹಿತಿ ಒದಗಿಸದ ಅಧಿಕಾರಿಗೆ 15 ಸಾವಿರ ರು. ದಂಡ ವಿಧಿಸಿದ್ದಾರೆ ಎಂದು ಹೇಳಿದರು.

ಇದೇ ರೀತಿ ಕಾರ್ಗಲ್‌ ಪಪಂನಲ್ಲಿ ಹಲವು ಹಗರಣ ನಡೆದಿದ್ದು, ಈ ಎಲ್ಲ ಹಗರಣಗಳ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ವಿಶ್ವನಾಥ ಗೌಡ, ಎಂ.ಅಣ್ಣಪ್ಪ, ಫ್ರಾನ್ಸಿಸ್‌ ಡಯಾಸ್‌, ಮಹದೇವಪ್ಪ, ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.