ಮಂಗಳೂರು [ಅ.27]: ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಉಡುಪಿ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ತುಂಬು ಗರ್ಭಿಣಿ ಮಹಿಳಾ ಪೇದೆಯೊಬ್ಬರನ್ನು ಬಂದೋಬಸ್ತ್ ಕಾರ್ಯದಲ್ಲಿ ನಿಯೋಜಿಸಿದ್ದ ಫೋಟೋವೊಂದು ಇದೀಗ ವೈರಲ್‌ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಮಂಗಳೂರು ಪೊಲೀಸ್‌ ಆಯುಕ್ತ ಡಾ.ಪಿ.ಎಸ್.ಹರ್ಷ, ಈ ಸಂಬಂಧ ಲಿಖಿತ ವರದಿ ನೀಡುವಂತೆ ಮಹಿಳಾ ಪೇದೆ ಕರ್ತವ್ಯ ನಿರ್ವಹಿಸುತ್ತಿರುವ ಮೂಲ್ಕಿ ಠಾಣೆಯ ಇನ್ಸ್‌ಪೆಕ್ಟರ್‌ ಅವರಿಗೆ ಸೂಚನೆ ನೀಡಿದ್ದರು. 

ಡಿಸಿಎಂ ತೆರಳೋ ಮಾರ್ಗದಲ್ಲಿ ಬಂದೋಬಸ್ತ್ ಗೆ ಗರ್ಭಿಣಿ ಪೇದೆ!

ಇದೀಗ ಇದರ ಮುಂದುವರಿದ ಭಾಗವಾಗಿ ಕಮಿಷನರ್ ಹರ್ಷ ಅವರ ಮನ ಮಿಡಿದ್ದು, ತುಂಬು ಗರ್ಭಿಣಿ ಪೇದೆ ಕರ್ತವ್ಯ ನಿರ್ವಹಿಸಿದ್ದಕ್ಕೆ   ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೇ ಕೂಡಲೇ ಗರ್ಭಿಣಿ ಮಹಿಳಾ ಪೇದೆಯನ್ನು ರಜೆ ಮೇಲೆ ಕಳುಹಿಸಿದ್ದಾರೆ. ಹರ್ಷಾ ಅವರ ಈ ಹೃದಯ ಶ್ರೀಮಂತಿಕೆಗೆ ಕರಾವಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದೇನೋ ತಿಳಿದೋ ತಿಳಿಯದೇ ಘಟನೆ ನಡೆದಿರಬಹುದು. ತಪ್ಪು ತಪ್ಪೇ. ಇದರಲ್ಲಿ ಯಾರ ತಪ್ಪು ಇದೆಯೋ ಗೊತ್ತಿಲ್ಲ. ಈಗ ಅದನ್ನು ತಿದ್ದಿಕೊಂಡಿರುವುದು ನಿಜಕ್ಕೂ ಸಂತಸದ ಸಂಗತಿ.

ಏನಿದು ಪ್ರಕರಣ?
ಶುಕ್ರವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ರಸ್ತೆ ಮಾರ್ಗವಾಗಿ ಉಡುಪಿಗೆ ತೆರಳಿದ್ದರು. ಉಡುಪಿಯಿಂದ ಕಾರ್ಯಕ್ರಮ ಮುಗಿಸಿ ವಾಪಸಾಗುವ ವೇಳೆ ದಾರಿಯಲ್ಲಿ ಮೂಲ್ಕಿ ಠಾಣೆಯ ಗರ್ಭಿಣಿ ಮಹಿಳಾ ಪೇದೆಯೊಬ್ಬರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು. 

ಲಾಠಿ ಹಿಡಿದು ನಿಂತಿದ್ದ ಗರ್ಭಿಣಿ ಪೇದೆಯನ್ನು ಕಂಡು ಆ ಮಾರ್ಗವಾಗಿ ಸಾಗುತ್ತಿದ್ದ ಸಾರ್ವಜನಿಕರೊಬ್ಬರು ಕುಶಲೋಪರಿ ವಿಚಾರಿಸಿದ್ದು, ನಂತರ ಪೇದೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು. 

ಇದು ವೈರಲ್‌ ಆಗಿದ್ದಷ್ಟೇ ಅಲ್ಲದೆ ಪೊಲೀಸ್‌ ಇಲಾಖೆಯ ಕಾರ್ಯವೈಖರಿ ಕುರಿತು ಸಾರ್ವಜನಿಕರು ಪ್ರಶ್ನಿಸಲು ಕಾರಣವಾಯ್ತು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಮಂಗಳೂರು ಪೊಲೀಸ್‌ ಆಯುಕ್ತ ಹರ್ಷ ಅವರು ಘಟನೆ ಕುರಿತು ಬೇಸರ ವ್ಯಕ್ತಪಡಿಸಿದ್ದು, ಮಾಹಿತಿ ಕೇಳಿದ್ದಾರೆ.

ಅಕ್ಟೋಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: