Asianet Suvarna News Asianet Suvarna News

Mangaluru: ಮಳಲಿ ಮಸೀದಿ ವಿವಾದ: ಇಂದೂ ಬರಲಿಲ್ಲ ತೀರ್ಪು; ನವೆಂಬರ್ 9 ಕ್ಕೆ ಆದೇಶ ಮುಂದೂಡಿಕೆ

ಮಂಗಳೂರಿನ ಮಳಲಿ ಮಸೀದಿ ವರ್ಸಸ್ ವಿಎಚ್ ಪಿ ಫೈಟ್ ವಿಚಾರವಾಗಿ ಮಂಗಳೂರು ಸೆಷನ್ಸ್‌ ಕೋರ್ಟ್‌ ತೀರ್ಪನ್ನು ಮತ್ತೆ ಮುಂದೂಡಿದೆ.  ನವೆಂಬರ್ 9 ಕ್ಕೆ ಈ ಆದೇಶವನ್ನು ಕಾಯ್ದಿರಿಸಲಾಗಿದೆ. 

mangaluru malali masjid civil court reserves judgement adjourned to november 9th karnataka ash
Author
First Published Oct 17, 2022, 12:59 PM IST

ಮಂಗಳೂರು (ಅಕ್ಟೋಬರ್ 17): ಮಂಗಳೂರಿನ ಮಳಲಿ ಮಸೀದಿ ವಿವಾದ ಇನ್ನೂ ಮುಂದುವರಿದಿದ್ದು, ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಈ ಸಂಬಂಧದ ಆದೇಶವನ್ನು ಮತ್ತೆ ಮುಂದೂಡಿದೆ. ಇಂದು ಪ್ರಕಟವಾಗಬೇಕಿದ್ದ ಮಂಗಳೂರಿನ ಮಳಲಿ ಮಸೀದಿ ವರ್ಸಸ್ ವಿಎಚ್ ಪಿ ಫೈಟ್ ತೀರ್ಪನ್ನು ಮಂಗಳೂರು ಕೋರ್ಟ್ ನವೆಂಬರ್ 9 ಕ್ಕೆ ಆದೇಶವನ್ನು ಕಾಯ್ದಿರಿಸಿದೆ. ಮೂಲ ದಾವೆ ಆಲಿಸಲು ವಿಚಾರಣಾಧೀನ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಕುರಿತು ಇಂದು ತೀರ್ಪು ಬರಬೇಕಿತ್ತು. ಆದರೆ, ಇದು ಮತ್ತೆ ಮೂಂದೂಡಿಕೆಯಾಗಿದೆ. 

ಮಂಗಳೂರಿನ ಮಳಲಿ ಮಸೀದಿ ವರ್ಸಸ್ ವಿಎಚ್ ಪಿ ಫೈಟ್ ಬಹುಕಾಲದಿಂದ ನಡೆಯುತ್ತಲೇ ಇದ್ದು,  ಮಂಗಳೂರಿನ ಮಳಲಿ ಮಸೀದಿ ಈ ಸಂಬಂಧದ ತೀರ್ಪನ್ನು ಮತ್ತೆ ಮುಂದೂಡಿದ್ದು,  ನವೆಂಬರ್ 9ಕ್ಕೆ ಆದೇಶ ಕಾಯ್ದಿರಿಸಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 27ರಂದು ಮಂಗಳೂರು ಕೋರ್ಟ್ ತೀರ್ಪನ್ನು ಮುಂದೂಡಿತ್ತು. ಇದೀಗ ಮತ್ತೆ ಮಂಗಳೂರು ಕೋರ್ಟ್‌ ತೀರ್ಪನ್ನು ಮುಂದೂಡಿದೆ.  

ಇದನ್ನು ಓದಿ: ಮಂಗಳೂರು: ಮಳಲಿ ಮಸೀದಿ ವಿವಾದ, ಆ. 1ರಂದು ತೀರ್ಪು ಪ್ರಕಟ

ಮಂಗಳೂರು ಹೊರವಲಯದ ಮಳಲಿ ಪೇಟೆ ಮಸೀದಿಯಲ್ಲಿ ದೇವಸ್ಥಾನದ ಕುರುಹು ಪತ್ತೆಯಾದ ಮಳಲಿ ಮಸೀದಿಯ ಸರ್ವೆ ನಡೆಸುವಂತೆ ಕೋರಿ ಹಿಂದೂ ಸಂಘಟನೆ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಮಸೀದಿ ಪರ ವಕೀಲರು ಇದನ್ನು ವಿರೋಧಿಸಿದ್ದು, ಮಳಲಿ ಮಸೀದಿ ವಕ್ಫ್ ಬೋರ್ಡ್‌ ಅಧೀನದಲ್ಲಿ ಇರುವುದರಿಂದ ಮರು ಸರ್ವೇ ನಡೆಸಲು ಅವಕಾಶ ನೀಡದೆ, ನವೀಕರಣ ಕಾಮಗಾರಿ ಮುಂದುವರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.

ವಿವಾದಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ವಾದ ವಿವಾದವನ್ನು ಆಲಿಸಿ ಈ ಹಿಂದೆಯೇ ತೀರ್ಪು ಕಾಯ್ದಿರಿಸಿತ್ತು. ಆದರೆ, ಈ ಮಧ್ಯೆ,  ಸ್ಥಳೀಯರಾದ ಧನಂಜಯ ಮತ್ತು ಮನೋಜ್‌ ಕುಮಾರ್‌ ಮತ್ತಿತರರು ಸಿವಿಲ್‌ ನ್ಯಾಯಾಲಯ ತೀರ್ಪು ನೀಡುವುದನ್ನು ತಡೆಹಿಡಿಯಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಮಳಲಿ ಮಸೀದಿ ವಿವಾದ: ಹೈಕೋರ್ಟ್‌ನಲ್ಲಿ VHP ಅರ್ಜಿ ವಜಾ: ವಿವಾದ ಮತ್ತೆ ಮಂಗಳೂರು ಕೋರ್ಟ್‌ಗೆ

ಇನ್ನು, ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆದು ಹೈಕೋರ್ಟ್‌ ತೀರ್ಪು ನೀಡಿದ ಬಳಿಕವಷ್ಟೇ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಮಳಲಿ ಪೇಟೆ ಮಸೀದಿಗೆ ಸಂಬಂಧಿಸಿ ತೀರ್ಪು ಪ್ರಕಟಿಸಬೇಕು ಎಂದು ಸೂಚನೆ ನೀಡಿತ್ತು. ಹೀಗಾಗಿ ಸಿವಿಲ್‌ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸದೆ ಈ ಹಿಂದೆ ಕಾಯ್ದಿರಿಸಿತ್ತು. ಈ ಬೆಳವಣಿಗೆಗಳ ಬಳಿಕ ತೀರ್ಪು ತಡೆಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆಯನ್ನು ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್‌, ಅರ್ಜಿಯನ್ನು ವಜಾಗೊಳಿಸಿ ಕಳೆದ ವಾರ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ತಾನು ನೀಡುವ ತೀರ್ಪಿನ ದಿನಾಂಕವನ್ನು ಪ್ರಕಟಿಸಿದೆ. 

ಇದನ್ನೂ ಓದಿ: Malali Mosque Dispute; ಕೋರ್ಟ್ ನಲ್ಲಿ ನಡೆದ ವಾದ-ಪ್ರತಿವಾದವೇನು?

ನವೀಕರಣ ಸಮಯದಲ್ಲಿ ಅಲ್ಲಿ ದೇವಸ್ಥಾನದ ಮಾದರಿ ಸಿಕ್ಕಿದೆ, ಅದರ ಫೋಟೋಗಳನ್ನು ನೀಡಲಾಗಿದೆ ಎಂಬುದು ವಿಎಚ್‌ಪಿಯವರ ವಾದವಾದರೆ, ಈ ಮಸೀದಿಗೆ 700 ವರ್ಷಗಳ ಇತಿಹಾಸವಿದೆ, ಮತ್ತೆ ಅದು ಸರಕಾರಿ ಜಾಗ ಎನ್ನುವುದು ಮಸೀದಿ ಕಮಿಟಿ ಪರ ವಕೀಲರ ಪ್ರತಿವಾದವಾಗಿದೆ. 

ಮಂಗಳೂರು ಕೋರ್ಟ್ ತೀರ್ಪಿನತ್ತ ಕುತೂಹಲ!

ಸದ್ಯ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ತೀರ್ಪು ಮಹತ್ವ ಎನಿಸಿದೆ. ಈಗಾಗಲೇ ಮಂಗಳೂರು ಕೋರ್ಟ್ ನಲ್ಲಿ ವಿಎಚ್ ಪಿ ವಕೀಲ ಚಿದಾನಂದ ಕೆದಿಲಾಯ ಮತ್ತು ಮಸೀದಿ ವಕೀಲ ಎಂ.ಪಿ.ಶೆಣೈ ಹಲವು ಸುತ್ತಿನ ವಾದ ಮಂಡಿಸಿದ್ದಾರೆ. ‌ವಕ್ಛ್ ಕಾಯ್ದೆಗಳ ಪ್ರಕಾರ ಸಿವಿಲ್ ಕೋರ್ಟ್ ಗೆ ಮಸೀದಿ ವಿವಾದ ವಿಚಾರಣೆ ಅಧಿಕಾರ ಇಲ್ಲ ಎಂದಿದ್ದ ಮಸೀದಿ ವಕೀಲ ಶೆಣೈ, ವಿಎಚ್ ಪಿ ಅರ್ಜಿ ತಿರಸ್ಕರಿಸಿ ನವೀಕರಣ ಕಾಮಗಾರಿಗೆ ನೀಡಿದ್ದ ತಡೆ ತೆರವಿಗೆ ಮನವಿ ಮಾಡಿದ್ದರು. 

ಆದರೆ ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ, ವಿವಾದಿತ ಜಾಗದಲ್ಲಿರುವ ಪ್ರಾಚೀನ ರಚನೆಯನ್ನು ನ್ಯಾಯಾಲಯ ಗಮನಿಸಬೇಕು. ಇದೊಂದು ಹಳೆಯ ಸ್ಮಾರಕ ಕಟ್ಟಡದ ಸ್ವರೂಪವಾಗಿದ್ದು, ಸರ್ವೇ ನಡೆಯಬೇಕು.‌ 

ಅದರಲ್ಲಿರುವ ವಾಸ್ತುಶಿಲ್ಪದ ಚಿತ್ರಗಳು, ಗೋಡೆ, ಕೆತ್ತನೆಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತೆ.‌ ಇದರ ಐತಿಹಾಸಿಕ ಸ್ವರೂಪದ ಆಧಾರದ ಮೇಲೆ ಅದರ ಸ್ವರೂಪದ ಬಗ್ಗೆ ವರದಿಯ ಅಗತ್ಯವಿದೆ‌. ಭೂಮಿಯನ್ನು ಅಗೆದು ಯಾವುದೇ ಪುರಾತನ ಸ್ಮಾರಕ ರಚನೆ, ಪ್ರತಿಮೆ ಇದೆಯೇ ಎಂದು ಕಂಡುಹಿಡಿಯಬೇಕಿದೆ. ಅದರಲ್ಲಿರುವ ರಚನೆ ಮತ್ತು ಸ್ಮಾರಕಗಳ ವಯಸ್ಸಿನ ಬಗ್ಗೆ ವರದಿ ಸಲ್ಲಿಸಲು ಕೋರ್ಟ್ ಕಮಿಷನರ್ ಬೇಕು. ರಚನೆಯ ಒಟ್ಟಾರೆ ಸ್ವರೂಪ ಅಥವಾ ನೆಲೆಗೊಂಡಿರುವ ಯಾವುದೇ ಸ್ಮಾರಕದ ಬಗ್ಗೆ ವೈಜ್ಞಾನಿಕ ವರದಿಯ ಅಗತ್ಯವಿದೆ ಅಂತ ವಾದಿಸಿ ನವೀಕರಣ ಕಾಮಗಾರಿ ತಡೆ ತೆರವು ಮಾಡುವ ಮೊದಲು ಕೋರ್ಟ್ ಕಮಿಷನರ್ ನೇಮಿಸಿ ಸರ್ವೇ ನಡೆಸುವಂತೆ ವಾದಿಸಿದ್ದರು.

ಆದರೆ ವಿಎಚ್‌ಪಿ ಹೈಕೋರ್ಟ್ ಮೆಟ್ಟಿಲೇರಿ ಮಂಗಳೂರು ಕೋರ್ಟ್ ತೀರ್ಪಿಗೆ ತಡೆಯಾಜ್ಞೆ ತಂದಿತ್ತು. ಆದರೆ ಮತ್ತೆ ಹೈಕೋರ್ಟ್‌ನಲ್ಲಿ ವಿಎಚ್‌ಪಿ ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ ಮಂಗಳೂರು ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ತೀರ್ಪಿನ ವಿರುದ್ದವೂ ಮತ್ತೆ ಹೈಕೋರ್ಟ್ ಮೆಟ್ಟಿಲೇರೋ ಸಾಧ್ಯತೆ ಇದೆ.

(ವರದಿ - ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು)

Follow Us:
Download App:
  • android
  • ios