ಮಂಗಳೂರು: ಮಳಲಿ ಮಸೀದಿ ವಿವಾದ, ಆ. 1ರಂದು ತೀರ್ಪು ಪ್ರಕಟ
ಹೈಕೋರ್ಟ್‌ನ ಆದೇಶ ಪ್ರತಿಯನ್ನು ಸ್ವೀಕರಿಸಿದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಿದೆ.
ಮಂಗಳೂರು(ಜು.23): ಮಂಗಳೂರು ಹೊರವಲಯದ ಮಳಲಿ ಪೇಟೆ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆಗಸ್ಟ್ 1ಕ್ಕೆ ತೀರ್ಪು ಕಾಯ್ದಿರಿಸಿದೆ. ದೇವಸ್ಥಾನದ ಕುರುಹು ಪತ್ತೆಯಾದ ಮಳಲಿ ಮಸೀದಿಯ ಸರ್ವೆ ನಡೆಸುವಂತೆ ಕೋರಿ ಹಿಂದೂ ಸಂಘಟನೆ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದರು. ಇದನ್ನು ಮಸೀದಿ ಪರ ವಕೀಲರು ವಿರೋಧಿಸಿದ್ದು, ವಕ್ಫ್ ಬೋರ್ಡ್ ಅಧೀನದಲ್ಲಿ ಇರುವುದರಿಂದ ಮರು ಸರ್ವೆ ನಡೆಸಲು ಅವಕಾಶ ನೀಡದೆ, ನವೀಕರಣ ಕಾಮಗಾರಿ ಮುಂದುವರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.
ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟಿಸದಂತೆ ಸ್ಥಳೀಯರಾದ ಮನೋಜ್ ಕುಮಾರ್ ಧನಂಜಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದ್ದ ಪ್ರತಿಯನ್ನು ಮಸೀದಿ ಪರ ವಕೀಲರು ಶುಕ್ರವಾರ ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಮಳಲಿ ಮಸೀದಿ ವಿವಾದ: ಹೈಕೋರ್ಟ್‌ನಲ್ಲಿ VHP ಅರ್ಜಿ ವಜಾ: ವಿವಾದ ಮತ್ತೆ ಮಂಗಳೂರು ಕೋರ್ಟ್‌ಗೆ
ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಆದೇಶ ಪ್ರತಿಯನ್ನು ಸ್ವೀಕರಿಸಿದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಿದೆ.
ವಿವಾದಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ವಾದ ವಿವಾದವನ್ನು ಆಲಿಸಿ ತೀರ್ಪು ಕಾಯ್ದಿರಿಸಿತ್ತು. ಈ ನಡುವೆ ಸ್ಥಳೀಯರಾದ ಧನಂಜಯ ಮತ್ತು ಮನೋಜ್ ಕುಮಾರ್ ಮತ್ತಿತರರು ಸಿವಿಲ್ ನ್ಯಾಯಾಲಯ ತೀರ್ಪು ನೀಡುವುದನ್ನು ತಡೆಹಿಡಿಯಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆದು ಹೈಕೋರ್ಟ್ ತೀರ್ಪು ನೀಡಿದ ಬಳಿಕವಷ್ಟೇ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮಳಲಿ ಪೇಟೆ ಮಸೀದಿಗೆ ಸಂಬಂಧಿಸಿ ತೀರ್ಪು ಪ್ರಕಟಿಸಬೇಕು ಎಂದು ಸೂಚನೆ ನೀಡಿತ್ತು. ಹೀಗಾಗಿ ಸಿವಿಲ್ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸದೆ ಕಾಯ್ದಿರಿಸಿತ್ತು.
ಈ ಬೆಳವಣಿಗೆಗಳ ಬಳಿಕ ತೀರ್ಪು ತಡೆಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಕಳೆದ ವಾರ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತಾನು ನೀಡುವ ತೀರ್ಪಿನ ದಿನಾಂಕವನ್ನು ಪ್ರಕಟಿಸಿದೆ.