ಮಂಗಳೂರು(ನ.01): ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪಾಂಡೇಶ್ವರ ವಾರ್ಡ್‌ನ ಆರು ಬೂತ್‌ ಅಧ್ಯಕ್ಷರು ಬುಧವಾರ ರಾತ್ರಿ ಹಠಾತ್‌ ರಾಜಿನಾಮೆ ನೀಡಿದ್ದಾರೆ.

ಪಾಂಡೇಶ್ವರ ವಾರ್ಡ್‌ಗೆ ಭಾಸ್ಕರ ರಾವ್‌ ಅವರನ್ನು ಅಭ್ಯರ್ಥಿಯಾಗಿ ಅಂತಿಮಗೊಳಿಸಲಾಗಿತ್ತು. ಇಲ್ಲಿಗೆ ಸುರೇಶ್‌ ಶೆಟ್ಟಿಹೆಸರು ಪ್ರಸ್ತಾಪದಲ್ಲಿತ್ತು. ಆದರೆ ಬೇರೊಬ್ಬರಿಗೆ ಟಿಕೆಟ್‌ ನೀಡಿದ್ದರಿಂದ ಮನನೊಂದು ಬೂತ್‌ ಅಧ್ಯಕ್ಷರು ಸಾಮೂಹಿಕ ರಾಜಿನಾಮೆಯನ್ನು ಬ್ಲಾಕ್‌ ಅಧ್ಯಕ್ಷರಿಗೆ ಸಲ್ಲಿಸಿದರು. ರಾಜಿನಾಮೆ ವಾಪಸ್‌ಗೆ ಮನ ಒಲಿಸುವ ಪ್ರಯತ್ನ ಪಕ್ಷದ ಮುಖಂಡರಿಂದ ಗುರುವಾರ ಮುಂದುವರಿದಿದೆ.

ಮಾಜಿ ಮೇಯರ್‌ ‘ಕೈ’ ಬಂಡಾಯ ನಾಮಪತ್ರ

ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಲ್ಪಟ್ಟಕಾಟಿಪಳ್ಳ ಉತ್ತರ ವಾರ್ಡ್‌ನ ಮಾಜಿ ಸದಸ್ಯೆ ಗುಲ್ಜಾರ್‌ಬಾನು ಅವರು ಗುರುವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಟಿಕೆಟ್‌ ಸಿಗುವುದಿಲ್ಲ ಎಂದು ಗೊತ್ತಾದ ಕೂಡಲೇ ಗುಲ್ಜಾರ್‌ಬಾನು ಅವರು ಬುಧವಾರ ಜಿಲ್ಲಾ ಕಾಂಗ್ರೆಸ್‌ ಮುಖಂಡರಲ್ಲಿ ಪ್ರಶ್ನಿಸಿದ್ದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು, ಮಾಜಿ ಶಾಸಕ ಮೊಯ್ದಿನ್‌ ಬಾವಾ ಮೇಲೆ ಈಕೆಯ ಪುತ್ರ ಅಜೀಂ ಕೈ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು.

ಮಾಜಿ ಶಾಸಕನ ಮೇಲೆ ಹಲ್ಲೆ: ಮಾಜಿ ಮೇಯರ್‌ ಪುತ್ರ ಅರೆಸ್ಟ್‌

ಮಾಜಿ ಶಾಸಕ ಮೊೖದೀನ್‌ ಬಾವಾ ಮೇಲೆ ಹಲ್ಲೆ ನಡೆಸಿದ್ದ ಮಾಜಿ ಮೇಯರ್‌ ಗುಲ್ಜಾರುಬಾನು ಅವರ ಪುತ್ರ ಅಜೀಂನನ್ನು ಕದ್ರಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕೊಡಿಯಾಲಬೈಲ್‌ನ ಹೋಟೆಲ್‌ ಸಭಾಂಗಣದಲ್ಲಿ ಬುಧವಾರ ರಾತ್ರಿ ಕೆಪಿಸಿಸಿ ನಾಯಕರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿದ್ದರು. ಈ ಸಂದರ್ಭ ಮಾಜಿ ಶಾಸಕ ಮೊೖದಿನ್‌ ಬಾವಾ ಹೊರಗೆ ಬರುತ್ತಿದ್ದಂತೆ ಗುಲ್ಜಾರುಬಾನು ಅವರ ಸಂಬಂಧಿಕರು ಹಾಗೂ ಬೆಂಬಲಿಗರು ಕಾಟಿಪಳ್ಳ ಉತ್ತರ ವಾರ್ಡ್‌ನಲ್ಲಿ ಫಾತಿಮಾ ಎಂಬವರಿಗೆ ಟಿಕೆಟ್‌ ನೀಡಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಮಾತಿನ ಚಕಮಕಿ ನಡೆದು ತಳ್ಳಾಟ ನಡೆದಿದ್ದು, ಮೊೖದಿನ್‌ ಬಾವಾ ಅವರಿಗೆ ಅಜೀಂ ಕೈಯಿಂದ ಹಲ್ಲೆ ನಡೆಸಿದ್ದರು. ಈ ಬಗ್ಗೆ ಮೊೖದೀನ್‌ ಬಾವಾ ಅವರ ಆಪ್ತ ಸಹಾಯಕ ಹ್ಯಾರಿಸ್‌ ಅವರು ನೀಡಿದ ದೂರಿನಂತೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಮಂಗಳೂರು ಪಾಲಿಕೆ ಚುನಾವಣೆ: 234 ಮಂದಿ ನಾಮಪತ್ರ ಸಲ್ಲಿಕೆ.

ಘಟನೆ ನಡೆದ ಬಳಿಕ ಕದ್ರಿ ಇನ್‌ಸ್ಪೆಕ್ಟರ್‌ ಶಾಂತಾರಾಮ ಹೊಟೇಲ್‌ ಆವರಣಕ್ಕೆ ಆಗಮಿಸಿ ತನಿಖೆ ನಡೆಸಿದ್ದರು. ಸಿಬ್ಬಂದಿ ಸಹಕಾರದಲ್ಲಿ ಆರೋಪಿ ಅಜೀಂನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.