ಮಂಗಳೂರು(ನ.01): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಗುರುವಾರ 60 ವಾರ್ಡ್‌ಗೆ ಒಟ್ಟು 234 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ 66, ಬಿಜೆಪಿ 94, ಜೆಡಿಎಸ್‌ 14, ಸಿಪಿಐ 1, ಸಿಪಿಎಂ 8, ಎಸ್‌ಡಿಪಿಐ 10, ಜೆಡಿಯು 2, ಡಬ್ಲ್ಯೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 3, ಪಕ್ಷೇತರರು 35 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ನ.2ರಂದು ನಡೆಯಲಿದೆ. ನ.4ರಂದು ನಾಮಪತ್ರ ವಾಪಸ್‌ಗೆ ಕೊನೆ ದಿನವಾಗಿದೆ.

ಕಾಂಗ್ರೆಸ್‌ ಅಂತಿಮ ಪಟ್ಟಿ:

ಬೆಳಗ್ಗೆ ಕಾಂಗ್ರೆಸ್‌ ಪಕ್ಷ ತನ್ನ ಇಬ್ಬರು ಅಭ್ಯರ್ಥಿಗಳ ಹೆಸರು ಘೋಷಿಸಿದೆ. 17ನೇ ದೇರೆಬೈಲ್‌ ಉತ್ತರ ವಾರ್ಡ್‌ (ಪರಿಶಿಷ್ಟಜಾತಿ ಮೀಸಲು)ನಿಂದ ಮಲ್ಲಿಕಾರ್ಜುನ ಮತ್ತು 56ನೇ ಮಂಗಳಾದೇವಿ ವಾರ್ಡ್‌ (ಸಾಮಾನ್ಯ)ನಿಂದ ದಿನೇಶ್‌ ರಾವ್‌ ಪಕ್ಷದ ಟಿಕೆಟ್‌ ಪಡೆದಿದ್ದಾರೆ. ಈ ಎರಡು ವಾರ್ಡ್‌ಗಳಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದ ಕಾರಣ ಒಮ್ಮತದ ಆಯ್ಕೆ ಸಾಧ್ಯವಾಗಿರಲಿಲ್ಲ.

ಬುಧವಾರ ಸಂಜೆ 58 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಕಾಂಗ್ರೆಸ್‌, ಎರಡು ವಾರ್ಡ್‌ಗಳ ಅಭ್ಯರ್ಥಿ ಆಯ್ಕೆಯನ್ನು ಗುರುವಾರ ಬೆಳಗ್ಗೆ ಅಖೈರುಗೊಳಿಸಿತ್ತು. 19ನೇ ಪಚ್ಚನಾಡಿ ವಾರ್ಡ್‌ (ಹಿಂದುಳಿದ ವರ್ಗ ಎ ಮಹಿಳೆ)ನಿಂದ ಮಾಜಿ ಮೇಯರ್‌ ಕವಿತಾ ಸನಿಲ್‌ ಸ್ಪರ್ಧಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿಶಾಲಾಕ್ಷಿ ಅವರ ಹೆಸರನ್ನು ಕಾಂಗ್ರೆಸ್‌ ಅಂತಿಮಗೊಳಿಸಿದೆ.

ಬಿಜೆಪಿ ಫೈನಲ್‌ ಪಟ್ಟಿ:

ಬಿಜೆಪಿ ಮೊದಲ ಪಟ್ಟಿಯಲ್ಲಿ 35 ಹಾಗೂ ದ್ವಿತೀಯ ಪಟ್ಟಿಯಲ್ಲಿ 18 ಅಭ್ಯರ್ಥಿಗಳ ಹೆಸರು ಪ್ರಕಟಿಸಿತ್ತು. ಬುಧವಾರ ರಾತ್ರಿ ಅಂತಿಮ ಪಟ್ಟಿಯಲ್ಲಿ 7 ವಾರ್ಡ್‌ಗಳ ಅಭ್ಯರ್ಥಿ ಹೆಸರು ಘೋಷಿಸಿತ್ತು.

ಬಿಜೆಪಿಯಿಂದ ಕಾಟಿಪಳ್ಳ ಉತ್ತರ(ಸಾಮಾನ್ಯ ಮಹಿಳೆ) ಸುರೈಯಾ, ಇಡ್ಯಾ ಪಶ್ಚಿಮ(ಹಿಂದುಳಿದ ವರ್ಗ ಎ ಮಹಿಳೆ) ನಯನಾ ಕೋಟ್ಯಾನ್‌, ಪಚ್ಚನಾಡಿ(ಹಿಂದುಳಿದ ವರ್ಗ ಎ ಮಹಿಳೆ) ಸಂಗೀತಾ ಆರ್‌.ನಾಯಕ್‌, ಬೆಂದೂರು(ಸಾಮಾನ್ಯ) ಜೆಸ್ಸಿಲ್‌ ವಿಯೋಲಾ ಡಿಸೋಜಾ, ಫಳ್ನೀರ್‌(ಸಾಮಾನ್ಯ ಮಹಿಳೆ) ಆಶಾ ಡಿಸಿಲ್ವಾ, ಕಣ್ಣೂರು(ಹಿಂದುಳಿದ ವರ್ಗ ಎ ಮಹಿಳೆ) ಚಂದ್ರಾವತಿ ವಿಶ್ವನಾಥ್‌, ಬೋಳಾರ(ಸಾಮಾನ್ಯ ಮಹಿಳೆ) ಭಾನುಮತಿ ಪಿ.ಎಸ್‌. ಇವರ ಹೆಸರು ಪ್ರಕಟಿಸಲಾಗಿದೆ.