ಮಂಗಳೂರು(ಅ.26): ಬಡವರಿಗಾಗಿ ಸರ್ಕಾರಗಳು ಅದೆಷ್ಟೋ ಯೋಜನೆಗಳನ್ನು ತರುತ್ತಿವೆ. ಆದರೆ ಆ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ಇಲ್ಲೊಂದು ಉತ್ತಮ ನಿದರ್ಶನವಿದೆ.

ಅದೊಂದು ಇಂದೋ ನಾಳೆಯೋ ಕುಸಿಯುವ ಹಂತದಲ್ಲಿರುವ ಗುಡಿಸಲು, ಇರುವುದು ಕೇವಲ ಒಂದೇ ಒಂದು ಕೋಣೆ. ಕೋಣೆ ತುಂಬಾ ಕೆಸರು ತುಂಬಿದ್ದು, ಆ ಗುಡಿಸಲಿಗೆ ತೆಂಗಿನಗರಿಯ ಹೊದಿಕೆ. ಅದರಲ್ಲಿ ಸನ್ಯಾಸಿಯಂತೆ ಗಡ್ಡ, ಕೂದಲು ಬಿಟ್ಟವ್ಯಕ್ತಿಯೊಬ್ಬರು ಅತ್ಯಂತ ಹೀನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಡಿಕೆಶಿ ಬಿಡುಗಡೆಗೆ ಹೆಚ್ಚಿನ ಮಹತ್ವ ಬೇಕಾಗಿಲ್ಲ: ಡಿಸಿಎಂ

ಇದು ಯಾವುದೇ ಸಿನಿಮಾ, ಕಥೆ, ಕಾದಂಬರಿಯ ವಿವರಣೆಯಲ್ಲ. ಬದಲಾಗಿ ಬೆಳ್ತಂಗಡಿಯ ಸವಣಾಲು ಗ್ರಾಮದ ಹಿರಿಯಾಜೆ ಲಕ್ಷ್ಮೇಬೆಟ್ಟು ಎಂಬಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸುರೇಶ ಎಂಬವರ ಬದುಕಿನ ನೈಜಚಿತ್ರಣ. ಇವರಿಗೆ ಸರಿಸುಮಾರು 40 ವರ್ಷ ಆಗಿರಬಹುದು. ಮದುವೆಯಾಗಿ ಹೆಂಡತಿ, 3 ಮಕ್ಕಳೊಂದಿಗೆ ನೆಮ್ಮದಿಯಾಗಿದ್ದರು. ಸುರೇಶ್‌ ಯಾವುದೋ ಕಾರಣದಿಂದಾಗಿ ಮಾನಸಿಕ ಖಿನ್ನತೆಗೊಳಗಾದಾಗ ಅವರ ಹೆಂಡತಿ ತಮ್ಮ ಮಕ್ಕಳೊಂದಿಗೆ ತವರು ಮನೆ ಸೇರಿದರು.

ಹೀಗಾಗಿ ಕಳೆದ ಏಳೆಂಟು ವರ್ಷಗಳಿಂದ ಸುರೇಶ್‌ ಅವರದ್ದು ಒಬ್ಬಂಟಿ ಬದುಕು. ಈ ಗುಡಿಸಲಿನ ಸುತ್ತಮುತ್ತಲು ಕೆಸು ಸೇರಿದಂತೆ ಎತ್ತರವಾಗಿ ಬೆಳೆದು ನಿಂತಿರುವ ಗಿಡಗಂಟಿಗಳು. ಯಾವುದೇ ಸರಿಸೃಪಗಳು ಮನೆಯೊಳಗೆ ಸೇರಿದರೂ ಗೊತ್ತಾಗದ ರೀತಿಯ ಜೀವನ ಈ ಸುರೇಶ್‌ ಅವರದ್ದು. ಇವರ ಈ ಗುಡಿಸಲು ಸರ್ಕಾರಿ ಜಮೀನಿನಲ್ಲಿದ್ದು, ಜಮೀನಿಗೆ ಯಾವುದೇ ರೀತಿಯ ದಾಖಲೆಗಳಿಲ್ಲ. ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಚುನಾವಣಾ ಗುರುತುಚೀಟಿ ಯಾವುದೂ ಇವರ ಬಳಿ ಇಲ್ಲ. ಮಾನಸಿಕ ಖಿನ್ನತೆಗೆ ಸೂಕ್ತ ಚಿಕಿತ್ಸೆಗೂ ಹಣಕಾಸಿನ ಸಮಸ್ಯೆಯಿದೆ.

ಸುರೇಶ್‌ ಅವರ ಗುಡಿಸಲಿಗೆ ಬುಧವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ಇ. ಜಯರಾಂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಿ, ಸಾಮಾಜಿಕ ಕಾರ್ಯಕರ್ತ ರಾಜೇಶ್‌ ಭಟ್‌ ಸವಣಾಲು, ನ್ಯಾಯವಾದಿ ಕಿರಣ್‌ ಕುಮಾರ್‌, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಜಿಲ್ಲಾ ಸಹ ಸಂಚಾಲಕ ಶೇಖರ್‌ಎಲ್‌., ದಸಂಸ (ಅಂಬೇಡ್ಕರ್‌ ವಾದ) ಗ್ರಾಮ ಸಮಿತಿ ಸಂಚಾಲಕ ಚಂದ್ರಶೇಖರ ಉಪಸ್ಥಿತರಿದ್ದರು.

ಕ್ಯಾರ್‌ ಚಂಡಮಾರುತಕ್ಕೆ ಕರಾವಳಿ ತತ್ತರ : ಬಿರುಗಾಳಿ ಸಹಿತ ಭಾರಿ ಮಳೆ