ಮಂಗಳೂರು (ಅ.26) : ಕ್ಯಾರ್‌ ಚಂಡಮಾರುತಕ್ಕೆ ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಅಕ್ಷರಶಃ ತತ್ತರಿಸಿವೆ. 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಹತ್ತಾರು ಮನೆಗಳು, ನೂರಾರು ಮರಗಳು ಧರೆಗೆ ಉರುಳಿವೆ. ಸಮುದ್ರದಿಂದ ದೈತ್ಯಾಕಾರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಾವಿರಾರು ನಿರಾಶ್ರಿತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುಂಜಾರುಗಿರಿಯ ಸುಲೋಚನಾ(42) ಹಳ್ಳಕ್ಕೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದರೆ, ಉಡುಪಿ ತಾಲೂಕಿನ ಸಾಂತಜೆಡ್ಡು ಎಂಬಲ್ಲಿ ಮರ ಬಿದ್ದು ರವೀಂದ್ರ ಕುಲಾಲ್‌(38) ಗುರುವಾರ ರಾತ್ರಿ ಮೃತರಾಗಿದ್ದಾರೆ. ಕೊಡಗು ಜಿಲ್ಲೆ ಕುಪ್ಪಣಮಾಡ ಪೂಣಚ್ಚ(63) ಮರದ ಕೊಂಬೆ ಬಿದ್ದು ಸಾವನ್ನಪ್ಪಿದ್ದಾರೆ.

ಕಡಲಿನ ರುದ್ರ ನರ್ತನಕ್ಕೆ ಬೆಚ್ಚದ ಜನತೆ:

ಕ್ಯಾರ್‌ ಚಂಡಮಾರುತದಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ತಾಲೂಕಿನ ವಿವಿಧೆಡೆ ರಕ್ಕಸಗಾತ್ರದ ಅಲೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದ್ದು, ಜನರನ್ನು ಭಯಭೀತರನ್ನಾಗಿಸಿದೆ. ಜಿಲ್ಲೆಯಲ್ಲಿ ಒಟ್ಟು 12 ಪರಿಹಾರ ಕೇಂದ್ರ ಆರಂಭಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಅಂಕೋಲಾದ ಬೇಲೆಕೇರಿ ಬಳಿ ಕೇರಳದ ಎರಡು ಮೀನುಗಾರಿಕೆ ಬೋಟುಗಳು ಅಪಾಯದಲ್ಲಿ ಸಿಲುಕಿತ್ತು. ಆ ಬೋಟುಗಳಲ್ಲಿ 20 ಜನರಿದ್ದು, ಅವರನ್ನು ರಕ್ಷಿಸಲಾಗಿದೆ. ಮುರ್ಡೇಶ್ವರದ ಕಡಲತೀರದಲ್ಲಿ ಬೃಹತ್‌ ಅಲೆಗಳು ಅಪ್ಪಳಿಸುತ್ತಿದ್ದು, ಅಂಗಡಿ ಮಳಿಗೆಗಳು ಸಮುದ್ರಪಾಲಾಗುವ ಆತಂಕ ಎದುರಾಗಿದೆ.

ಭಟ್ಕಳದಲ್ಲಿ ಮರಗಳು ಉರುಳಿ 7 ಮನೆಗಳು ಕುಸಿದಿವೆ. ಕಾರವಾರದಲ್ಲಿ ನೀರು ನುಗ್ಗಿ 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಬಿರುಗಾಳಿಯ ಹೊಡೆತಕ್ಕೆ ಮರಗಳು, ರೆಂಬೆಕೊಂಬೆಗಳು ತರಗೆಲೆಗಳಂತೆ ಉದುರಿವೆ. ಕದ್ರಾ ಹಾಗೂ ಗೇರಸೊಪ್ಪ ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದ್ದು ಕಾಳಿ ಹಾಗೂ ಶರಾವತಿ ನದಿಗಳ ನೀರಿನ ಮಟ್ಟಹೆಚ್ಚಳವಾಗಿದೆ.

ಮುಂಗಾರು ಬೆಳೆ ಹೋಯ್ತು.. ಹಿಂಗಾರು ಕೈ ಹತ್ತಲಿಲ್ಲ! ಕಂಗಾಲಾದ ರೈತರು...

ದ.ಕ, ಉಡುಪಿ ಪ್ರಕ್ಷುಬ್ಧ:  ಬೆಳಗ್ಗೆ ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಿತ್ತು. ಆದರೆ, ಸಂಜೆ ವೇಳೆಗೆ ಧಾರಾಕಾರ ಮಳೆ ಸುರಿದಿದೆ. ಉಳ್ಳಾಲ ಮತ್ತು ಸಸಿಹಿತ್ಲಿ​ನಲ್ಲಿ ದೊಡ್ಡ ದೊಡ್ಡ ಅಲೆಗಳು ದಡಕ್ಕೆ ಅಪ್ಪಳಿಸಿವೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ 24.8 ಮೀಟರ್‌ ಎತ್ತರದಲ್ಲಿ ಹರಿಯುತ್ತಿದೆ. ವಿವಿಧೆಡೆ ಮರಗಳು ರಸ್ತೆಗೆ ಉರುಳಿಬಿದ್ದ ಪರಿಣಾಮ ಹಲವಾರುಕಡೆ ಗ್ರಾಮೀಣ ಭಾಗದಲ್ಲಿ ರಸ್ತೆ, ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ಭಾರೀ ಗಾಳಿಗೆ ಹಲವಾರು ಮನೆಗಳ ಹೆಂಚು ಹಾರಿಹೋಗಿವೆ. ಉಡುಪಿಯ ಮಲ್ಪೆ ಸಮುದ್ರ ಕಿನಾರೆಯಲ್ಲಿ ಭಾರೀ ಪ್ರಮಾಣದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಮಲೆನಾಡಲ್ಲೂ ಭಾರೀ ಗಾಳಿ ಮಳೆ:  ಕ್ಯಾರ್‌ ಚೆಂಡಮಾರುತದ ಪರಿಣಾಮ ಶುಕ್ರವಾರ ಮಲೆನಾಡು ಭಾಗದಲ್ಲಿಯೂ ಭಾರೀ ಪ್ರಮಾಣದಲ್ಲಿ ಗಾಳಿ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲಾದ್ಯಂತ ಬಿರುಗಾಳಿ ಮಳೆ ಕಂಡುಬಂದಿತು. ಹಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಮೂಡಿಗೆರೆ ತಾಲೂಕಿನಲ್ಲಿ ಮಳೆ ಆರ್ಭಟ ಮತ್ತಷ್ಟುಜೋರಾಗಿತ್ತು, ಹಲವಾರು ಮನೆಯ ಹೆಂಚು ಹಾರಿಹೋಗಿವೆ. ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲ, ಸುಂಟಿಕೊಪ್ಪ, ಸಿದ್ದಾಪುರ, ಚೆಟ್ಟಳ್ಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಯಿತು. ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗವಾದಲ್ಲಿ, ಹಾವೇರಿ, ಧಾರವಾಡದಲ್ಲೂ ಉತ್ತಮ ಮಳೆಯಾಗಿದೆ. ಆದರೆ, ಬೆಳಗಾವಿ ಮತ್ತು ಮಹಾರಾಷ್ಟ್ರ ಘಟ್ಟಪ್ರದೇಶದಲ್ಲಿ ಮಳೆ ಮತ್ತಷ್ಟುಕುಗ್ಗಿದೆ.

ವಿವಿಧೆಡೆ ಶಾಲಾ ಕಾಲೇಜಿಗೆ ರಜೆ:  ದಕ್ಷಿಣ ಕನ್ನಡ, ಉಡುಪಿ ಜಿಲ್ಲಾದ್ಯಂತ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.