Asianet Suvarna News Asianet Suvarna News

ಕನ್ನಡ ಕಟ್ಟಿದವರು: ಉಚಿತವಾಗಿ ಕನ್ನಡ ಸುದ್ದಿ ಪತ್ರಿಕೆ ಹಂಚುವ ಪೇಪರ್ ಆಚಾರ್ಯ!

ಕಳೆದ ಮೂರು ದಶಕಗಳಿಂದ ಕುಂದಾಪುರದಲ್ಲಿ ಪತ್ರಿಕಾ ವಿತರಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಆಚಾರ್ಯರ ಉಚಿತ ಪತ್ರಿಕೆ ವಿತರಣಾ ಕಾಯಕ ಒಂಭತ್ತು ವರ್ಷ ತುಂಬಿ ಇದೀಗ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ತಮ್ಮ ತಂದೆ- ತಾಯಿ ಆಸ್ಪತ್ರೆಯಲ್ಲಿದ್ದಾಗ ತಮಗಾದ ಮಾನಸಿಕ ಒತ್ತಡದ ಅನುಭವವೇ ಆಚಾರ್ಯರು ಉಚಿತ ಪತ್ರಿಕೆ ಹಂಚಲು ಕಾರಣ ಎನ್ನೋದು ವಿಶೇಷ.

 

kundapur paper acharya spreads news with love
Author
Bangalore, First Published Nov 11, 2019, 10:54 AM IST

ಇತ್ತೀಚಿನ ದಿನಗಳಲ್ಲಿ ಕನ್ನಡ ಉಳಿವಿನ ವಿಚಾರದಲ್ಲಿ ಕೇವಲ ಪ್ರಚಾರಕ್ಕಾಗಿ ಹಪಹಪಿಸುವ ಮಂದಿ ನಮ್ಮ ನಡುವೆ ಹಲವರಿದ್ದಾರೆ. ಆದರೆ ಇಲ್ಲೊಬ್ಬ ಅಪ್ಪಟ ಕನ್ನಡಪ್ರೇಮಿ ಕನ್ನಡ ಭಾಷೆ ಅಳಿವು- ಉಳಿವಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ. ತಮ್ಮ ದುಡಿಮೆಯ ಒಂದು ಪಾಲನ್ನು ಕನ್ನಡ ಸೇವೆಗಾಗಿಯೇ ಮೀಸಲಿಟ್ಟ ಇವರು ಸದ್ದಿಲ್ಲದೆ ಸುದ್ದಿ ಹಂಚುವ ಅಪರೂಪದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಹೌದು.. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ರೋಗಿಗಳು ಕಾಯಿಲೆ, ಔಷಧಿ, ಇಂಜೆಕ್ಷನ್ ಅಂತೆಲ್ಲಾ ಜಂಜಾಟದಲ್ಲಿರುತ್ತಾರೆ. ಇವರನ್ನು ನೋಡಿಕೊಳ್ಳಲೆಂದು ಆಸ್ಪತ್ರೆಯಲ್ಲಿರುವ ಮನೆಯವರು, ಬಂಧುಗಳು ಸಮಯ ಹೇಗೆ ಕಳೆಯುವುದೆಂದು ಆಸ್ಪತ್ರೆಯ ಹೊರಾಂಗಣದಲ್ಲಿ ಆಚಿಂದೀಚೆಗೆ ತಿರುಗುತ್ತಿರುತ್ತಾರೆ. ಆದರೆ ಇವೆಲ್ಲದಕ್ಕೂ ರಿಲ್ಯಾಕ್ಸ್ ನೀಡಲು ಇಲ್ಲೊಬ್ಬ ಕನ್ನಡಪ್ರೇಮಿ ಹೊಸ ಔಷಧಿಯೊಂದನ್ನು ಪರಿಚಯಿಸಿ ಯಶಸ್ವಿಯಾಗಿದ್ದಾರೆ. ಅದುವೇ ‘ಓದು’. ಆಸ್ಪತ್ರೆಯಲ್ಲಿರುವ ಬಡರೋಗಿಗಳಿಗೆ, ಶುಶ್ರೂಷಕರಿಗೆ ಉಚಿತವಾಗಿ ಕನ್ನಡ ದಿನಪತ್ರಿಕೆ ಹಂಚುವ ಮೂಲಕ ಇವರು ರೋಗಿಗಳಿಗೆ ಮನೋಲ್ಲಾಸ ನೀಡುತ್ತಿದ್ದಾರೆ.

kundapur paper acharya spreads news with love

ಕುಂದಾಪುರದಲ್ಲಿ ಗಂಗೊಳ್ಳಿ ಶಂಕರ್ ಆಚಾರ್ಯರ ಹೆಸರು ಎಲ್ಲರಿಗೂ ಚಿರಪರಿಚಿತ. ಕುಂದಾಪುರದ ಜನರೆಲ್ಲಾ ಇವರನ್ನು ಪೇಪರ್ ಆಚಾರ್ಯರು ಎಂದೇ ಕರೆಯುವುದುಂಟು. 10ನೇ ತರಗತಿಯ ಬಳಿಕ ಶಂಕರ ಆಚಾರ್ಯರ ಕೈ ಹಿಡಿದಿದ್ದೇ ಈ ಪೇಪರ್ ಏಜೆನ್ಸಿ. ಆಚಾರ್ಯರು ದಣಿವರಿಯದೆ ಸಾಗಿ ಬಂದ ಹಾದಿ ಬರೋಬ್ಬರಿ 34 ವರ್ಷ. 1985ರಲ್ಲಿ ಕುಂದಾಪುರದ ಮುಖ್ಯರಸ್ತೆಯ ಹಳೆ ಬಸ್‌ನಿಲ್ದಾಣದ ಬಳಿ ಆಚಾರ್ಯ ಪುಸ್ತಕ ಮಳಿಗೆ ಪ್ರಾರಂಭಿಸಿದ ಆಚಾರ್ಯರು ವಾರಪತ್ರಿಕೆ, ದಿನಪತ್ರಿಕೆಗಳು, ಹೆಸರಾಂತ ಲೇಖಕರ ಪುಸ್ತಕಗಳನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಿತರಿಸುತ್ತಿದ್ದಾರೆ.

ಕನ್ನಡ ಕಟ್ಟಿದವರು: ಯಕ್ಷ ರಂಗದ ಜನಪ್ರಿಯ ತಾರೆ ಪಟ್ಲ ಸತೀಶ್ ಶೆಟ್ಟಿ!

ತಮ್ಮ ಪುಸ್ತಕ ಮಳಿಗೆ ಆರಂಭಗೊಂಡು 25 ವರ್ಷ ಕಳೆದ ಹಿನ್ನೆಲೆಯಲ್ಲಿ 2010ರ ನ.1ರ ಕನ್ನಡ ರಾಜ್ಯೋತ್ಸವದಂದು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕನ್ನಡಪ್ರಭವೂ ಸೇರಿದಂತೆ ಬರೋಬ್ಬರಿ ೩೫ಕ್ಕೂ ಅಧಿಕ ಪತ್ರಿಕೆಗಳನ್ನು ಉಚಿತವಾಗಿ ವಿತರಿಸುವ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಕುಂದಾಪುರದಲ್ಲಿ ಪತ್ರಿಕಾ ವಿತರಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಆಚಾರ್ಯರ ಉಚಿತ ಪತ್ರಿಕಾ ವಿತರಣಾ ಕಾಯಕಕ್ಕೆ ಒಂಭತ್ತು ವರ್ಷ ತುಂಬಿ ಇದೀಗ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ತಮ್ಮ ತಂದೆ- ತಾಯಿ ಆಸ್ಪತ್ರೆಯಲ್ಲಿದ್ದಾಗ ತಮಗಾದ ಮಾನಸಿಕ ಒತ್ತಡದ ಅನುಭವವೇ ಆಚಾರ್ಯರು ಉಚಿತ ಪತ್ರಿಕೆ ಹಂಚಲು ಕಾರಣ ಎನ್ನೋದು ವಿಶೇಷ.

kundapur paper acharya spreads news with love

‘ಸರ್ಕಾರದ ಕೆಲಸ ದೇವರ ಕೆಲಸ’, ‘ದಯವಿಟ್ಟು ನೀವು ಓದಿ,ಬೇರೆಯವರಿಗೆ ಓದಲು ಅವಕಾಶ ಮಾಡಿಕೊಡಿ’: ಕುಂದಾಪುರದ ಸರ್ಕಾರಿ ಆಸ್ಪತ್ರೆ, ಮಿನಿ ವಿಧಾನಸೌಧ, ಸರ್ಕಾರಿ ಬಸ್ ನಿಲ್ದಾಣ, ಹಾಸ್ಟೆಲ್, ಅಂಚೇಕಚೇರಿ, ವೃದ್ಧಾಶ್ರಮಗಳಿಗೆ ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು ತಮ್ಮ ಸ್ಕೂಟರ್ ಮೇಲೆ ಪೇಪರ್ ಮೂಟೆ ಹಾಕಿಕೊಂಡು ದಿನನಿತ್ಯ ತಾವೇ ಸ್ವತಃ ಸುಮಾರು 150ಕ್ಕೂ ಮಿಕ್ಕಿ ಉಚಿತವಾಗಿ ಪೇಪರ್ ಹಾಕಿ ಬರುವ ಆಚಾರ್ಯರ ಕನ್ನಡ ಪ್ರೇಮವನ್ನು ಮೆಚ್ಚಲೇಬೆಕು. ಆಚಾರ್ಯರು ಉಚಿತವಾಗಿ ವಿತರಿಸುವ ದಿನಪತ್ರಿಕೆಯಲ್ಲಿ ಕನ್ನಡಪ್ರಭವೂ ಒಂದು. ತಾವು ಉಚಿತವಾಗಿ ನೀಡುವ ಪೇಪರ್ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’, ‘ದಯವಿಟ್ಟು ನೀವು ಓದಿ, ಬೇರೆಯವರಿಗೆ ಓದಲು ಅವಕಾಶ ಮಾಡಿಕೊಡಿ’ ಎಂದು ಗೌರವ ಪ್ರತಿಗಳ ಮೇಲೆ ಬರೆಯುವ ಮೂಲಕ ಓದುಗರನ್ನು ಆಕರ್ಷಿಸುತ್ತಿದ್ದಾರೆ.

ಸಮಾಜ ಸೇವೆಗೂ ಸೈ

ಮೊದಲು ಎಂಟು ಖಾಸಗಿ ಆಸ್ಪತ್ರೆಗಳಿಗೆ ಕಮಿಷನ್ ಹಣ ಪಡೆಯದೆ ಪತ್ರಿಕೆ ವಿತರಿಸುತ್ತಿದ್ದರು. ಇದೀಗ ಬಡಜನರು ಬಂದು ಕೂರುವ ಸ್ಥಳಗಳಲ್ಲಿ ದಿನವೂ ೧೫೦ಕ್ಕೂ ಅಧಿಕ ಪೇಪರ್ ಪ್ರತಿಗಳನ್ನು ಉಚಿತವಾಗಿ ನೀಡುವ ಮೂಲಕ ತನ್ನ ಸಂಪಾದನೆಯ ಒಂದು ಭಾಗವನ್ನು ಕನ್ನಡ ಸೇವೆಗಾಗಿಯೇ ಆಚಾರ್ಯರು ಮೀಸಲಿಟ್ಟಿದ್ದಾರೆ. ಅಲ್ಲದೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳು ಪತ್ರಿಕೆಯ ಬಿಲ್ ಹಣದಲ್ಲಿ ಡಿಪಾಸಿಟ್ ಮಾಡಿ ಆ ಹಣದಲ್ಲಿ ಬಡವರಿಗೆ ಚಿಕಿತ್ಸೆ ನೀಡುವ ಮೂಲಕ ಆಚಾರ್ಯರು ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

kundapur paper acharya spreads news with love

ಮನಸ್ಸು ಉಲ್ಲಾಸವಾಗಿರಲು ಓದು ಅಗತ್ಯ

ಕಾಯಿಲೆಗಿಂತಲೂ ಕಾಯಿಲೆ ಭಯವೇ ರೋಗಿಗಳನ್ನು ಹೆಚ್ಚು ರೋಗಗ್ರಸ್ಥ ಮಾಡುತ್ತದೆ. ಅದಕ್ಕೆ ಮನಸ್ಸನ್ನು ಸದಾ ಉಲ್ಲಾಸಕರವಾಗಿಟ್ಟುಕೊಳ್ಳಬೇಕು. ಹಾಗಾದರೆ ದಿನನಿತ್ಯವೂ ಓದಬೇಕು. ಅದಕ್ಕಾಗಿಯೇ ನಾನು ಕನ್ನಡ ಪತ್ರಿಕೆಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಕನ್ನಡ ಪತ್ರಿಕೆಗಳನ್ನು ಉಚಿತವಾಗಿ ಹಂಚುತ್ತಿದ್ದೇನೆ ಎನ್ನುತ್ತಾರೆ ಶಂಕರ್ ಆಚಾರ್ಯರು.

ಹಿರಿಯರಿಗೆ ರಿಯಾಯಿತಿ

ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಉಚಿತವಾಗಿ ಪತ್ರಿಕೆ ವಿತರಿಸುವುದು ಮಾತ್ರವಲ್ಲದೆ ಹಿರಿಯ ನಾಗರಿಕರಿಗೆ (60 ವರ್ಷಕ್ಕಿಂತ ಮೇಲ್ಪಟ್ಟವರು) ಶೇಕಡ 50ರ ರಿಯಾಯಿತಿಯಲ್ಲಿ ಪತ್ರಿಕೆ ಮಾರಾಟ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಹಿರಿಯ ನಾಗರಿಕರು ಈ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಆಚಾರ್ಯರ ಕನ್ನಡ ಸೇವೆಗೆ ಇನ್ನೊಂದು ಗರಿ.

kundapur paper acharya spreads news with love

ಆಚಾರ್ಯರು ನಡೆದು ಬಂದ ದಾರಿ

ಶಂಕರ ಆಚಾರ್ಯರ ತಂದೆ ಕೃಷ್ಣಾನಂದ ಆಚಾರ್ಯ 1960ರಲ್ಲಿ ಪೇಪರ್ ಸ್ಟಾಲ್ ಆರಂಭಿಸಿದ್ದರು. 1977ರಲ್ಲಿ ಪೇಪರ್ ಹಾಕುವ ಹುಡುಗ ಬಾರದಿದ್ದಾಗ 13ರ ಬಾಲಕ ಶಂಕರ ಆಚಾರ್ಯರು ಕುಂದಾಪುರದ 93 ಮನೆಗಳಿಗೆ ನಡೆದುಕೊಂಡೇ ಹೋಗಿ ಪತ್ರಿಕೆಗಳನ್ನು ಹಂಚಿ ಬಂದಿದ್ದರು. ಎಸೆಸ್ಸೆಲ್ಸಿ ಮುಗಿಸಿದ ಆಚಾರ್ಯರು 1984ರಲ್ಲಿ ಕುಂದಾಪುರದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದರು. ದಿನಕ್ಕೆ 22 ರುಪಾಯಿ ಸಂಬಳ ಪಡೆಯುತ್ತಿದ್ದ ಶಂಕರ ಆಚಾರ್ಯರನ್ನು ತಂದೆ ಕೃಷ್ಣಾನಂದ ಆಚಾರ್ಯ ಅಲ್ಲಿಂದ ಕೆಲಸ ಬಿಡಿಸಿ ಅವರನ್ನು ತಮ್ಮ ಅಂಗಡಿಯಲ್ಲೇ ಕುಳ್ಳಿರಿಸಿ ದಿನಕ್ಕೆ 50 ರುಪಾಯಿ ಸಂಬಳ ನೀಡಿದರು. ಮದುವೆಯಾದ ಬಳಿಕ ಕೃಷ್ಣಾನಂದ ಆಚಾರ್ಯರು ಮಗನಿಗೆ ಅಂಗಡಿಯನ್ನೇ ವಹಿಸಿಕೊಟ್ಟರು. ತಂದೆ ಹಾಕಿಕೊಟ್ಟ ಅಡಿಪಾಯವನ್ನೇ ಇನ್ನಷ್ಟು ಭದ್ರಪಡಿಸಿಕೊಂಡ ಆಚಾರ್ಯರು ಇದೀಗ ಕುಂದಾಪುರದ ಪ್ರಸಿದ್ಧ ಪತ್ರಿಕಾ ವಿತರಕರಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ ಕಟ್ಟಿದವರು: ಐಸೆಲ್ ಟೆಕ್ನಾಲಜಿಸ್‌ನಿಂದ ಕನ್ನಡ ಮಕ್ಕಳಿಗೆ ಪಾಠ!

ಒಂದು ದಿನವೂ ಪೇಪರ್‌ಗೆ ರಜೆ ನೀಡಿಲ್ಲ

ಒಂಬತ್ತು ವರ್ಷಗಳಿಂದ ಉಚಿತವಾಗಿ ಪೇಪರ್ ಹಂಚುತ್ತಿರುವ ಆಚಾರ್ಯರು ದಿನಪತ್ರಿಕೆಯ ರಜಾದಿನಗಳನ್ನು ಬಿಟ್ಟರೆ ಒಂದು ದಿನವೂ ಆಸ್ಪತ್ರೆಗೆ ಹಾಕುವ  ಪತ್ರಿಕೆಗಳನ್ನು ತಪ್ಪಿಸಿಲ್ಲ. ಆಚಾರ್ಯರು ಬೇರೆಡೆ ಹೋದರೆ ಅವರ ಪುಸ್ತಕ ಮಳಿಗೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಚಂದ್ರ ಅವರು ಆಚಾರ್ಯರ ಕೆಲಸವನ್ನು ನಿಭಾಯಿಸುತ್ತಾರೆ. ಒಂದು ವಿಶೇಷವೆಂದರೆ ಅಪರೂಪಕ್ಕೊಮ್ಮೆ ಆಚಾರ್ಯರು ಇಲ್ಲದ ವೇಳೆಯಲ್ಲಿ ಪೇಪರ್ ಹಾಕುವ ಚಂದ್ರ ಅವರು ಆಚಾರ್ಯರ ಬಳಿ ಯಾವುದೇ ಸಂಬಳವನ್ನು ಪಡೆಯುವುದಿಲ್ಲ. ಈ ಮೂಲಕ ಚಂದ್ರ ಅವರು ಆಚಾರ್ಯರ ಅಕ್ಷರಕ್ರಾಂತಿಗೆ ಕೈಜೋಡಿಸಿದ್ದಾರೆ. 

Follow Us:
Download App:
  • android
  • ios