ಕನ್ನಡ ಕಟ್ಟಿದವರು: ಐಸೆಲ್ ಟೆಕ್ನಾಲಜಿಸ್‌ನಿಂದ ಕನ್ನಡ ಮಕ್ಕಳಿಗೆ ಪಾಠ!
ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸುವುದು ಈ ಕ್ಷಣದ ತುರ್ತು. ಅಂಥದ್ದೊಂದು ಮಹತ್ವದ ಕೆಲಸವನ್ನು ಹುಬ್ಬಳ್ಳಿಯ ಐಸೆಲ್ ಟೆಕ್ನಾಲಜೀಸ್ ಕಂಪನಿ ಮಾಡುತ್ತಿದೆ. ಅಲ್ಲಿನ ಟೆಕ್ಕಿಗಳು ಹುಬ್ಬಳ್ಳಿಯ ಜೋಳದ ಓಣಿಯಲ್ಲಿನ ಸಹಸ್ರಾರ್ಜುನ ಕನ್ನಡ ಶಾಲೆಯ ಸ್ವರೂಪವನ್ನೇ ಬದಲಿಸಿದ್ದಾರೆ. ಕನ್ನಡ ಶಾಲೆ ಉಳಿಸಿ ಕನ್ನಡಕ್ಕೆ ಶಕ್ತಿ ತುಂಬಿದ್ದಾ.
- ಶಿವಾನಂದ ಗೊಂಬಿ, ಹುಬ್ಬಳ್ಳಿ
ಇದು ಹೆಸರಿಗಷ್ಟೇ ಕನ್ನಡ ಪ್ರಾಥಮಿಕ ಶಾಲೆ. ಆದರೆ ಯಾವುದೇ ಆಂಗ್ಲಭಾಷೆಯ ವಿದ್ಯಾರ್ಥಿಗಳಿಗೆ ಕಮ್ಮಿಯಿಲ್ಲದಂತೆ ಅರಳು ಹುರಿದಂತೆ ಇಂಗ್ಲಿಷ್ ಭಾಷೆಯಲ್ಲಿ ಇಲ್ಲಿನ ಮಕ್ಕಳು ಮಾತಾಡ್ತಾರೆ. ಪಾಠದಲ್ಲಿನ ವಿಜ್ಞಾನ ವಿಭಾಗದ ಪ್ರಯೋಗಗಳನ್ನು ಸಲೀಸಾಗಿ ಮಾಡುವ ಈ ವಿದ್ಯಾರ್ಥಿಗಳು ಗಣಿತದಲ್ಲಿ ಲೆಕ್ಕಗಳನ್ನು ಅಷ್ಟೇ ಪಟ ಪಟನೇ ಮಾಡುತ್ತಾರೆ!
ಮನೆ ಮನೆಗೆ ಕನ್ನಡ ಕೃತಿ ಹೊತ್ತು ಮಾರುವ ಶಿಕ್ಷಕ ಸಂಗಮೇಶ ತಮ್ಮನಗೌಡ
ಇದು ಹುಬ್ಬಳ್ಳಿಯ ಜೋಳದ ಓಣಿಯಲ್ಲಿನ ಸಹಸ್ರಾರ್ಜುನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಿಶೇಷ. ಈ ಶಾಲೆಗೆ ಕೂಲಿಕಾರ್ಮಿಕರು, ಬಡ ಕುಟುಂಬದ ಮಕ್ಕಳೇ ಹೆಚ್ಚಾಗಿ ಇಲ್ಲಿಗೆ ಬರುವುದು. ಎಲ್‌ಕೆಜಿಯಿಂದ ೭ನೇ ತರಗತಿವರೆಗಿನ ಶಾಲೆಯಿದು. ಬರೋಬ್ಬರಿ 285 ವಿದ್ಯಾರ್ಥಿಗಳಿದ್ದಾರೆ. ಯಾವುದೇ ಸಿಬಿಎಸ್‌ಸಿ ಶಾಲೆಯಲ್ಲಿ ದೊರೆಯುವ ಶಿಕ್ಷಣಕ್ಕಿಂತ ಇಲ್ಲಿನ ಶಿಕ್ಷಣ ಕಡಿಮೆಯೇನಿಲ್ಲ. ಇದಕ್ಕೆ ಕಾರಣ ಟೆಕ್ಕಿಗಳು.
ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಭಾಷೆಯ ಸಮಸ್ಯೆ ಸಾಕಷ್ಟಿರುತ್ತದೆ. ಕನ್ನಡ ಮಾಧ್ಯಮದಲ್ಲೇ ಕಲಿತಿರುವ ನನಗೆ ಇದರ ಅನುಭವವಿದೆ. ಮಕ್ಕಳಿದ್ದಾಗಲೇ ಸರಿಯಾದ ಶಿಕ್ಷಣ ದೊರೆತರೆ ಮುಂದೆ ಸಮಾಜಕ್ಕೆ ದೊಡ್ಡ ಕೊಡುಗೆಯಾಗುತ್ತಾರೆ ಎಂಬುದು ನಮ್ಮ ಉದ್ದೇಶ. - ಪ್ರಸಾದ ಪಾಟೀಲ, ಸಿಇಓ, ಐಸೆಲ್ ಕಂಪನಿ
ಹೌದು! ಇಲ್ಲಿನ ಐಸೆಲ್ ಟೆಕ್ನಾಲಜಿಸ್ ಸಾಫ್ಟ್‌ವೇರ್ ಕಂಪನಿಯ ಟೆಕ್ಕಿಗಳು ಪ್ರತಿ ಶನಿವಾರ ಇಲ್ಲಿ ಎರಡು ಗಂಟೆ ಪಾಠ ಬೋಧನೆ ಮಾಡುತ್ತಾರೆ. ಪ್ರತಿ ಶನಿವಾರ 4-5ಜನ ಟೆಕ್ಕಿಗಳು ಇಲ್ಲಿಗೆ ಬಂದು ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯ ಹೇಳಿಕೊಡುತ್ತಾರೆ. 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಈ 3 ವಿಷಯಗಳ ಪಾಠ ಬೋಧನೆ ಮಾಡಿದರೆ, ಅದಕ್ಕಿಂತ ಸಣ್ಣ ಮಕ್ಕಳೊಂದಿಗೆ ಆಟ ಆಡುತ್ತಾ ಪಾಠ ಮಾಡುತ್ತಾರೆ. ಹಾಗಂತ ಇವರು ಎಲ್ಲ ಶಿಕ್ಷಕರಂತೆ ಪಠ್ಯದಲ್ಲಿನ ಪಾಠವನ್ನಷ್ಟೇ ಮಾಡಲ್ಲ. ಬದಲಿಗೆ ವಿಜ್ಞಾನದ ಪಾಠಗಳನ್ನು ಪ್ರಯೋಗಗಳ ಮಾಡುವ ಮೂಲಕ ಹೇಳಿಕೊಡುತ್ತಾರೆ. ಪ್ರಯೋಗಗಳಿಗೆ ಬೇಕಾಗುವ ಪರಿಕರಗಳನ್ನು ತಾವೇ ತೆಗೆದುಕೊಂಡು ಬರುತ್ತಾರೆ. ಈ ಕಾರಣಕ್ಕಾಗಿಯೇ ಭೌತಶಾಸ್ತ್ರ, ರಸಾಯನ ಶಾಸ್ತ್ರದ ಎಲ್ಲ ಪ್ರಯೋಗದ ಪರಿಕರಗಳು ಇಲ್ಲುಂಟು. ಪ್ರಯೋಗ ಮಾಡಿ ತೋರಿಸುವ ಮೂಲಕ ಪಾಠ ಮಾಡುವುದರಿಂದ ಮಕ್ಕಳ ಮನಸಿನಲ್ಲಿ ಆ ಪಾಠ ಆಳಕ್ಕೆ ಇಳಿದು ಬೇಗ ಅರ್ಥವಾಗುತ್ತದೆ. ಜತೆಗೆ ಮಕ್ಕಳಿಂದಲೂ ಪ್ರಯೋಗಗಳನ್ನು ಮಾಡಿಸುತ್ತಾರೆ.
ಸದ್ದಿಲ್ಲದೇ ಸೇವೆ:
ಇನ್ನು ಇಂಗ್ಲಿಷ್ ಪಠ್ಯವನ್ನಂತೂ ಸಂಭಾಷಣೆಯಂತೆ ಹೇಳಿಕೊಡುತ್ತಾರೆ. ನಂತರ ಮಕ್ಕಳಿಂದಲೇ ಸಂಭಾಷಣೆ ಮಾಡಿಸುತ್ತಾರೆ. ಇಂಗ್ಲಿಷ್ ಭಾಷೆ ಬಗ್ಗೆ ಮಕ್ಕಳಲ್ಲಿನ ಭಯ ಹೋಗಲಾಡಿಸುವ ಪ್ರಯತ್ನ ಈ ಟೆಕ್ಕಿಗಳದ್ದು. ಇದರ ಪರಿಣಾಮವಾಗಿ ಕನ್ನಡ ಮಾಧ್ಯಮದ ಶಾಲೆಯಾದರೂ ಪಟಪಟನೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ ಇಲ್ಲಿನ ಮಕ್ಕಳು.ಈ ಮೂಲಕ ಕನ್ನಡ ಮಕ್ಕಳಲ್ಲಿರುವ ಆಂಗ್ಲಭಾಷೆ ಬಗ್ಗೆ ಕೀಳರಿಮೆ ಹೋಗಲಾಡಿಸುವ ಮೂಲಕ ಕನ್ನಡಾಂಬೆಗೆ ಸದ್ದಿಲ್ಲದೇ ತಮ್ಮದೇ ಬಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಚಿತ್ರಕಲೆ, ಕ್ರಾಫ್ಟ್, ಗ್ಲಾಸ್ ಪೇಟಿಂಗ್ ಹೀಗೆ ಬೇರೆ ವಿಷಯಗಳ ಬಗ್ಗೆಯೂ ಮಕ್ಕಳಿಗಾಗಿ ಈ ಟೆಕ್ಕಿಗಳು ಕಾರ್ಯಾಗಾರ ನಡೆಸಿ ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರಹಾಕಲು ಶ್ರಮಿಸುತ್ತಿದ್ದಾರೆ.
100 ಕ್ಕೂ ಹೆಚ್ಚು ಜನ ಸಿಬ್ಬಂದಿ ಇಲ್ಲಿದ್ದಾರೆ. ಪ್ರತಿವಾರಕ್ಕೆ ಎರಡ್ಮೂರು ಜನ ಶಾಲೆಯಲ್ಲಿ ಪಾಠ ಮಾಡುತ್ತಾರೆ. 4 ವರ್ಷಗಳಿಂದ ನಾವು ಆ ಶಾಲೆಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದೇವೆ. ಇದೀಗ ಮತ್ತೆ ಇನ್ನಷ್ಟು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಕಲಿಸುವ ಯೋಚನೆ ಇದೆ.- ಸೂರಜ್ ಪ್ರಭು, ಕಂಪನಿ ಮುಖ್ಯಸ್ಥ
ಏಕೀ ಸೇವೆ?:
ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಕನ್ನಡ ಮಾಧ್ಯಮಗಳಲ್ಲಿ ಕಲಿಯುವ ಮಕ್ಕಳಿಗೆ ಗಣಿತ, ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯದ ಬಗ್ಗೆ ಒಂದಿಷ್ಟು ಭಯ ಜಾಸ್ತಿ. ಯಾರಾದರೂ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಅವರೊಂದಿಗೆ ಮಾತನಾಡುವುದನ್ನೇ ಇಲ್ಲಿನ ಮಕ್ಕಳು ಬಿಡುವುದು ಹೆಚ್ಚು. ಹಾಗೋಹೀಗೋ ಮಾಡಿ ಪಿಯುಸಿ, ಪದವಿ ಮಾಡಿ ಓದು ಬಿಡುತ್ತಾರೆ. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ಕಳೆಯುತ್ತಾರೆ. ಹಾಗಂತ ಎಲ್ಲರೂ ಇದೇ ರೀತಿ ಇರಲ್ಲ. ಆದರೆ ಬಹುತೇಕ ಯುವಕರು ಸಣ್ಣಪುಟ್ಟ ಕೆಲಸಗಳಲ್ಲಿ ಜೀವನ ಸಾಗಿಸುತ್ತಾರೆ. ಅದರ ಬದಲಿಗೆ ಮಕ್ಕಳಿದ್ದಾಗ ಅವರಿಗೆ ಸರಿಯಾಗಿ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ಭಾಷೆಯ ಗುಣಮಟ್ಟದ ಶಿಕ್ಷಣ ನೀಡಿದರೆ ಡಾಕ್ಟರ್, ಎಂಜಿನಿಯರ್, ವಿಜ್ಞಾನಿಗಳೋ ಹೀಗೆ ದೊಡ್ಡ ದೊಡ್ಡ ಹುದ್ದೆಗೇರಬಹುದು. ಈ ನಿಟ್ಟಿನಲ್ಲಿ ಈ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸುತ್ತಾರೆ ಟೆಕ್ಕಿ ಮಹೇಶ.
ಐಸೆಲ್ ಕಂಪನಿಯ ಎಂಜಿನಿಯರ್‌ಗಳು ನಮ್ಮ ಶಾಲೆಗೆ ಬಂದು ಪಾಠ ಮಾಡುತ್ತಿರುವುದು ಬಹಳ ಅನುಕೂಲವಾಗಿದೆ. ಮಕ್ಕಳು ಬಹಳಷ್ಟು ಸುಧಾರಿಸಿದ್ದಾರೆ. ಮೂರು ಭಾಷೆಗಳಲ್ಲಿ ಯಾವುದೇ ಅಂಜಿಕೆ ಈಗ ಮಕ್ಕಳಲ್ಲಿ ಕಂಡುಬರುವುದಿಲ್ಲ.- ರಾಜೇಶ್ವರಿ ಜಡಿ, ಮುಖ್ಯೋಪಾಧ್ಯಾಯರು, ಸಹಸ್ರಾರ್ಜುನ ಪ್ರಾಥಮಿಕ ಶಾ
ಏನಿದು ಐಸೆಲ್ ಕಂಪನಿ?
ಇಲ್ಲಿನ ಐಟಿ ಪಾರ್ಕ್‌ನಲ್ಲಿ ‘ಐಸೆಲ್ ಟೆಕ್ನಾಲಜಿಸ್’ ಎಂಬ ಸಾಫ್ಟ್‌ವೇರ್ ಕಂಪನಿಯಿದೆ. ಪ್ರಸಾದ ಪಾಟೀಲ, ಮಹೇಶ ಹಾಗೂ ಸೂರಜ್‌ಪ್ರಭು ಎಂಬ ಮೂವರು ಯುವಕರು ಸೇರಿಕೊಂಡು 8 ವರ್ಷಗಳ ಹಿಂದೆ ಈ ಕಂಪನಿ ಆರಂಭಿಸಿದ್ದಾರೆ. ಹೆಲ್ತ್‌ಕೇರ್‌ಗೆ ಸಂಬಂಧಪಟ್ಟ ಸಾಫ್ಟ್‌ವೇರ್ ಕಂಪನಿ ಇದಾಗಿದ್ದು, ಈ ವಿಷಯಕ್ಕೆ ಸಂಬಂಧಪಟ್ಟಂತೆ ಆ್ಯಪ್ ಸಿದ್ಧಪಡಿಸಿದೆ. ಈ ಆ್ಯಪ್ ಪ್ಯಾರಾಸೋಟಿಕಲ್ ಕಂಪನಿಗಳು ಬಳಕೆ ಮಾಡಿಕೊಳ್ಳುತ್ತವೆ. ಸರಳವಾಗಿ ಹೇಳಬೇಕೆಂದರೆ ‘ಔಷಧಿಗಳ ವಿಶ್ಲೇಷಣೆ’ ಮಾಡುವ ಸಾಫ್ಟ್‌ವೇರ್ ಕಂಪನಿಯಿದು. ಮೂವರಿಂದ ಹುಬ್ಬಳ್ಳಿಯಲ್ಲಿ ಸಣ್ಣದಾಗಿ ಪ್ರಾರಂಭವಾದ ಕಂಪನಿಯಲ್ಲಿ ಸದ್ಯ 100ಕ್ಕೂ ಹೆಚ್ಚು ಜನ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ಬಾಸ್ಟನ್‌ಗಳಲ್ಲೂ ತನ್ನ ಕಚೇರಿಯನ್ನು ಹೊಂದಿದೆ. ಮೂರು ಕಚೇರಿಗಳನ್ನು ಹೊಂದಿದ್ದರೂ ಹುಬ್ಬಳ್ಳಿಯನ್ನೇ ಕೇಂದ್ರ ಕಚೇರಿಯನ್ನಾಗಿ ಮಾಡಿಕೊಂಡಿದೆ. ಜಪಾನ್, ಯುರೋಪ, ಅಮೆರಿಕ, ಇಂಡಿಯಾ ಸೇರಿದಂತೆ ವಿವಿಧೆಡೆಯ ಪ್ಯಾರಾ ಸೋಟಿಕಲ್ ಕಂಪನಿಗಳು ಈ ಕಂಪನಿಯ ಗ್ರಾಹಕವಾಗಿವೆ.