Asianet Suvarna News Asianet Suvarna News

ಮಂಗಳೂರು: ಕಟೀಲು ಯಕ್ಷಗಾನ ಮೇಳಗಳ ನಿರ್ವಹಣೆ ಏಲಂ

ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ನಡೆಸಲ್ಪಡುತ್ತಿರುವ ಆರು ಯಕ್ಷಗಾನ ಮೇಳಗಳ ನಿರ್ವಹಣೆಯನ್ನು ಏಲಂ ಪ್ರಕ್ರಿಯೆ ಮೂಲಕ ವಹಿಸುವಂತೆ ರಾಜ್ಯ ಮುಜರಾಯಿ ಆಯುಕ್ತರು ಆದೇಶ ನೀಡಿದ್ದಾರೆ. ಇದರೊಂದಿಗೆ ಕಟೀಲು ಯಕ್ಷಗಾನ ಮೇಳದ ತಿರುಗಾಟ ಮುಂದಿನ ದಿನಗಳಲ್ಲಿ ಸರ್ಕಾರದ ಸುಪರ್ದಿಯಲ್ಲಿ ನಡೆಯುವುದು ಬಹುತೇಕ ನಿಶ್ಚಿತಗೊಂಡಂತಾಗಿದೆ.

kateelu mela Auction for maintenance
Author
Bangalore, First Published Nov 3, 2019, 12:26 PM IST

ಮಂಗಳೂರು(ನ.03): ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ನಡೆಸಲ್ಪಡುತ್ತಿರುವ ಆರು ಯಕ್ಷಗಾನ ಮೇಳಗಳ ನಿರ್ವಹಣೆಯನ್ನು ಏಲಂ ಪ್ರಕ್ರಿಯೆ ಮೂಲಕ ವಹಿಸುವಂತೆ ರಾಜ್ಯ ಮುಜರಾಯಿ ಆಯುಕ್ತರು ಆದೇಶ ನೀಡಿದ್ದಾರೆ. ಇದರೊಂದಿಗೆ ಕಟೀಲು ಯಕ್ಷಗಾನ ಮೇಳದ ತಿರುಗಾಟ ಮುಂದಿನ ದಿನಗಳಲ್ಲಿ ಸರ್ಕಾರದ ಸುಪರ್ದಿಯಲ್ಲಿ ನಡೆಯುವುದು ಬಹುತೇಕ ನಿಶ್ಚಿತಗೊಂಡಂತಾಗಿದೆ.

ಈ ಯಕ್ಷಗಾನ ಮೇಳಗಳ ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಹಣಕಾಸು ಸಂಗ್ರಹವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಅಧಿನಿಯಮದ ನಿಯಮ 40ಡಿ ರಂತೆ ಪಾರದರ್ಶಕವಾಗಿ ಸಾರ್ವಜನಿಕ ಏಲಂ ಮೂಲಕ ನಡೆಸಬೇಕು. ಇದಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರು, ಭಕ್ತಾದಿಗಳಿಗೆ ಸಮಸ್ಯೆ ಆಗಬಾರದು. ಧಾರ್ಮಿಕ ವಿಧಿವಿಧಾನಗಳಂತೆ ಪಾವಿತ್ರ್ಯ ಉಳಿಸಿಕೊಂಡು ಜಿಲ್ಲಾಧಿಕಾರಿಯವರ ಮೇಲ್ವಿಚಾರಣೆæಯಲ್ಲಿ ನಿರ್ವಹಣೆಯಾಗಬೇಕು ಎಂದು ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಆದೇಶದಲ್ಲಿ ತಿಳಿಸಿದ್ದಾರೆ.

ಕಾನೂನು ಬಾಹಿರ ಕೃತ್ಯ: ಕದ್ರಿ ಪೊಲೀಸ್‌ ಅಮಾನತು

ನಿಯಮ 69ಬಿ ಪ್ರಕಾರ ದೇವಸ್ಥಾನದ ಪರವಾಗಿ ಅದರ ಹೆಸರಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ, ಸೇವಾ ಸಮಿತಿ ಸೇವಾ ನಿಧಿ, ದಾನ ಇತ್ಯಾದಿಗಳನ್ನು ಸಂಗ್ರಹಿಸುವಂತಿಲ್ಲ. ಭಕ್ತಾದಿಗಳಿಂದ ಹಣ ಸಂಗ್ರಹಿಸುವುದು ಧಾರ್ಮಿಕ ಚಟುವಟಿಕೆಯೇ ಅಲ್ಲ. ಈ ಕೆಲಸಕ್ಕಾಗಿ ಖಾಸಗಿ ವ್ಯಕ್ತಿಯನ್ನು ನಿಯೋಜಿಸಿ, ಅವರೇ ದೊಡ್ಡ ಮೊತ್ತವನ್ನು ಸಂಗ್ರಹಿಸಿ ದೇವಸ್ಥಾನಕ್ಕೆ ಸಣ್ಣ ಮೊತ್ತವನ್ನಷ್ಟೇ ನೀಡುತ್ತಿರುವುದು ವರದಿಯಲ್ಲಿ ಉಲ್ಲೇಖಗೊಂಡಿದೆ.

ಇದಲ್ಲದೆ, ದೇವಸ್ಥಾನದ ಆನುವಂಶಿಕ ಟ್ರಸ್ಟಿಗಳು ಇದನ್ನು ಖಾಸಗಿ ಟ್ರಸ್ಟ್‌ ಹಾಗೂ ವ್ಯಕ್ತಿಗೆ ಒಪ್ಪಿಸಿರುವುದು ಸರಿಯಲ್ಲ. ಇದರಿಂದಾಗಿ ದೇವಸ್ಥಾನಕ್ಕೆ ಪ್ರತಿ ವರ್ಷ ಕೋಟ್ಯಂತರ ಮೊತ್ತ ನಷ್ಟವುಂಟಾಗಿದೆ ಎಂದು ಆಯುಕ್ತರು ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳೂರು ಮೀನು ಸಾರಿಗೆ ಉಪರಾಷ್ಟ್ರಪತಿ ಫಿದಾ..!

ತಕ್ಷಣ ಆದೇಶ ನೀಡದೆ ಹೋದರೆ ಈ ವರ್ಷವೂ ನವೆಂಬರ್‌ 2019ರಿಂದ ಮೇ 2020ರ ವರೆಗೆ ಮತ್ತೆ ಕೋಟ್ಯಂತರ ರು. ಮೊತ್ತ ಭಕ್ತಾದಿಗಳಿಂದ ದೇವಸ್ಥಾನಕ್ಕೆ ಹೋಗದೆ ಕೆಲವೇ ವ್ಯಕ್ತಿಗಳ ಕೈಗೆ ಹೋಗುವ ಅಪಾಯವಿದೆ. ಹಾಗಾಗಿ ಈ ಆದೇಶ ನೀಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಇನ್ನು ಮುಂದೆ ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲೇ ಕಟೀಲು ಮೇಳಗಳು ತಿರುಗಾಟ ನಡೆಸಬೇಕಾಗಿದೆ.

ಏಲಂಗೆ ಕಾರಣವಾದ ಕಲಾವಿದರ ಬದಲಾವಣೆ ವಿವಾದ

ಎರಡು ವರ್ಷ ಹಿಂದೆ ಕಟೀಲಿನ 6 ಯಕ್ಷಗಾನ ಮೇಳಗಳ ಕಲಾವಿದರ ಬದಲಾವಣೆಗೆ ಯಜಮಾನರು ನಿರ್ಧರಿಸಿರುವುದು ವಿವಾದಕ್ಕೆ ತಿರುಗಿ ಅದುವೇ ಈಗ ಏಲಂ ಹಂತಕ್ಕೆ ಆದೇಶವಾಗುವ ವರೆಗೆ ತಲುಪಿದೆ.

ಆರು ಮೇಳಗಳ ಪೈಕಿ ಕೇವಲ ಪ್ರಮುಖ ಕಲಾವಿದರು ಇರುವ ಒಂದೆರಡು ಮೇಳ ಮಾತ್ರ ಫೋಕಸ್‌ ಆಗುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮೇಳದ ಯಜಮಾನರು ಕಲಾವಿದರ ವರ್ಗಾಣೆಗೆ ಮುಂದಾಗಿದ್ದರು. ಪ್ರಮುಖ ಕಲಾವಿದರನ್ನು 6 ಮೇಳಗಳ ಒಳಗೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಅದೇ ಮೇಳದ ಕೆಲವು ಕಲಾವಿದರು ವಿರೋಧಿಸಿದ್ದರು. ಅಲ್ಲದೆ ಮೇಳದ ಯಜಮಾನರ ವಿರುದ್ಧ ಬಹಿರಂಗವಾಗಿ ಆಕ್ಷೇಪಗಳನ್ನು ಮಾಡಿದ್ದರು. ಮರು ವರ್ಷದ ತಿರುಗಾಟದ ವೇಳೆ ಬಂಡೆದ್ದ 8 ಮಂದಿ ಕಲಾವಿದರನ್ನು ಮರಳಿ ಕಟೀಲು ಮೇಳ ಸೇರ್ಪಡೆಗೆ ಮೇಳದ ಯಜಮಾನರು ಅವಕಾಶ ನೀಡಿರಲಿಲ್ಲ. ಇದರಿಂದ ನಿರುಪಾಯವಾಗಿ 7 ಮಂದಿ ಬಂಡಾಯ ಕಲಾವಿದರು ಬೇರೆ ಬೇರೆ ವೃತ್ತಿ ಮೇಳಕ್ಕೆ ಸೇರ್ಪಡೆಯಾಗಿ ತಿರುಗಾಟ ನಡೆಸಬೇಕಾಯಿತು.

ಕಟೀಲು ದೇವಸ್ಥಾನದ ಆಡಳಿತ ಮಂಡಳಿಯವರು ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿಹಾಗೂ ಶ್ರೀ ದುರ್ಗಾಪರಮೇಶ್ವರಿ ಯಕ್ಷಧರ್ಮ ಬೋಧಿನಿ ಚಾರಿಟಬಲ್‌ ಟ್ರಸ್ಟ್‌ ಜೊತೆಗೂಡಿ ಭಕ್ತರಿಂದ ಹಣ ಸಂಗ್ರಹಿಸಿ 6 ಮೇಳಗಳನ್ನು ನಿರ್ವಹಿಸುತ್ತಿದ್ದಾರೆ. 2006ರಿಂದಲೇ ಇದು ನಡೆಯುತ್ತಿದೆ ಎಂದು ಹಿಂದೆಯೇ ದೂರು ನೀಡಲಾಗಿತ್ತು. 2006ರಲ್ಲಿ ಟಿ.ಜಿ.ರಾಜಾರಾಮ ಭಟ್‌ ಎಂಬವರು ಈ ಕುರಿತು ಹೈಕೋರ್ಟ್‌ ಮೆಟ್ಟಿಲೇರಿ ಕೋರ್ಟ್‌ನಿಂದ ಮೇಳಗಳ ಏಲಂ ಮಾಡುವಂತೆ ಆದೇಶವೂ ಆಗಿತ್ತು. ಆದರೆ ಮುಜರಾಯಿ ಇಲಾಖೆ ಮಾತ್ರ 13 ವರ್ಷಗಳ ವರೆಗೂ ಅದನ್ನು ಪಾಲನೆ ಮಾಡಿರಲಿಲ್ಲ.

ರಾಜಾರಾಮ ಭಟ್‌ ಸೇರಿದಂತೆ 10ಕ್ಕೂ ಅಧಿಕ ಮಂದಿ ಭಕ್ತರು ಇತ್ತೀಚೆಗಿನ ವರೆಗೂ ನಿರಂತರವಾಗಿ ಮುಜರಾಯಿ ಇಲಾಖೆಯ ಗಮನಕ್ಕೆ ಇದನ್ನು ತರುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ 23-11-2018ರಲ್ಲಿ ಮುಜರಾಯಿ ಆಯುಕ್ತರು ಈ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರಿಗೆ ಆದೇಶಿಸಿದ್ದರು. ರವಿಕುಮಾರ್‌ ಶೆಟ್ಟಿಎನ್ನುವವರು ಹೈಕೋರ್ಟ್‌ ಮೊರೆ ಹೋಗಿ ನಿಯಮಾನುಸಾರ ಟೆಂಡರ್‌ ಮೂಲಕ ಯಕ್ಷಗಾನ ಮೇಳಗಳ ನಿರ್ವಹಣೆ ಗುತ್ತಿಗೆ ಕೊಡುವ ಪದ್ಧತಿ ಜಾರಿಗೆ ಅರ್ಜಿ ಹಾಕಿದ್ದರು. ಈ ಕುರಿತು ಒಂದು ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್‌ 13-8-2019ರಂದು ಆದೇಶಿಸಿತ್ತು. ಅಂದಿನ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರು 31-8-2019ರಂದು ಈ ಕುರಿತು ವಿಚಾರಣೆ ಮುಕ್ತಾಯಗೊಳಿಸಿ ಮುಜರಾಯಿ ಇಲಾಖೆಗೆ ವರದಿ ಸಲ್ಲಿಸಿದರು. ಈ ವರದಿಯಲ್ಲಿ ಕಟೀಲು ಯಕ್ಷಗಾನ ಮೇಳವನ್ನು ಏಲಂ ಮೂಲಕ ಅಥವಾ ದೇವಸ್ಥಾನದಿಂದಲೇ ನಡೆಸುವಂತೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದರು.

ಇಲ್ಲಿನತಕ ಸುಮಾರು 2042 ಇಸ್ವಿ ವರೆಗೆ ಆರು ಮೇಳಗಳ ಯಕ್ಷಗಾನ ಬಯಲಾಟ ಪ್ರದರ್ಶನಕ್ಕೆ ಮುಂಗಡ ಬುಕ್ಕಿಂಗ್‌ ಆಗಿದೆ ಎಂದು ಹೇಳಲಾಗಿದೆ. ಕರಾವಳಿಯ ಮನೆಗಳಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದ ಯಕ್ಷಗಾನವನ್ನು ಹರಕೆ ರೂಪದಲ್ಲಿ ಭಕ್ತರು ನಡೆಸುತ್ತಿದ್ದಾರೆ.

ಯಕ್ಷಗಾನ ಮೇಳದ ಏಲಂ ಇದೇ ಮೊದಲಲ್ಲ

ಕರಾವಳಿ ಪ್ರದೇಶದಲ್ಲಿ ಪ್ರಮುಖವಾಗಿ ತಿರುಗಾಟ ನಡೆಸುತ್ತಿರುವ ಯಕ್ಷಗಾನ ಮೇಳಗಳು 40ಕ್ಕೆ ತಲುಪಿದೆ. ಈ ಮೇಳಗಳಲ್ಲಿ ಬಯಲಾಟ ಹಾಗೂ ಟೆಂಟ್‌ನ ಮೇಳಗಳೂ ಇವೆ. ಎಲ್ಲ ಯಕ್ಷಗಾನ ಮೇಳಗಳೂ ದೇವಸ್ಥಾನ ಅಥವಾ ಖಾಸಗಿ ಯಜಮಾನಿಕೆಯ ಮೇಲ್ವಿಚಾರಣೆಯಲ್ಲಿ ತಿರುಗಾಟ ನಡೆಸುತ್ತಿವೆ. ಹಾಗೆಂದು ಯಕ್ಷಗಾನ ಮೇಳ ಏಲಂಗೆ ಒಳಗಾಗುವುದು ಇದೇ ಮೊದಲಲ್ಲ. ಈ ಹಿಂದೆಯೂ ಬಡಗುತಿಟ್ಟಿನ ಮಂದಾರ್ತಿ ಯಕ್ಷಗಾನ ಮೇಳ ಏಲಂಗೆ ಒಳಗಾಗಿತ್ತು. ಆದರೆ ನಿರೀಕ್ಷಿತ ರೀತಿಯಲ್ಲಿ ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ಈ ಮೇಳದ ಏಲಂನ್ನು ಸ್ಥಗಿತಗೊಳಿಸಿ, ಈಗ ದೇವಸ್ಥಾನದ ಸುಪರ್ದಿಯಲ್ಲಿ ತಿರುಗಾಟ ನಡೆಸುತ್ತಿದೆ.

ಈಗ ತೆಂಕುತಿಟ್ಟಿನ ಕಟೀಲಿನ 6 ಯಕ್ಷಗಾನ ಮೇಳಗಳ ಏಲಂಗೆ ದಿನಗಣನೆ ಆರಂಭವಾಗಿದೆ. ಈ ಆದೇಶದ ವಿರುದ್ಧ ತಡೆಯಾಜ್ಞೆ ತರಲು ಅವಕಾಶ ಇದೆ. ಇದಕ್ಕೆ ಹೈಕೋರ್ಟ್‌ನಲ್ಲಿ ದೂರುದಾರರು ಕೇವಿಯಟ್‌ ಕೂಡ ಸಲ್ಲಿಸಿದ್ದಾರೆ. ಹಾಗಾಗಿ ತಕ್ಷಣಕ್ಕೆ ಮೇಳದ ಏಲಂಗೆ ತಡೆಯಾಜ್ಞೆ ಸಿಗುಬಹುದೇ ಎಂಬುದು ಸ್ಪಷ್ಟವಿಲ್ಲ. ಈ ಮಧ್ಯೆ ಕಟೀಲು ಮೇಳದ ಯಜಮಾನರು ಹಾಗೂ ಟ್ರಸ್ಟ್‌ನ ಎಲ್ಲ ಸದಸ್ಯರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಾಗಿರುವುದರಿಂದ ಅವರು ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಇಲ್ಲ ಎಂದು ಜಿಲ್ಲಾಧಿಕಾರಿಗಳ ಶಿಫಾರಸಿನಲ್ಲಿ ತಿಳಿಸಲಾಗಿದೆ.

ನಾನು ಕಟೀಲು ತಾಯಿಯ ಸೇವಕ. ಮೇಳದಿಂದ ಹೊರಗೆ ಹಾಕಿದಾಗ ಕಟೀಲು ದೇವರಿಗೆ ಶರಣಾಗಿ ನ್ಯಾಯವನ್ನು ದೊರಕಿಸಿಕೊಡುವಂತೆ ಪ್ರಾರ್ಥಿಸಿದ್ದೆವು. ಈಗ ಅದು ಈಡೇರಿದೆ. ನಾವು ಮತ್ತೆ ಕಟೀಲು ಮೇಳದಲ್ಲೇ ತಿರುಗಾಟ ನಡೆಸಲು ಸಿದ್ಧರಿದ್ದೇವೆ ಎಂದು ಕಲಾವಿದ ಮಾಧವ ಕೊಳತ್ತಮಜಲು ಹೇಳಿದ್ದಾರೆ.

Follow Us:
Download App:
  • android
  • ios