ಮಂಗಳೂರು(ನ.03): ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ ಆರೋಪದಲ್ಲಿ ದಾಖಲೆ ಸಹಿತ ದೂರು ಬಂದ ಹಿನ್ನೆಲೆಯಲ್ಲಿ ಕದ್ರಿ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಪ್ರಶಾಂತ್‌ ಶೆಟ್ಟಿಅವರನ್ನು ಅಮಾನತುಗೊಳಿಸಿ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌. ಹರ್ಷ ಶನಿವಾರ ಆದೇಶ ಹೊರಡಿಸಿದ್ದಾರೆ.

ಕಂಕನಾಡಿ ಬೈಪಾಸ್‌ ರಸ್ತೆಯ ಎಂಪೋರಿಯಂ ಕಮರ್ಶಿಯಲ್‌ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿ ಎಂಬಾಲಿಷ್‌ ಪ್ರೊಫೆಶನಲ್‌ ಫ್ಯಾಮಿಲಿ ಸೆಲೂನ್‌ ಆ್ಯಂಡ್‌ ಸ್ಪಾ ಯುನಿಸೆಕ್ಸ್‌ಗೆ ಕದ್ರಿ ಠಾಣಾಧಿಕಾರಿ ಶಾಂತಾರಾಮ ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಸಂದರ್ಭ ಪ್ರಶಾಂತ್‌ ಶೆಟ್ಟಿಸ್ಪಾ ಸೆಂಟರ್‌ನ ಮಾಲೀಕರೊಂದಿಗೆ ಶಾಮೀಲಾಗಿ ಅಕ್ರಮ ಚಟುವಟಿಕೆ ನಡೆಸಲು ಸಹಕರಿಸಿರುವುದು ಗಮನಕ್ಕೆ ಬಂದಿತ್ತು.

'ರಾಜ್ಯ ಬಿಜೆಪಿ ಸರ್ಕಾರದಿಂದ ರಾಷ್ಟ್ರಪತಿಗೆ ಅವಮಾನ'..

ಈ ರೀತಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಸ್ಪಾ ಸೆಂಟರಿನೊಂದಿಗೆ ಶಾಮೀಲಾಗಿ ಪೊಲೀಸ್‌ ಇಲಾಖಾ ಘನತೆಗೆ ಕುಂದು ಉಂಟುಮಾಡಿದ್ದಾರೆ. ಸರ್ಕಾರಿ ನೌಕರರಿಗೆ ಸಲ್ಲದ ರೀತಿಯಲ್ಲಿ ವರ್ತಿಸಿರುವ ಪ್ರಶಾಂತ್‌ ಶೆಟ್ಟಿಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ. ಅವರಿಂದ ಸರ್ಕಾರಿ ಸೊತ್ತುಗಳನ್ನು ವಶಪಡಿಸಿಕೊಳ್ಳುವಂತೆ ಠಾಣಾ ನಿರೀಕ್ಷಕರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.

ಮಂಗಳೂರು ಮೀನು ಸಾರಿಗೆ ಉಪರಾಷ್ಟ್ರಪತಿ ಫಿದಾ..!

ಅಮಾನತಿನ ಅವಧಿಯಲ್ಲಿ ಕೆ.ಸಿ.ಎಸ್‌.ಆರ್‌. ನಿಯಮ 104(1)ರ ಅನ್ವಯ ಕದ್ರಿ ಠಾಣೆಯ ಪೊಲೀಸ್‌ ನಿರೀಕ್ಷಕರ ಅನುಮತಿ ಪಡೆಯದೆ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗಬಾರದು. ಪ್ರತಿ ದಿನ ಠಾಣೆಗೆಯಲ್ಲಿ ರೋಲ್‌ಕಾಲ್‌ಗೆ ಹಾಜರಾಗಬೇಕು. ಅಮಾನತಿನ ಅವಧಿಯಲ್ಲಿ ಯಾವುದೇ ಖಾಸಗಿ ಅಥವಾ ಇನ್ಯಾವುದೇ ಉದ್ಯೋಗ, ವ್ಯಾಪಾರದಲ್ಲಿ ತೊಡಗಬಾರದು. ಈ ಬಗ್ಗೆ ಪ್ರತಿ ತಿಂಗಳು ದೃಢೀಕರಣ ಪತ್ರ ನೀಡಿ ನಿಯಮದಂತೆ ದೊರೆಯುವ ಜೀವನಾಧಾರ ಭತ್ಯೆ ಪಡೆದುಕೊಳ್ಳಲು ಅರ್ಹರಿರುತ್ತಾರೆ. ಇವರು ಸರ್ಕಾರಿ ವಸತಿಗೃಹದಲ್ಲಿ ವಾಸವಾಗಿದ್ದರೆ. ಅಮಾನತು ಹೊಂದಿದ ದಿನಾಂಕದಿಂದ ಬಾಡಿಗೆ ಮಾಫಿ ಸೌಲಭ್ಯ ಪಡೆಯಲು ಅರ್ಹತೆ ಹೊಂದಿಲ್ಲ ಎಂದು ಅಮಾನತು ಪತ್ರದಲ್ಲಿ ಸೂಚನೆ ನೀಡಿದ್ದಾರೆ.