ಮಂಗಳೂರು(ನ.07): ಅಂತಾರಾಜ್ಯ ಗಾಂಜಾ ಮಾರಾಟ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದು, 10 ಕೆಜಿ ಗಾಂಜಾ ವಶಪಡಿಸಿರುವ ಹಿನ್ನೆಲೆಯಲ್ಲಿ ಕಮಿಷನರ್‌ ಐಪಿಎಸ್ ಹರ್ಷ ಶಿಕ್ಷಣ ಸಂಸ್ಥೆಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳು ಕ್ರಮ ಕೈಗೊಳ್ಳದೇ ಇದ್ದಲ್ಲಿ ಪೊಲೀಸ್ ಇಲಾಖೆ ನೇರ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಗಾಂಜಾ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸ್‌ ಇಲಾಖೆಗೆ ನಿಖರ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೂರು ಬಾರಿ ಶಿಕ್ಷಣ ಸಂಸ್ಥೆಗಳಿಗೆ ಸ್ವಯಂ ಆಗಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಈಗ ಅಂತಿಮ ಸೂಚನೆ ನೀಡುತ್ತಿದ್ದು, ನೋಟಿಸ್‌ ಕೂಡ ಜಾರಿಗೊಳಿಸಲಾಗುವುದು ಎಂದಿದ್ದಾರೆ.

ಅಂತಾರಾಜ್ಯ ಗಾಂಜಾ ಸಾಗಾಟ ಜಾಲ ಬೇಧ: 10 ಕೆ.ಜಿ. ಗಾಂಜಾ ವಶ

ಈ ಬಗ್ಗೆ ಶಿಕ್ಷಣ ಇಲಾಖೆ, ಜಿಲ್ಲಾಡಳಿತಕ್ಕೂ ಮಾಹಿತಿ ನೀಡಲಾಗುವುದು. ಇದರ ಹೊರತೂ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ನಡೆಯುವ ಅಕ್ರಮ ಗಾಂಜಾ ಚಟುವಟಿಕೆ ಮಟ್ಟಹಾಕಲು ಮುಂದಾಗದಿದ್ದರೆ ನೇರವಾಗಿ ನ್ಯಾಯಾಲಯದ ಅನುಮತಿ ಪಡೆದು ಪೊಲೀಸ್‌ ಇಲಾಖೆ ಕಾರ್ಯಾಚರಣೆಗೆ ಇಳಿಯಲಿದೆ ಎಂದು ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಹೇಳಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಪಾರ್ಕಿಂಗ್‌ ಮಾಡುವ ವಾಹನಗಳಲ್ಲಿ, ಹಾಸ್ಟೇಲ್‌, ಕ್ಯಾಂಟಿನ್‌ ಹಾಗೂ ವಿಶ್ರಾಂತಿ ಕೊಠಡಿಗಳಲ್ಲಿ ಹೀಗೆ ಗಾಂಜಾ ಹೊಂದಿರುವ ಬಗೆಗ ಖಚಿತ ಮಾಹಿತಿ ದೊರೆತಿದೆ. ಪೊಲೀಸರು ನೇರವಾಗಿ ದಾಳಿ ನಡೆಸಿ ಗಾಂಜಾ ಪತ್ತೆಯಾದರೆ, ಸಂಬಂಧಪಟ್ಟವರ ವಿರುದ್ಧ ಕೇಸು ದಾಖಲಿಸಲಾಗುತ್ತದೆ. ಇದರಿಂದ ಶಿಕ್ಷಣ ಸಂಸ್ಥೆಯ ಹೆಸರಿಗೆ ಕುಂದುಂಟಾಗಿದೆ ಎಂದು ಅವಲತ್ತುಕೊಂಡರೆ ಪ್ರಯೋಜನವಿಲ್ಲ. ಅದರ ಬದಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೇ ಈ ಬಗ್ಗೆ ಗಮನ ಹರಿಸಿದರೆ ಉತ್ತಮ ಎಂಬ ಸಲಹೆಯನ್ನು ಕಮಿಷನರ್‌ ನೀಡಿದರು.

ಪಾರ್ಸೆಲ್‌ ರವಾನೆ ಎಚ್ಚರ:

ಬಸ್‌ ಅಥವಾ ಯಾವುದೇ ವಾಹನಗಳು ಪಾರ್ಸೆಲ್‌ ಸ್ವೀಕರಿಸಿ ಸಾಗಿಸುವಾಗ ಎಚ್ಚರ ವಹಿಸಬೇಕು. ಅದೇ ರೀತಿ ಹೂವುಗಳನ್ನು ಮಾರಾಟ ಮಾಡುವ ಸಂದರ್ಭಗಳಲ್ಲೂ ಮಾದಕದ್ರವ್ಯಗಳನ್ನು ತುರುಕಿಸಿ ಪೂರೈಸುವುದು ಅರಿವಿಗೆ ಬಂದಿದೆ. ಆದ್ದರಿಂದ ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಕಮಿಷನರ್‌ ಹೇಳಿದರು.